ಚಿಕ್ಕಮಗಳೂರು-ಸಿಸಿಮೆಂಟ್ ಮತ್ತು ಉಕ್ಕು ದೇಶದ ಆರ್ಥಿಕ ಪ್ರಗತಿಗೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಬೆನ್ನುಹುರಿಯಂತೆ ಪ್ರಾಮುಖ್ಯವಾಗಿದೆ-ಸಿಡಿಸಿಎಸ್‌ಡಿಎ ಅಧ್ಯಕ್ಷ ಎಸ್.ಪಿ.ರಘು ಅಭಿಮತ

ಚಿಕ್ಕಮಗಳೂರು ಮೇ-5: ಸಿಮೆಂಟ್ ಮತ್ತು ಉಕ್ಕು ದೇಶದ ಆರ್ಥಿಕ ಪ್ರಗತಿಗೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಬೆನ್ನುಹುರಿಯಂತೆ ಪ್ರಾಮುಖ್ಯವಾಗಿದೆ ಎಂದು ಸಿಡಿಸಿಎಸ್‌ಡಿಎ ಅಧ್ಯಕ್ಷ ಎಸ್.ಪಿ.ರಘು ಅಭಿಪ್ರಾಯಿಸಿದರು.

ನಗರ ಹೊರವಲಯ ಅಲ್ಲಂಪುರದ ಪಂಜುರ್ಳಿ ಹೋಟೇಲ್ ಸಭಾಂಗಣದಲ್ಲಿ ನಿನ್ನೆ ಆಯೋಜಿಸಿದ್ದ ಜಿಲ್ಲಾ ಸಿಮೆಂಟ್ ಮತ್ತು ಉಕ್ಕು ವಿತರಕರ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕಟ್ಟಡ, ಸೇತುವೆ, ಕಾರ್ಖಾನೆ, ಮನೆಗಳು ಸೇರಿದಂತೆ ದೇಶದ ಪ್ರಗತಿಗೆ ಅತ್ಯಗತ್ಯ. ಸಿಮೆಂಟ್ ಮತ್ತು ಉಕ್ಕು ಇಲ್ಲದೆ ನಿರ್ಮಾಣ ಕಷ್ಟಸಾಧ್ಯ. ಜಿಲ್ಲೆಯಲ್ಲಿ ತಿಂಗಳಿಗೆ 25 ರಿಂದ 30ಸಾವಿರ ಮೆಟ್ರಿಕ್ ಟನ್‌ಗಳಷ್ಟು ಸಿಮೆಂಟ್, ಸಾವಿರ ಮೆಟ್ರಿಕ್ ಟನ್‌ಷ್ಟು ಉಕ್ಕು ಬಳಕೆಯಾಗುತ್ತಿದೆ. ಕೋವಿಡ್‌ನಂತಹ ಸಂರ್ಭದಲ್ಲೂ ಸಿಮೆಂಟ್ ಮತ್ತು ಉಕ್ಕು ವಿತರಕರ ಸೇವೆ ಅವ್ಯಾಹಿತವಾಗಿತ್ತು ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ಪ್ರಥಮಬಾರಿಗೆ ಸಿಮೆಂಟ್ ಮತ್ತು ಉಕ್ಕು ವಿತರಕರ ಸಂಘ ಸ್ಥಾಪನೆಗೊಂಡಿದ್ದು ಸದಸ್ಯರ ನಡುವೆ ಜ್ಞಾನ ಹಾಗೂ ಹೊಸ ತಂತ್ರಜ್ಞಾನದ ಬಳಕೆಯ ವಿನಿಮಯಕ್ಕೆ ಅವಕಾಶವಾಗುತ್ತದೆ. ವಿತರಕರು ಶ್ರದ್ಧೆಯಿಂದ ಕೆಲಸ ಮಾಡಿದರೆ ಅಭಿವೃದ್ಧಿ ಹೊಂದಬಹುದು. ವ್ಯಾಪಾರ ಎಂದರೆ ಕೇವಲ ಲಾಭವಲ್ಲ. ನಂಬಕೆ ಗಳಿಸುವುದು ಪ್ರಮುಖ ಧ್ಯೇಯವಾಗಬೇಕು. ಗ್ರಾಹಕರಿಗೆ ಸೇವೆ ನೀಡುವುದೇ ವ್ಯವಹಾರದ ಯಶಸ್ಸು ಎಂದ ರಘು, ವ್ಯವಹಾರದಲ್ಲಿ ಪ್ರಯತ್ನ ಮುಖ್ಯ. ಫಲ ಸ್ವಾಭಾವಿಕವಾಗಿ ಸಿಗುತ್ತದೆ ಎಂದರು.

ಸಿಬಿಸಿಎಸ್‌ಡಿಎ ಅನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಯುವಲೆಕ್ಕ ಪರಿಶೋಧಕ ಶ್ರೇಯಸ್ ಮಾತನಾಡಿ ವ್ಯಾಪಾರದಲ್ಲಿ ಪಾರದರ್ಶಕತೆ ಹೊಂದುವುದು ಅಗತ್ಯ. ಸರ್ಕಾರದ ವಿವಿಧ ಇಲಾಖೆಗಳು ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವ ಪ್ರಕ್ರಿಯೆಯಲ್ಲಿ ನಿರತರಾಗಿರುವುದರಿಂದ ವಿವರಗಳು ತೆರಿಗೆ ಇಲಾಖೆಗೆ ಸುಲಭವಾಗಿ ಸಿಗುತ್ತದೆ. ತಪ್ಪು ಮಾಡಿದರೆ ಗಳಿಸಿದ್ದಕ್ಕಿಂತ ಹೆಚ್ಚು ದಂಡ ಜೊತೆಗೆ ಬಡ್ಡಿ ಹೆಚ್ಚುವರಿ ತೆರಿಗೆ ಪಾವತಿಸಲೇಬೇಕಾಗುತ್ತದೆ ಎಂದರು.

