ಚಿಕ್ಕಮಗಳೂರು-ಕನ್ನಡ ಸಾಹಿತ್ಯ ಲೋಕಕ್ಕೆ ‘ಜಿ.ಸೂರಿ’ಯವರ ಕೊಡುಗೆ ಅಪಾರ-ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಕ್ಯಾತನಬೀಡು ಅಭಿಮತ

ಚಿಕ್ಕಮಗಳೂರು-ಸಾಹಿತ್ಯಲೋಕಕ್ಕೆ ತಮ್ಮದೇ ಶೈಲಿಯಲ್ಲಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುವ ಅಜ್ಜಂಪುರ ಜಿ.ಸೂರಿಯವರು ಜಿಲ್ಲೆಕಂಡ ಅತ್ಯುತ್ತಮ ಕನ್ನಡ ಸಾಹಿತಿಗಳು ಹಾಗೂ ಸಾಹಿತ್ಯಪ್ರೇಮಿಗಳು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಕ್ಯಾತನಬೀಡು ಹೇಳಿದರು.

ನಗರದ ಎನ್.ಎಂ.ಸಿ. ವೃತ್ತದ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ಅಜ್ಜಂಪುರ ಜಿ.ಸೂರಿ ಸಾಂಸ್ಕೃತಿಕ ಪ್ರತಿಷ್ಟಾನದಿಂದ ಆಯೋಜಿಸಿದ್ಧ ಸಾಹಿತಿ ಅಜ್ಜಂಪುರ ಜಿ.ಸೂರಿ ಅವರ 87ನೇ ಜನ್ಮದಿನ ನೆನಪಿಗಾಗಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ‘ಬದುಕು-ಬರಹ’ ಕುರಿತ ಕಾರ್ಯಕ್ರಮದಲ್ಲಿ ವಿಶೇಷ ಉಪ ನ್ಯಾಸ ನೀಡಿದರು.

ಇತ್ತೀಚಿನ ಲೇಖಕರು ಸಾಹಿತ್ಯಗಂಧ ಅರಿಯದೇ ಕೆಲವೇ ಪುಸ್ತಕಗಳನ್ನು ರಚಿಸಿ ಬೀಗುತ್ತಿದ್ದಾರೆ. ಆದರೆ ಸೂರಿಯವರು ಸುಮಾರು 150ಪುಸ್ತಕಗಳನ್ನು ಸ್ವಯಂ ರಚಿಸಿದರೂ ಯಾವುದೇ ಅಹಂವಿಲ್ಲದೇ ವಿನಯದಿoದ ನಡೆದುಕೊಂಡವರು. ಅಲ್ಲದೇ ಮಕ್ಕಳು, ಹಿರಿಯರೊಂದಿಗಿನ ಒಡನಾಟವು ಗೌರವದಿಂದ ಕೂಡಿರುತ್ತಿತ್ತು ಎಂದು ತಿಳಿಸಿದರು.

ಮೂಲ ಆಂಧ್ರಪದೇಶದ ರಾಜ್ಯದವರಾದ ಜಿ.ಸೂರಿ ಕಾಲಕ್ರಮೇಣ ಅಜ್ಜಂಪುರದಲ್ಲಿ ನೆಲೆಯೂರಿದರು.ನೌಕರಿ ಜೊತೆಗೆ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದರು. ಮಾತೃಭಾಷೆ ತೆಲುಗಾದರೂ ವಿಶೇಷವಾಗಿ ಕನ್ನಡ ಭಾಷೆಗೆ ಎಲ್ಲಿಲ್ಲದೇ ಪ್ರೀತಿ, ಬಾಂಧವ್ಯ ಗಟ್ಟಿಯಾಗಿತ್ತು. ಅಲ್ಲದೇ ತೆಲುಗಿನ ಅನೇಕ ವಿಶೇಷ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು ಎಂದರು.

ಜಿಲ್ಲೆಯಲ್ಲಿ ಕಸಾಪ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಜಿ.ಸೂರಿ ಹೋಬಳಿ ಮಟ್ಟದಲ್ಲಿ ಮೊದಲ ಘಟಕ ಸ್ಥಾಪಿಸಿದ ಕೀರ್ತಿ ಅವರಿಗಿದೆ. ಯಾವುದೇ ಜವಾಬ್ದಾರಿಯನ್ನು ಕಾಟಾಚಾರಕ್ಕೆ ಮಾಡದೇ, ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ ಅವರಲ್ಲಿತ್ತು. ಸಾಹಿತ್ಯಕ್ಷೇತ್ರವಲ್ಲದೇ ಉತ್ತಮ ವಾಗ್ಮಿಯಾಗಿದ್ದರು. ಮಗುವಿನ ಮನಸ್ಸಿನ ಅವರು ಕಲ್ಮಶವಿಲ್ಲದವರು, ಶತೃವಿಗೂ ಒಳ್ಳೆಯದನ್ನೇ ಬಯಸುವ ಗುಣ ಹೊಂದಿದ್ದರು ಎಂದು ಹೇಳಿದರು.

