ಬೆಂಗಳೂರು-ಮುಡಾ ಮಹಾಹಗರಣ ಸಂಬಂಧ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರು ನೀಡಿದ್ದ ಅನುಮತಿ ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿ ವಜಾಗೊಂಡಿದ್ದು ಅವರು ತಾವು ಮಾಡಿದ ಅಕ್ರಮದ ತಪ್ಪಿಗೆ,ತಪ್ಪು ಮುಚ್ಚಿಕೊಳ್ಳಲು ಸರ್ಕಾರಿ ಯಂತ್ರ,ಹಣ,ಅಧಿಕಾರ ದುರುಪಯೋಗ ಮಾಡಿಕೊಂಡ ಕಾರಣದಿಂದ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯದೇ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸುವ ಮೂಲಕ ಅಳಿದುಳಿದ ಮಾನ ಕಾಪಾಡಿಕೊಳ್ಳಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಚಿ.ನಾ.ರಾಮು ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು,ಮುಖ್ಯಮಂತ್ರಿಗಳು ಬಡ ದಲಿತರು ಸ್ವಾತಂತ್ರ್ಯ ಪೂರ್ವದಲ್ಲಿ 1 ರೂಪಾಯಿ ಕೊಟ್ಟು ಹರಾಜಿನಲ್ಲಿ ಖರೀದಿಸಿದ ಭೂಮಿಯನ್ನು ಉಪಾಯವಾಗಿ ಲೂಟಿ ಮಾಡಿದ್ದಾರೆ.ಸತ್ತ ದಲಿತರ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಿ ಚಿಲ್ಲರೆ ಕಾಸು ಕೊಟ್ಟು ಆ ಜಮೀನು ತನ್ನ ಬಾಮೈದನ ಹೆಸರಿಗೆ ಅಕ್ರಮ ನೋಂದಣಿ ಮಾಡಿಸಿ,ಕುತಂತ್ರ ಬುದ್ದಿ ಪ್ರಯೋಗಿಸಿ ತಮ್ಮ ಪತ್ನಿ ಹೆಸರಿಗೆ ಗಿಫ್ಟ್ ಡೀಡ್ ಮಾಡಿಸಿಕೊಂಡು ಮೂಡಾ ಭೂಸ್ವಾಧೀನಕ್ಕೆ ಬದಲಿಗೆ ಪ್ರತಿಷ್ಠಿತ ಜಾಗದಲ್ಲಿ ನಿವೇಶನ ನೀಡುವಂತೆ ಒತ್ತಡ ಹಾಕಿ,ಅಕ್ರಮವಾಗಿ 50-60 ಕೋಟಿ ಪರಿಹಾರ ಕೋರಿದ ಪತ್ನಿ ಬೆನ್ನ ಹಿಂದೆ ನಿಂತಿದ್ದು ಬಟಾಬಯಲಾಗಿದೆ ಎಂದು ಕುಟುಕಿದ್ದಾರೆ.
,
ಮುಖ್ಯಮಂತ್ರಿ ಅವರು “ಮೂಡಾಗೆ ನಾವು ಯಾವ ಪತ್ರ ಬರೆದೇ ಇಲ್ಲ.ಇಂತಲ್ಲೇ ನಿವೇಶನ ಬೇಕು ಅಂತ ಕೇಳಿಲ್ಲ” ಅಂದಿದ್ದರು.ಆದರೆ ಅವರ ಪತ್ನಿ ದೇವನೂರು ಬಡಾವಣೆ ಹೊರತಾದ ಸಮಾನಾಂತರ ಬಡಾವಣೆ (ವಿಜಯನಗರ) ಯಲ್ಲಿ ನಿವೇಶನ ಕೇಳಿರುವ ದಾಖಲೆ ಬಿಡುಗಡೆ ಆಗಿತ್ತು.ವೈಟ್ನರ್ ಹಾಕಿರುವ ಪತ್ರ,ದಾಖಲೆ ತಿದ್ದಿ ತಿರುಚುವ ಮೂಲಕ ಲೂಟಿ ಕುರುಹು ಅಳಿಸುವ ಕೈಂಕರ್ಯ ಮಾಡಿದ್ದಕ್ಕಾಗಿ ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕು.