ಖರೀದಿ ಮತ್ತು ಮಾರಾಟದ ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಿದರೆ ಧರ‍್ಯ ಮತ್ತು ಆತ್ಮವಿಶ್ವಾಸದಿಂದ ವ್ಯವಹಾರ ನಡೆಸಬಹುದು. ಆಧಾರ್ ಮತ್ತು ಪಾನ್ ಎಲ್ಲ ವ್ಯವಹಾರಕ್ಕೂ ಬಳಕೆ ಮಾಡುವುದರಿಂದ ಮಾಹಿತಿ ನಿಖರವಾಗಿ ಸಿಗುತ್ತದೆ. ನಗದು ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ತಂತ್ರಜ್ಞಾನ ಬಳಸಿ ವ್ಯವಹರಿಸಿದರೆ ಲೆಕ್ಕಪತ್ರಗಳ ನಿರ್ವಹಣೆ-ವಿಮರ್ಶೆ ಸುಲಭವಾಗುತ್ತದೆ ಎಂದ ಶ್ರೇಯಸ್, ವ್ಯಾಪಾರದಲ್ಲಿ ಜಾಗೃತಿ ಅಗತ್ಯ. ಯೋಜನೆ ಮತ್ತು ನಿರ್ವಹಣೆಯ ಅಂತರ ಕಡಿಮೆ ಮಾಡಿಕೊಳ್ಳುವುದು ಅಭಿವೃದ್ಧಿ ದೃಷ್ಟಿಯಿಂದ ಶ್ರೇಯಸ್ಸಕರ. ಚಿಕ್ಕಮಗಳೂರಿನಲ್ಲಿ 45,000, ತರೀಕೆರೆ 15,000 ಸೇರಿ ಸುಮಾರು 65,000 ವ್ಯಾಪಾರ-ವ್ಯವಹಾರಸ್ಥರು ತೆರಿಗೆ ಇಲಾಖೆಯಲ್ಲಿ ನೊಂದಾಯಿಸಿದ್ದಾರೆ. ಭವಿಷ್ಯದ ಸಿದ್ಧತೆಗೆ ನೊಂದಾವಣೆ ಅಗತ್ಯ. ಎಲ್ಲ ಮಾರಾಟಕ್ಕೂ ಪರಿಪೂರ್ಣವಾದ ರಶೀದಿ ನೀಡಬೇಕು. ಜಿಎಸ್‌ಟಿ ಪಾವತಿಸಬೇಕು.

ಕಂಪ್ಯೂಟರ್‌ನಲ್ಲಿ ದೈನಂದಿನ ವ್ಯಾಪಾರ ವಹಿವಾಟನ್ನು ದಾಖಲಿಸುತ್ತಿದ್ದರೆ ಯಾರಿಗೂ ಅಂಜದೆ-ಅಳುಕದೆ ಧರ‍್ಯವಾಗಿ ವ್ಯವಹರಿಸಬಹುದು ಎಂದ ಶ್ರೇಯಸ್, ನಿರ್ಮಾಣ ಕರ‍್ಯದಲ್ಲಿ ಉಕ್ಕು ಮತ್ತು ಸಿಮೆಂಟ್ ಪ್ರಮುಖ ವಸ್ತುಗಳಾಗಿದ್ದು ಇದರ ವಿತರಕರು ಸಂಘಟಿತರಾಗಿ ಆಧುನಿಕ ಕೌಶಲ್ಯಗಳನ್ನು ಬಳಕೆ ಮಾಡಿಕೊಂಡು ತಮ್ಮ ಯಶಸ್ಸಿನ ಜೊತೆಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲೂ ತೊಡಗಿಸಿಕೊಳ್ಳಬಹುದೆಂದರು.

ಹಿರಿಯ ವಿತರಕರುಗಳಾದ ವಿ.ನಾರಾಯಣ, ರೋಷನ್, ಶರವಣ, ಬಾಳೆಹೊನ್ನೂರಿನ ರಮೇಶ್, ಶೃಂಗೇರಿಯ ಜಗದೀಶ್, ಆಲ್ದೂರಿನ ರಾಜೀವ್, ಜಯಪುರದ ಗಣೇಶ್, ಪದಾಧಿಕಾರಿಗಳಾದ ಅಹಮ್ಮದ್ ಹುಸೇನ್, ಅಲ್ತಾಫ್‌ಅಲಮ್, ಕಿರಣಕುಮಾರ್, ಮಂಜುನಾಥ್ ಮತ್ತಿತರರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಿಮೆಂಟ್ ಮತ್ತು ಉಕ್ಕು ವಿತರಕರು ಆಗಾಗ ಆನ್‌ಲೈನ್ ಮೂಲಕ ಸಭೆ ನಡೆಸಿ ಕೌಶಲ್ಯ ಹಾಗೂ ಅನುಭವ ಪರಸ್ಪರ ಹಂಚಿಕೊಳ್ಳುವುದರ ಜೊತೆಗೆ ಸ್ಥಳೀಯವಾಗಿ ಏಕರೀತಿಯ ಕೆಲ ನಿಯಮಗಳನ್ನು ರೂಪಿಸಿಕೊಳ್ಳಲು ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ರಘು ಸ್ವಾಗತಿಸಿ, ರಾಯ್‌ನಾಯಕ ಪ್ರಾರ್ಥಿಸಿದ್ದು, ದರ್ಶನ್ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

× How can I help you?