ಚಿಕ್ಕಮಗಳೂರು-ರಾಷ್ಟ್ರ ಸ್ವಾತಂತ್ರ್ಯಗೊಂಡು ಏಳು ದಶಕ ಪೂರೈಸಿದ ಮೇಲೆ ಕಾಂಗ್ರೆಸ್ ಸಂವಿಧಾನ ಹಾಗೂ ಅಂಬೇಡ್ಕರ್ ಅವರನ್ನು ಅಪ್ಪಿಕೊಳ್ಳುತ್ತಿದೆ-ಝಾಕೀರ್ ಹುಸೇನ್ ಕಿಡಿ

ಚಿಕ್ಕಮಗಳೂರು-ದೇಶವನ್ನಾಳಿದ ರಾಷ್ಟ್ರೀಯ ಪಕ್ಷಗಳು ಬಿ.ಆರ್.ಅಂಬೇಡ್ಕರ್ ಕನಸನ್ನು ನೂಚ್ಚುನೂರು ಮಾಡಿದವು. ಪ್ರತಿಯೊಂದು ಹೆಜ್ಜೆಯಲ್ಲೂ ಅವರನ್ನು ಅವಮಾನಿಸುವ ಜೊತೆಗೆ ಪರಿಶಿಷ್ಟರನ್ನು ಷಡ್ಯಂತ್ರ ದಿಂದ ಎತ್ತಿಕಟ್ಟಿ ಮೋಸದ ರಾಜಕಾರಣ ಮಾಡಿದ್ದಾರೆ ಎಂದು ಬಿ.ಎಸ್.ಪಿ. ರಾಜ್ಯ ಉಪಾಧ್ಯಕ್ಷ ಝಾಕೀರ್ ಹುಸೇನ್ ಕಿಡಿಕಾರಿದರು.

ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬಹುಜನ ಸಮಾಜ ಪಾರ್ಟಿ ಶುಕ್ರವಾರ ಆಯೋಜಿಸಿದ್ಧ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಹಾಗೂ ಬಿ.ಎಸ್.ಪಿ. ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರ ಸ್ವಾತಂತ್ರ್ಯಗೊಂಡು ಏಳು ದಶಕ ಪೂರೈಸಿದ ಮೇಲೆ ಕಾಂಗ್ರೆಸ್ ಸಂವಿಧಾನ ಹಾಗೂ ಅಂಬೇಡ್ಕರ್ ಅವರನ್ನು ಅಪ್ಪಿಕೊಳ್ಳುತ್ತಿದೆ. ಬಿಜೆಪಿ ಕೇವಲ ಟೀಕೆ ಟಿಪ್ಪಣಿಗಳಿಗೆ ಸೀಮಿತವಾಗಿದೆ. ಆದರೆ ಬಿಎಸ್ಪಿ ಸಂಸ್ಥಾಪಕ ಕಾನ್ಸಿರಾಮ್ ದೇಶಾದ್ಯಂತ ಸಂಚರಿಸಿ ಪಕ್ಷ ಸದೃಢಗೊಳಿಸಿ ಅಂಬೇಡ್ಕರ್ ತತ್ವ, ಸಿದ್ಧಾಂತಗಳನ್ನು ಭಿತ್ತುವ ಕೆಲಸ ಮಾಡಿದರು ಎಂದರು.

ಜಾತಿ ತಾರತಮ್ಯ, ಮೇಳು-ಕೀಳು ಎಂಬ ಮನೋರೋಗಕ್ಕೆ ಅಂಬೇಡ್ಕರ್ ಸಂವಿಧಾನದಡಿ ಮದ್ದನ್ನು ಕೊಟ್ಟವರು. ಬಡವ, ಶ್ರೀಮಂತ ಎಂಬ ಬೇಧಭಾವ ದೂರಾಗಿಸಿ, ಮನುಷ್ಯ ಧರ್ಮದ ಮಾನವೀಯ ಮೌಲ್ಯಗಳನ್ನು ಉಣಬಡಿಸಿದವರು. ಹೀಗಾಗಿಯೇ ವಿಶ್ವಾದ್ಯಂತ ಅಂಬೇಡ್ಕರ್‌ಗೆ ಅತಿಹೆಚ್ಚು ಮನ್ನಣೆ ಧಕ್ಕಲು ಕಾರಣವಾಗಿದೆ ಎಂದು ಹೇಳಿದರು.

