ಚಿಕ್ಕಮಗಳೂರು, ಮೇ.12: ಶಾಂತಿ ಮತ್ತು ಜ್ಞಾನದ ಜ್ಯೋತಿಯನ್ನು ಬೆಳಗಿಸಿ ಜಗತ್ತಿನ ಕೋಟಿ ಕೋಟಿ ಜನರ ಹೃದಯವನ್ನು ಗೆದ್ದಂತಹ ವಿಶ್ವ ಶಾಂತಿಯ ಪ್ರತಿಪಾದಕ ಭಗವಾನ್ ಬುದ್ಧ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ಪ್ರತಿಪಾದಿಸಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ನಡೆದ ಭಗವಾನ್ ಬುದ್ಧರ ಜಯಂತಿ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ರಿ.ಪೂ. ಆರನೇ ಶತಮಾನದಲ್ಲಿ ಕಪಿಲವಸ್ತು ರಾಜ್ಯದ ದೊರೆಯಾಗಿದ್ದ ಶುದ್ಧೋದನ ಹಾಗೂ ಮಾಯಾದೇವಿಯ ಪುತ್ರನಾಗಿ ಜನಿಸಿದವರು ಸಿದ್ಧಾರ್ಥ. ಮುಂದೆ ಒಬ್ಬ ಮಹಾ ಯೋಗಪುರುಷನಾಗುತ್ತಾನೆ, ಸನ್ಯಾಸಿಯಾಗುತ್ತಾನೆ ಎನ್ನುವ ಭವಿಷ್ಯ ನುಡಿ ಕೇಳಿದ ಮಹಾರಾಜ ಏನಾದರೂ ಮಾಡಿ ಮಗನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಬೇಕು. ಆತ ಸನ್ಯಾಸಿಯಾಗಬಾರದು ಎಂದು ಬಯಸಿ ಆತನಿಗೆ ವಿವಾಹವನ್ನು ಮಾಡುತ್ತಾನೆ. ಮಗುವೂ ಜನಿಸುತ್ತದೆ. ಆದರೂ ಆತ ಯೋಗ ಪುರುಷನಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಅಂದಿನ ಪ್ರಾಪಂಚಿಕ ವ್ಯವಸ್ಥೆಯಲ್ಲಿ ವೃದ್ಧಾಪ್ಯ, ರೋಗಿಷ್ಟ ಮತ್ತು ಶವವನ್ನು ಹೊತ್ತೊಯ್ಯುತ್ತಿದ್ದ ದೃಶ್ಯವನ್ನು ಗಮನಿಸಿ ಆತನಲ್ಲಿ ಜ್ಞಾನೋದಯವಾಗಿ ಈ ಮೂರು ಎಲ್ಲರ ಜೀವನದಲ್ಲೂ ಬರುವಂತಹವು ಎಂದು ಪ್ರಭಾವಿತನಾಗಿ ಆಸೆಯೇ ದುಃಖಕ್ಕೆ ಮೂಲ ಎಂದರಿತು ತನಗೇಕೆ ಈ ರಾಜ ವೈಭವ ಎಂದು ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಬೋಧಿವೃಕ್ಷದ ಕೆಳಗೆ ಸುದೀರ್ಘಕಾಲ ತಪಸ್ಸನ್ನಾಚರಿಸಿ ಯೋಗ, ಯೋಗ್ಯತೆಯನ್ನು ಸಾಧಿಸಿದ ಸಿದ್ಧಾರ್ಥ ಭಗವಾನ್ ಬುದ್ಧನಾಗುತ್ತಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಬುದ್ಧ ಎಂದರೆ ಅಲಂಕಾರದ ವಸ್ತುವಲ್ಲ, ಬುದ್ಧನನ್ನು ತತ್ತ÷್ವದೊಡನೆ ಪ್ರತಿಷ್ಠಾಪನೆ ಮಾಡಿಕೊಂಡರೆ ಮಾತ್ರ ಆ ಬುದ್ಧತ್ವಕ್ಕೆ ಬೆಲೆ ಬರುತ್ತದೆ. ಆ ಬುದ್ಧನಿಗೆ ನಾವು ಶರಣಾಗಬೇಕಾಗುತ್ತದೆ. ಬುದ್ಧನ ತತ್ವಗಳೆಂದರೆ ಕನ್ನಡಿಯೊಳಗಿನ ಗಂಟಿನಂತಲ್ಲ, ಇತರರಿಗೆ ಹಾನಿ ಮಾಡಬೇಡಿ, ಜೀವನದ ಉದ್ದೇಶವನ್ನು ಸರಿಯಾಗಿಟ್ಟುಕೊಳ್ಳಿ. ಪ್ರೀತಿಯ ಮಾರ್ಗವನ್ನು ಅನುಸರಿಸಿ. ಇತರರನ್ನು ತನ್ನಂತೆ ಭಾವಿಸಿ, ನಿಮ್ಮನ್ನು ನೀವೇ ಜಯಿಸಿ ಎಂದವರು ಬೋಧಿಸಿದ್ದಾರೆ.