ಎಲ್ಲಕ್ಕಿಂತ ಪ್ರಮುಖವಾಗಿ ಸರ್ಕಾರಿ ಸಂಸ್ಥೆಯಾದ ಮೂಡಾ ಹಗರಣ ಮುಚ್ಚಲು ಸರ್ಕಾರದ ಹಣವನ್ನೇ ಬಳಸಿದ್ದಕ್ಕಾಗಿ ರಾಜೀನಾಮೆ ಕೊಡಬೇಕು.ಮುಖ್ಯಮಂತ್ರಿ ಅವರು ತಮ್ಮ ಪರ ಹೈಕೋರ್ಟ್ನನಲ್ಲಿ ವಾದಿಸಲು ಕಪಿಲ್ ಸಿಬಲ್, ಅಭಿಷೇಕ್ ಮನುಸಿಂಘ್ವಿ ಮತ್ತಿತರರಂತಹ ಹೈಪ್ರೂಪೈಲ್ ವಕೀಲರಿಗೆ ಕೋಟಿ ಕೋಟಿ ಸರ್ಕಾರದ ಹಣ ಕೊಟ್ಟು ಕರೆಸಿ ಹಗರಣ ಮುಚ್ಚಿಕೊಳ್ಳಲು ಖಜಾನೆ ಹಣ ಬಳಸಿಕೊಂಡಿದ್ದಾರೆ.
ಮೂಡಾ ಹಗರಣದಿಂದ ಪಾರಾಗಲು ದಾಖಲೆ ತಿದ್ದುವುದು,ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಮತ್ತು ದೂರುದಾರರನ್ನು ಬೆದರಿಸಲು ಸರ್ಕಾರದ ಯಂತ್ರ ಬಳಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪವನ್ನು ಚಿ ನಾ ರಾಮು ಮಾಡಿದ್ದಾರೆ.
ತಮ್ಮ ಮೇಲಿನ ವೈಯಕ್ತಿಕ ಆರೋಪದಿಂದ ಹೊರಬರಲು ಇಡೀ ಸಚಿವ ಸಂಪುಟವನ್ನು ಬಳಸಿಕೊಂಡಿದ್ದು, ಕಾನೂನು ಪ್ರಕಾರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರು ಎಂಬ ಕಾರಣಕ್ಕೆ ಒಬ್ಬ ಪರಿಶಿಷ್ಟ ಸಮುದಾಯದ ರಾಜ್ಯಪಾಲರ ವಿರುದ್ದ ಪ್ರತಿಭಟನೆ, ಟೀಕೆ, ಮಾನಹಾನಿಗೆ ಕುಮ್ಮಕ್ಕು ಕೊಟ್ಟಿದ್ದಾರೆ.
ಈಗ ಹೈಕೋರ್ಟ್ ರಾಜ್ಯಪಾಲರ ನಿರ್ಣಯ ಒಪ್ಪಿರುವುದರಿಂದ ಅವರ ವಿರುದ್ಧ ಟೀಕೆ, ಸುಳ್ಳು ಆರೋಪ ಮಾಡಿದ್ದಕ್ಕಾಗಿ ಸಿ ಎಂ ಸ್ಥಾನದ ಜೊತೆಗೆ ಶಾಸಕ ಸ್ಥಾನವನ್ನು ತ್ಯಜಿಸಬೇಕು ಎಂದು ಚಿ ನಾ ರಾಮು ಆಗ್ರಹಿಸಿದ್ದಾರೆ.
————ಶಶಿಕುಮಾರ್ ಕೆಲ್ಲೂರು