ಚಿಕ್ಕಮಗಳೂರು-ಕ್ಯಾಶ್‌ಲೆಶ್ -ಸಮಾಜ-ನಮಗೆ-ಬೇಕಿಲ್ಲ-ಕಾಸ್ಟ್ಲೆಸ್ ಸಮಾಜ ಕಟ್ಟುವ-ಸಂಕಲ್ಪವನ್ನುಎಲ್ಲರೂ ಮಾಡಬೇಕಿದೆ-ರಾಜರತ್ನ-ಅಂಬೇಡ್ಕರ್

ಚಿಕ್ಕಮಗಳೂರು: ಈ ದೇಶಕ್ಕೆ ಜಾತಿ ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ. ಕ್ಯಾಶ್‌ಲೆಶ್ ಸಮಾಜ ನಮಗೆ ಬೇಕಿಲ್ಲ ಕಾಸ್ಟ್ಲೆಸ್ ಸಮಾಜ ಕಟ್ಟುವ ಸಂಕಲ್ಪವನ್ನು ಎಲ್ಲರೂ ಮಾಡಬೇಕಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದರು.


ತಾಲೂಕಿನ ಆಲ್ದೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಏರ್ಪಡಿಸಿದ್ದ ಸ್ವಾಭಿಮಾನಿ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಪುತ್ಥಳಿ ನಿರ್ಮಿಸಿದ ಮೇಲೆ ನಿಮ್ಮ ಜವಾಬ್ದಾರಿ ಬಹಳ ಜಾಸ್ತಿ ಇದೆ. ಕನಿಷ್ಠ ೨೦ ಕಿಮೀ ರೇಡಿಯೇಶನ್ ದೂರದವರೆಗೆ ಒಬ್ಬ ದಲಿತ ಐಎಎಸ್, ಐಪಿಎಸ್, ಡಾಕ್ಟರ್, ಎಂಜಿನಿಯರ್ ಹುಟ್ಟಿ ಬರುವಂತಹ ಸ್ಥಿತಿ ನಿರ್ಮಾಣವಾಗಬೇಕು ಎಂದರು.


ಸಂವಿಧಾನ ಜಾರಿಯಾದ ನಂತರ ಜಾತಿ ಪದ್ದತಿ ಇರಕೂಡದು ಎಂದು ಅಂಬೇಡ್ಕರ್ ಬಯಸಿದ್ದರು. ಇಂದು ದೇಶದಲ್ಲಿ ಪ್ರಧಾನಿ ಕ್ಯಾಶ್‌ಲೆಶ್ ಎಕಾನಮಿ ಕೊಟ್ಟಿದ್ದಾರೆ. ಆದರೆ, ಭ್ರಷ್ಟಾಚಾರ ತಡೆಯಲಾಗಿಲ್ಲ. ಒಂದು ದೇಶ ಒಂದು ಚುನಾವಣೆ ಎನ್ನುತ್ತಿದ್ದಾರೆ. ಬೇಕಿರುವುದು ಅದಲ್ಲ. ಒಂದು ದೇಶ, ಒಂದೇ ತರಹದ ಶಿಕ್ಷಣ ಪದ್ದತಿ ಬೇಕು ಎಂದು ಪ್ರತಿಪಾದಿಸಿದರು.


ಹೋದಲೆಲ್ಲಾ ಅಂಬೇಡ್ಕರ್ ನಿಮಗೆ ಉಳಿಸಿರುವ ಆಸ್ತಿ ಎಷ್ಟು ಎಂದು ಜನ ನನ್ನನ್ನು ಕೇಳುತ್ತಾರೆ. ಈ ದೇಶದಲ್ಲಿ ಒಮ್ಮೆ ಮಂತ್ರಿ ಮಹೋದಯರಾದರೆ ತಮ್ಮ ಏಳು ಸಂತತಿಗೆ ಆಗುವಷ್ಟು ಸಂಪತ್ತು ಕೂಡಿಡುತ್ತಾರೆ. ಆದರೆ, ಸಂಸತ್ತಿನಲಿ ನಾಲ್ಕು ಖಾತೆ ನಿಭಾಯಿಸಿದ್ದ ಅಂಬೇಡ್ಕರ್ ಮರಣ ಹೊಂದಿದ್ದಾಗ ಅವರ ಬಳಿ ಕೇವಲ 15237 ರೂ. ಮಾತ್ರ ಇತ್ತು ಎಂದು ಹೇಳಿದರು.