ನಮ್ಮ ಆಲೋಚನೆಗಳ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದಾದರೆ ನಮ್ಮನ್ನು ನಾವು ಗೆದ್ದಂತೆ. ಇದು ಅತ್ಯಂತ ಕಠಿಣಾತಿಕಠಿಣ. ಆ ಕಾರ್ಯವನ್ನು ಸಾಧಿಸಿರುವವರು ಬುದ್ಧ. ಹಾಗಾಗಿ ಜಗತ್ತಿಗೆ ಒಬ್ಬರು ಮಾತ್ರ ಬುದ್ಧನಾಗಿದ್ದಾರೆ. ಅವರ ಬದುಕಿನಲ್ಲಿ ನಾವು ಒಂದು ಹೆಜ್ಜೆ ಸಾಗಿದರೂ ಬುದ್ಧತ್ವಕ್ಕೆ, ಈ ಜಯಂತಿ ಆಚರಣೆಗೆ ಸಾರ್ಥಕತೆ ಬರುತ್ತದೆ ಎಂದರು.
ನಮ್ಮೆಲ್ಲರಿಗೂ ವೈರಾಗ್ಯ ಬರುತ್ತದೆ. ಅದು ಸಾವಿನ ಕಾರಣಕ್ಕಾಗಿ ಸ್ಮಶಾನಕ್ಕೆ ಹೋದಾಗ. ಆಗ ನಮ್ಮಲ್ಲಿ ಉಂಟಾಗುವುದು ಸ್ಮಶಾನ ವೈರಾಗ್ಯ. ಆ ಕ್ಷಣಕ್ಕೆ ಬದುಕು ಇಷ್ಟೇ ಅಲ್ಲವೇ ಎನಿಸುವುದುಂಟು. ಆದರೆ ಇತ್ತ ಬಂದೊಡನೆ ಆ ವೈರಾಗ್ಯ ಮರೆಯಾಗಿ ಮತ್ತದೇ ಜಂಜಾಟ, ಮೋಹ ಆವರಿಸಿಕೊಳ್ಳುತ್ತದೆ. ಆ ಮೋಹದಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ.

ಅದು ಬುದ್ಧನಂಥವರಿಗೆ ಮಾತ್ರ ಸಾಧ್ಯ ಎಂದು ಹೇಳಿದರು. ನಗರ ಪ್ರದಕ್ಷಿಣೆಗೆ ತೆರಳಿದ ಬುದ್ಧನಿಗೆ ಕಂಡು ಬಂದ ಮುಪ್ಪಿನಿಂದ ಕೂಡಿದ ವ್ಯಕ್ತಿ, ಕುಷ್ಠರೋಗಿ ಹಾಗೂ ಶವವನ್ನು ಸಾಗಿಸುತ್ತಿದ್ದ ದೃಶ್ಯ ವಿಚಲಿತಗೊಳಿಸಿದವು. ಈ ಕಾರಣದಿಂದಾಗಿಯೇ ಅವರು ಮಧ್ಯರಾತ್ರಿಯೇ ಮನೆ ತೊರೆದರು ಎಂದು ಹೇಳಿದರು.
ನಿನ್ನೆ, ಮೊನ್ನೆ ಯುದ್ಧದ ಭೀತಿ ನಮ್ಮನ್ನು ಕಾಡುತ್ತಿತ್ತು. ಯುದ್ಧದ ಕಥೆ ಕೇಳಲು ರಮಣೀಯವೂ, ರೋಚಕವೂ ಆಗಿರುತ್ತದೆ. ಅದರೆ ಅದರ ಪರಿಣಾಮ ಭೀಕರವಾಗಿರುತ್ತದೆ. ಬುದ್ಧ ಯುದ್ಧದ ಸಂದೇಶವನ್ನು ಜಗತ್ತಿಗೆ ನೀಡಲಿಲ್ಲ. ಬುದ್ಧನಾಗಲಿ, ಅವರ ಅನುಯಾಯಿಗಳಾಗಲಿ ಕತ್ತಿ ಹಿಡಿದು ಜಗತ್ತನ್ನು ಜಯಿಸಲಿಲ್ಲ. ಸಂದೇಶದ ಮೂಲಕ ಜಗತ್ತನ್ನು ಜಯಿಸಿದರು ಎಂದು ಅವರು ತಿಳಿಸಿದರು.

ಭಗವಾನ್ ಬುದ್ಧರ ಬಗ್ಗೆ ಬಾಣಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ದೊರೇಶ್ ಬಿಳಿಕೆರೆ ಅವರು ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಉಪ ವಿಭಾಗಾಧಿಕಾರಿ ದೇವರಾಜ್, ತಹಸೀಲ್ದಾರ್ ರೇಷ್ಮ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಭಾಗವಹಿಸಿದ್ದರು.