ಕಾನ್ಸಿರಾಮ್ ರವರು ಅಂಬೇಡ್ಕರ್ ಚಿಂತನೆಗಳನ್ನು ಜನತೆಗೆ ತಲುಪಿಸಲು ಕ್ರಾಂತಿಕಾರಿ ಚಳುವಳಿ ನಡೆಸಿ,ದೇಶಾದ್ಯಂತ ಸಂಚರಿಸಿ ದೇಶವಾಸಿಗಳ ಮುಂದೆ ಅವರ ಜೀವನಚರಿತ್ರೆ ತೆರೆದಿಟ್ಟರು. ಅಧಿಕಾರದಿಂದ ಮಾತ್ರ ಬಹುಸಂಖ್ಯಾತರ ಏಳಿಗೆ ವೃದ್ದಿಯಾಗಲಿದೆ ಎಂದು ಬಿಎಸ್ಪಿ ಪಕ್ಷವನ್ನು ಸ್ಥಾಪಿಸಿ, ಸಂಘಟಿಸಿ ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದು ಭೂರಹಿತರು, ಅಲ್ಪಸಂಖ್ಯಾತರಿಗೆ ನೆರವಾದರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮನುವಾದಿಗಳು ರಾಮ, ರಾಮ ಎಂದರೆ,ನಮ್ಮ ಕಾರ್ಯಕರ್ತರು ಕಾನ್ಸಿರಾಮ ನಾಮಜಪಿಸಬೇಕು. ನೌಕರಿ, ಕುಟುಂಬ, ಐಷಾರಾಮಿ ಜೀವನ ತ್ಯಜಿಸಿ, ಶೋಷಿತರ ಪರವಾಗಿ ನಿಂತ ಕಾನ್ಸಿರಾಮ್ ಅತಿದೊಡ್ಡ ರಾಜಕೀಯ ಆಂದೋಲನಕ್ಕೆ ಕಾರಣೀಭೂತರು ಎಂದು ತಿಳಿಸಿದರು.

ಅಂಬೇಡ್ಕರ್ ಸಿದ್ದಾಂತ, ಬುದ್ಧನ ಅಶೋತ್ತರಗಳನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ಕಾನ್ಸಿರಾಮ್ ವಹಿಸಿದ್ದರು. ಪ್ರತಿ ಹೆಜ್ಜೆಯಲ್ಲೂ ಅಂಬೇಡ್ಕರ್ ಕನಸನ್ನು ಈಡೇರಿಸುವುದೇ ಅವರ ದೊಡ್ಡಗುರಿಯಾಗಿತ್ತು. ಮತ ನಮ್ಮದು, ಅಧಿಕಾರ ನಿಮ್ಮದು ಎಂಬುದರ ವಿರುದ್ಧ ಸಿಡಿದೆದ್ದು, ಮತ ನಮ್ಮದು, ಅಧಿಕಾರವು ನಮ್ಮದು ಎಂಬ ಧ್ಯೇಯವನ್ನು ಜನತೆಗೆ ಮುಟ್ಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಇತ್ತೀಚೆಗೆ ಆಳ್ವಿಕೆ ನಡೆಸುವ ಸರ್ಕಾರಗಳು ಪುಕ್ಕಟೆ ಯೋಜನೆ ಜಾರಿಗೊಳಿಸಿ ಮತದಾರರನ್ನು ಬಲೆಗೆ ಬೀಳಿಸುವ ತಂತ್ರ ರೂಪಿಸುತ್ತಿದೆ. ಹೀಗಾಗಿ ಹಿಂದುಳಿದ ವರ್ಗದವರು , ದಲಿತರು ಮತವನ್ನು ಹಣ, ಆಮಿಷಕ್ಕೆ ಒಳಗಾಗದೇ ಬಿಎಸ್ಪಿಗೆ ನೀಡಿದ್ದಲ್ಲಿ ರಾಜ್ಯ ಹಾಗೂ ದೇಶದಲ್ಲಿ ಪಕ್ಷ ಅಧಿಕಾರ ಹಿಡಿದ ಸಂವಿಧಾನವನ್ನು ಯಥಾ ವತ್ತಾಗಿ ಜಾರಿಗೊಳಿಸುತ್ತದೆ ಎಂದು ತಿಳಿಸಿದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಟಿ.ಸುಧಾ ಮಾತನಾಡಿ, ಸಂವಿಧಾನವು ಇಪ್ಪತ್ತು ವರ್ಷಗಳ ಮೀಸಲಾತಿ ನೀಡಿದರೆ ಸಮಾಜದಲ್ಲಿ ಬಡವ, ಶ್ರೀಮಂತರೆoಬ ಬೇಧವಿಲ್ಲದೇ ಎಲ್ಲರು ಸಮಾನರಾಗಿ ಬದುಕಬಹುದು ಎಂದು ಬಾಬಾಸಾಹೇಬರು ಭಾವಿಸಿದ್ದರು. ಆದರೆ ಸ್ವಾತಂತ್ರ್ಯಗೊಂಡು ಏಳುದಶಕ ಪೂರೈಸಿದರೂ ಇನ್ನು ಸಮಾನತೆ ದೊರಕಿಲ್ಲ. ಹೀಗಾಗಿ ಮತದಾರರು ಮಿಕ್ಸಿ, ಕುಕ್ಕರ್ ಅಥವಾ ಮದ್ಯಕ್ಕೆ ಸೀಮಿತರಾಗದೇ ಸಮರ್ಥರಿಗೆ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ದೇಶದಲ್ಲಿ ಜೆಡಿಎಸ್, ಸಮಾಜವಾದಿ, ತೃಣಮೂಲಕಾಂಗ್ರೆಸ್, ಡಿಎಂಕೆ ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಕ್ಕೆ ಸೀಮಿತವಾಗಿವೆ. ಆದರೆ ಏಕಮಾತ್ರ ಪಕ್ಷ ಬಿಎಸ್ಪಿ ಪ್ರಾದೇಶಿಕವಾಗಿ ಉಗಮಿಸಿ, ದೇಶವ್ಯಾಪಿ ಹಬ್ಬಿಕೊಂಡು ಮೂರನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿ ಬೆಳೆಯಲು ಕಾನ್ಸಿರಾಮ್ ಸಂಘಟನೆಯೇ ಕಾರಣ ಎಂದರು.