ನಾನೂ ಹೋದಲೆಲ್ಲ ಹೂಮಳೆ ಸುರಿಸುತ್ತಾರೆ. ಅದು ಏಕೆ ಎಂದು ತನ್ನ ತಂದೆಯನ್ನು ಕೇಳಿದಾಗ ಅದು ನೀನೇನೋ ಮಾಡಿದ್ದೀಯ ಎಂದು ಹೂಮಳೆ ಹಾಕುವುದಿಲ್ಲ. ನೀನು ಅಂಬೇಡ್ಕರ್ ರಕ್ತ ಹಂಚಿಕೊಂಡು ಹುಟ್ಟಿದೀಯ ಎನ್ನುವ ಕಾರಣಕ್ಕೆ ಎಂದು ತಂದೆ ಹೇಳಿದ್ದರು ಎಂದು ಸ್ಮರಿಸಿದರು.


ಮಾಜಿ ಸಭಾಪತಿ ರಮೇಶ್ ಕುಮಾರ್ ಮಾತನಾಡಿ, ಅಂಬೇಡ್ಕರ್ ಯಾವುದೋ ಒಂದು ಸಮುದಾಯಕ್ಕೆ ಸೇರಿದವರಲ್ಲ ಇಡೀ ಮನುಕುಲಕ್ಕೆ ಸೇರಿದವರು. ಅವರ ಬಗ್ಗೆ ಅಧ್ಯಯನ ಮಾಡದೆ, ಅವರ ವಿಚಾರಗಳನ್ನು ಅರ್ಥಮಾಡಿಕೊಳ್ಳದೆ ದಲಿತೇತರರು ಪೂರ್ವಗ್ರಹ ಪೀಡಿತರಾಗಿ ಅಂಬೇಡ್ಕರ್ ಅವರನ್ನು ಸಣ್ಣವರನ್ನಾಗಿ ಮಾಡುವುದು ಬೇಡ ಎಂದರು. ಅವರು ಎಲ್ಲರ ಪರವಾಗಿ ಮಾತಾಡಿದ್ದಾರೆ. ನಮಗೆ ತಿಳಿದುಕೊಳ್ಳಲು ಸಮಯ ಇಲ್ಲ ಎಂದರು.


ನಿವೃತ್ತ ಡಿಡಿಪಿಯು ಎಚ್.ಎಂ.ರುದ್ರಸ್ವಾಮಿ ಮಾತನಾಡಿ, ಅಂಬೇಡ್ಕರ್ ಪ್ರತಿಮೆ ನಮಗೆ ಹೋರಾಟದ ಸ್ಪೂರ್ತಿಯಾಗಿರಬೇಕೆ ವಿನಾ ಆರಾಧನೆಗಲ್ಲ. ಅಂಬೇಡ್ಕರ್ ಎಂದೂ ನನ್ನನ್ನು ಆರಾಸಿ ಎಂದು ಹೇಳೀರಲಿಲ್ಲ. ಇತ್ತೀಚೆಗೆ ದಲಿತರು ಒಗ್ಗಾಟ್ಟಾಗಿ ಜಾಗೃತಿ ಮೂಡುತ್ತಿರುವುದು ಸಾಮಾಜಿಕ ಚಲನೆಯ ಸಂಕೇತ ಎಂದು ಬಣ್ಣಿಸಿದರು.

ಈ ವೇಳೆ ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಭೀಮ್ ಆರ್ಮಿ ಗಿರೀಶ್, ದಲಿತ ಸಮಘಟನೆಗಳ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?