ಚಿಕ್ಕಮಗಳೂರು-ಅಕ್ಕಮಹಾದೇವಿ-ಜಯಂತಿ-ಕನ್ನಡದ-ಮೊದಲ- ಕವಯತ್ರಿ-ಅಕ್ಕ-ಆಶಾಮಲ್ಲೇಶ್

ಚಿಕ್ಕಮಗಳೂರು– ಕನ್ನಡದ ಮೊದಲ ಕವಯತ್ರಿ ಅಕ್ಕಮಹಾದೇವಿ ಮಹಿಳಾ ಸಂಕುಲಕ್ಕೆ ಆದರ್ಶಪ್ರಾಯ ಎಂದು ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಆಶಾಮಲ್ಲೇಶ್ ನುಡಿದರು.

ಅಕ್ಕಮಹಾದೇವಿ ಮಹಿಳಾ ಸಂಘದ ರತ್ನಗಿರಿರಸ್ತೆ ಮತ್ತು ರಾಮನಹಳ್ಳಿಯ ಶರಣೆ ಮುಕ್ತಾಯಕ್ಕ ತಂಡ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ಆಯೋಜಿಸಿದ್ದ ‘ಅಕ್ಕಮಹಾದೇವಿ ಜಯಂತಿ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ನಿನ್ನೆ ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ಉಡುತಡಿ ಗ್ರಾಮದಲ್ಲಿ ನಿರ್ಮಲಶೆಟ್ಟಿ ಮತ್ತು ಸುಮತಿ ಎಂಬ ಶಿವಭಕ್ತರ ಮಗಳಾಗಿ ಮಹಾದೇವಿ ಜನಿಸಿದರು. ಬಾಲ್ಯದಲ್ಲೆ ಭಕ್ತಿಯ ಪರಾಕಾಷ್ಠೆಯಲ್ಲಿದ್ದ ಬಾಲಕಿ ಚನ್ನಮಲ್ಲಿಕಾರ್ಜುನನೆ ಸರ್ವಸ್ವ ಎಂದು ಭಾವಿಸಿದಾಕೆ. ಅಸಾಧಾರಣ ಸುಂದರಿಯಾದರೂ ಲೌಕಿಕ ವಿಚಾರಗಳ ಬಗ್ಗೆ ಆಸಕ್ತಿ ತಾಳದೆ ಆಧ್ಯಾತ್ಮದ ಬಗ್ಗೆ ಅಪಾರ ಒಲವು ತಾಳಿದವಳು.

ಸುಖ-ಭೋಗವನ್ನು ತೊರೆದು ಅನುಭವ ಮಂಟಪ ಸೇರಿ ಪುರುಷರಿಗೆ ಸಮನಾಗಿ ಭಕ್ತಿ ಸಾಧನೆ ಮಾಡಿ ಹೆಸರಾದವಳು. ಚನ್ನಮಲ್ಲಿಕಾರ್ಜುನ ನಾಮಾಂಕಿತದಲ್ಲಿ 430 ವಚನಗಳನ್ನು ರಚಿಸಿ ಕನ್ನಡದ ಪ್ರಪ್ರಥಮ ಮಹಿಳಾ ಕವಯತ್ರಿ ಎನ್ನಿಸಿಕೊಂಡವಳು. ಅನುಭಾವದ ಮೂಸೆಯಲ್ಲಿ ಬಂದ ಅಕ್ಕನ ವಚನಗಳು ಇಂದಿಗೂ ಪ್ರಸ್ತುತ ಎಂದ ಆಶಾಮಲ್ಲೇಶ್, ಸ್ತ್ರೀ ಸಮಾನತೆ, ಕಂದಾಚಾರ. ಮೌಢ್ಯತೆ ವಿರುದ್ಧ ಧ್ವನಿಯೆತ್ತಿದಾಕೆ ಎಂದರು.

ಬೆಂಗಳೂರಿನ ಸ್ತ್ರೀ ರೋಗತಜ್ಞೆ ಡಾ||ದೀಪ್ತಿಚೇತನ್ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿ, ದೈಹಿಕ ಮತ್ತು ಮಾನಸಿಕವಾಗಿ ಹೆಣ್ಣುಮಕ್ಕಳೆ ಹೆಚ್ಚು ಬಲಶಾಲಿಗಳೆಂಬುದು ಸಾಬೀತಾಗಿದೆ. ಹೆಣ್ಣು ಭ್ರೂಣಗಳು ಅಧಿಕ ಪ್ರಮಾಣದಲ್ಲಿ ಸುಸ್ಥಿತಿಯಲ್ಲಿರುತ್ತವೆ. ಋತುಚಕ್ರ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸ್ತ್ರೀ ಯರಿಗೆ ಅನೇಕ ತೊಂದರೆಗಳು ಸಹಜ ಎಂದರು.