ಆ ಮಹನೀಯರ ಕಾಲಘಟ್ಟದಲ್ಲಿ ರಾಜ್ಯದ ಪ್ರತಿಷ್ಟಿತ ಪತ್ರಿಕೆಗಳು, ಸುಧಾ ತರಂಗಳಲ್ಲಿ ಕಥೆ, ಕಾದಂಬರಿ, ಕವನ ಪ್ರಕಟಗೊಂಡು ಜನ ಮನ್ನಣೆ ಗಳಿಸಿದ್ದರು. ಅಲ್ಲದೇ ಓದುಗರರಿಗೆ ಜಿ.ಸೂರಿಯವರ ಕಾದಂಬರಿಗಳನ್ನು ಓದುವುದೇ ವಿಶೇಷವಾಗಿತ್ತು. ಇಷ್ಟೆಲ್ಲಾ ಸಾಧನೆಗೈದ ಅವರಿಗೆ ಜಿಲ್ಲೆಯಲ್ಲಿ ಹೆಚ್ಚು ಪ್ರೋತ್ಸಾಹ ಸಿಗುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಹಿತಿ ಡಿ.ಎಂ.ಮoಜುನಾಥಸ್ವಾಮಿ ಮಾತನಾಡಿ ಸಾಹಿತ್ಯ ಚಟುವಟಿಕೆ ಅಲ್ಲದೇ ನಾಟಿವೈದ್ಯರಾಗಿಯು ಪರಿಣಿತಿಯನ್ನು ಜಿ.ಸೂರಿ ಹೊಂದಿದ್ದರು. ಜೊತೆಗೆ ಇಡೀ ಕುಟುಂಬವೇ ಭುವನೇಶ್ವರಿ ಸೇವೆಯಲ್ಲಿ ಇಂದಿಗೂ ತೊಡಗಿರುವುದು ಸಾಮಾನ್ಯವಲ್ಲ. ಕಲೆ, ಸಾಹಿತ್ಯ, ಕಾದಂಬರಿ, ಕಥೆಗಳು ರಚಿಸುವಲ್ಲಿ ಅನನ್ಯ ಸೇವೆ ನೀಡಿದವರು ಎಂದು ಹೇಳಿದರು.

ಕಸಾಪ ಅಥವಾ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ಪುಸ್ತಕ ಕೊಡುವ ಸಂಸ್ಕೃತಿಗೆ ಅಡಿಪಾಯ ಹಾಕಿದ ಜಿ.ಸೂರಿ, ಊಹೆಗೂ ನಿಲುಕದಂಥ ವಿಶಾಲವಾದ ಮಾನವೀಯ ಗುಣಗಳನ್ನು ಬೆಳೆಸಿ ಕೊಂಡಿದ್ದರು. ಆ ಸಾಲಿನಲ್ಲಿ ಅವರ ಪುತ್ರ ಸೂರಿ ಶ್ರೀನಿವಾಸ್ ಕಸಾಪ ಅಧ್ಯಕ್ಷರಾಗಿ ಅತಿಹೆಚ್ಚು ದತ್ತಿ, ಉಪನ್ಯಾ ಸ ಕಾರ್ಯಕ್ರಮ ನಡೆಸಿ ತಂದೆಯ ಹೆಸರು ಬೆಳಗಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ,ಸೂರಿಯವರು ಕಾಲೇಜಿನ ಹಲವಾರು ಯುವಬರಹಗಾರರಿಗೆ ಸಾಹಿತ್ಯಾತ್ಮಕ ಒಲವು ಮೂಡಿಸಿ ಆತ್ಮವಿಶ್ವಾಸ ತುಂಬಿದ್ದರು. ಸರಳ, ಸಜ್ಜನಿಕೆ ಹಾಗೂ ನೇರ ನಡೆ, ನುಡಿ ಹೊಂದಿದ್ದರು. ಟೀಕೆ, ಟಿಪ್ಪಣಿಗಳಿಗೆ ಅವರ ಸ್ವರತರಂಗದಲ್ಲಿ ಸ್ಥಳವಿರಲಿಲ್ಲ. ಒಟ್ಟಾರೆ ಮುಗ್ದ ಮನಸ್ಸಿನ ಹಾಗೂ ಯುವಲೇಖಕರ ಪ್ರಿಯವಾದವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಜ್ಜಂಪುರ ಜಿ.ಸೂರಿ ಸಾಂಸ್ಕೃತಿಕ ಪ್ರತಿಷ್ಟಾನ ಅಧ್ಯಕ್ಷ ಪ್ರಭು, ಕಸಾಪ ತಾಲ್ಲೂಕು ಅಧ್ಯಕ್ಷ ದಯಾನಂದ್ ಮಾವಿಕೆರೆ, ಮಾಜಿ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ದೇವಾಂಗ ಸಂಘದ ನಗ ರಾಧ್ಯಕ್ಷ ಭಗವತಿ ಹರೀಶ್, ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷಣ್, ಉದ್ಯಮಿ ಗಳಾದ ಕಮಲ್‌ಕುಮಾರ್, ಶಾಂತಿಲಾಲ್, ಕಸಾಪ ನಗರಾಧ್ಯಕ್ಷ ಸಚಿನ್‌ಸಿಂಗ್, ಮುಖಂಡರುಗಳಾದ ಶಶಿ ಧರ್, ಅಶೋಕ್‌ಕುಮಾರ್, ಕುರುವಂಗಿ ವೆಂಕಟೇಶ್, ಜಯಂತಿ ಮತ್ತಿತರರು ಉಪಸ್ಥಿತರಿದ್ದರು.

——-ವರದಿ-ಸುರೇಶ್

Leave a Reply

Your email address will not be published. Required fields are marked *

× How can I help you?