ರಾಜ್ಯದಲ್ಲಿ ಬಿಎಸ್ಪಿ ಅಧಿಕಾರ ಗಳಿಸಲು ಸರ್ವರ ಸಹಕಾರ ಅತ್ಯಗತ್ಯ. ವಿಶೇಷವಾಗಿ ದಸಂಸ ಸಂಘಟನೆ ಗಳು ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಅಂಬೇಡ್ಕರ್ ಸಂಪೂರ್ಣ ಚಿಂತನೆಗಳಡಿ ರಾಜಕಾರಣ ಮಾಡುತ್ತಿರುವ ಬಿಎಸ್ಪಿ ಪಕ್ಷವನ್ನು ಮುಂಬರುವ ಚುನಾವಣೆಗಳಲ್ಲಿ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಪಕ್ಷದ ನೂರಾರು ಕಾರ್ಯಕರ್ತರು ತಾಲ್ಲೂಕು ಕಚೇರಿಯಿಂದ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ಜಾಥಾ ನಡೆಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಝಾಕೀರ್ ಆಲಿಖಾನ್, ಲೋಕಸಭಾ ಸಂಯೋಜಕ ಗಂಗಾಧರ್, ಬಿ.ಎಂ.ಶoಕರ್, ಜಿಲ್ಲಾ ಸಂಯೋಜಕರಾದ ಮಂಜಯ್ಯ, ಕೆ.ಎಂ.ಗೋಪಾಲ, ಉಪಾಧ್ಯಕ್ಷ ರಾದ ಮಂಜುಳಾ, ಹಾಂದಿ ಬಾಬಣ್ಣ, ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಂಜುನಾಥ್ ಖಜಾಂಚಿ ವಾಹೀದ್ ಖಾನ್, ವಿಧಾನಸಭಾ ಉಸ್ತುವಾರಿಗಳಾದ ಪುಟ್ಟಸ್ವಾಮಿ, ಬಕ್ಕಿಮಂಜುನಾಥ್, ನಾರಾಯಣಮೂರ್ತಿ, ಮುಖ0ಡರುಗಳಾದ ವಸಂತ್, ಜಗದೀಶ್, ರಮೇಶ್, ಶೀಲಾ, ವಿಜಯ್, ಚಂದ್ರಶೇಖರ್, ರತ್ನ, ಆನಂದ್ ಮತ್ತಿತರರು ಉಪಸ್ಥಿತರಿದ್ದರು.

————––ವರದಿ-ಸುರೇಶ್

Leave a Reply

Your email address will not be published. Required fields are marked *

× How can I help you?