ಗರ್ಭಕೋಶದ ಕ್ಯಾನ್ಸರ್, ಸ್ತನಕ್ಯಾನ್ಸರ್‌ನಿಂದ ಮಹಿಳೆ ಬಳಲುವುದು ಅಧಿಕ. ಸಾಮಾನ್ಯವಾಗಿ 45ವರ್ಷಗಳ ನಂತರ ವಿವಿಧ ತೊಂದರೆಗಳು ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್ ನಿಯಂತ್ರಿಸುವ ಲಸಿಕೆಯನ್ನು ಇತ್ತೀಚಿನ ವರ್ಷಗಳಲ್ಲಿ ಕಂಡುಹಿಡಿಯಲಾಗಿದೆ. ಸಕಾಲದಲ್ಲಿ ಎರಡು ವ್ಯಾಕ್ಸಿನ್‌ಗಳನ್ನು ಹಾಕಿಸಿಕೊಳ್ಳುವ ಮೂಲಕ ಕ್ಯಾನ್ಸರ್ ಕಾಯಿಲೆಯಿಂದ ದೂರ ಉಳಿಯಬಹುದೆಂದ ಡಾ.ದೀಪ್ತಿ, ಮಾನಸಿಕ ಹಾಗೂ ದೈಹಿಕ ಆರೋಗ್ಯಪಾಲನೆ ಕಡೆಗೆ ಸ್ತ್ರೀ ಯರು ಹೆಚ್ಚಿನ ಗಮನ ತೋರಬೇಕೆಂದರು.

ಅಕ್ಕಮಹಾದೇವಿ ಹೆಸರಿನಲ್ಲಿ ಮಹಿಳೆಯರನ್ನು ಸಂಘಟಿಸಿ ಅವರಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸುಧಾರಣೆ ಕುರಿತಂತೆ ಜಾಗೃತಿ ಮೂಡಿಸುತ್ತಿರುವ ಕಾರ‍್ಯ ಸ್ತುತ್ಯಾರ್ಹವೆಂದ ಡಾ.ದೀಪ್ತಿ, ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಮುಕ್ತಾಯಕ ತಂಡದ ಮುಖಂಡೆ ಈಶ್ವರಿ ಹುಲಿಯಪ್ಪ ಅಕ್ಕನವಚನಗಳನ್ನು ಪ್ರಸ್ತುತಪಡಿಸಿದರು.

ನಿರ್ದೇಶಕಿ ಭಾಗ್ಯಮಹೇಶ್ ಪ್ರಾಸ್ತಾವಿಸಿದ್ದು, ಮಂಗಳಾ ಸದಾಶಿವ ಸ್ವಾಗತಿಸಿ, ರಮ್ಯಸತೀಶ್ ವಂದಿಸಿದರು. ಪಾರ್ವತಮ್ಮ ತಂಡ ಪ್ರಾರ್ಥಿಸಿದ್ದು, ರಾಜೇಶ ಪರಿಚಯಿಸಿದರು. ಪ್ರತಿಮಾ, ಲೀಲಾ ಮತ್ತು ಶೈಲಾ ತಂಡ ನಾಡಗೀತೆ ಹಾಡಿದರು.

ಈ ವೇಳೆ ಕಾರ‍್ಯದರ್ಶಿ ಆಶಾ ಹೇಮಂತ್, ಖಜಾಂಚಿ ಪಾರ್ವತಿ ಬಸವರಾಜು, ಉಪಾಧ್ಯಕ್ಷೆ ಸುಧಾ ರಾಜಶೇಖರ್, ಸಹಕಾರ‍್ಯದರ್ಶಿ ಮಧುಶಿವಕುಮಾರ್, ಸಂಘಟನಾ ಕಾರ‍್ಯದರ್ಶಿ ಮಂಜುಳಾ, ನಿರ್ದೇಶಕರುಗಳಾದ ವಿಮಲಾ, ವೀಣಾ ಮತ್ತಿತರರು ವೇದಿಕೆಯಲ್ಲಿದ್ದರು.

ಸಾಂಸ್ಕೃತಿ ಕಾರ‍್ಯಕ್ರಮ ಗಮನ ಸೆಳೆದಿದ್ದು, ವಿವಿಧ ಆಟೋಟ ಸ್ಪರ್ಧಾವಿಜೇತರಿಗೆ ಈಶ್ವರಿ ಹುಲಿಯಪ್ಪ ಬಹುಮಾನ ವಿತರಿಸಿದರು.

Leave a Reply

Your email address will not be published. Required fields are marked *

× How can I help you?