ಚಿಕ್ಕಮಗಳೂರು, ಮೇ.23:– ಮೂಡಿಗೆರೆ ತಾಲ್ಲೂಕಿನ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮಾಜಿ ಶಾಸಕರು ಶುಕ್ರವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮುಂದಿನ ಪೀಳಿಗೆಗೆ ಮೂಲಭೂತ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಕಂದಾಯ ಭೂಮಿಯನ್ನು ಅರಣ್ಯಕ್ಕೆ ಸೇರಿಸಬಾರದು. ಪ್ರಸ್ತುತ 4/1 ಆಗಿರುವ ಅನೇಕ ಗ್ರಾಮಗಳಲ್ಲಿ 4/1 ನೋಟಿಫಿಕೇಷನ್‌ನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಇದೀಗ ಕಳಸ ತಾಲ್ಲೂಕಿನ ಎಸ್.ಕೆ.ಮೇಗಲ್, ಮಾವಿನಕೆರೆ, ಕಗ್ಗನಹಳ್ಳ, ಹೊರನಾಡು, ಬಾಳೂರು ಹೋಬಳಿಯ ಕಲ್ಮನೆ, ಹಾದಿಓಣಿ, ಕುವೆ, ತೆಲಗೂರು, ಆಲ್ದೂರು ಹೋಬಳಿಯ ಹಳಿಯೂರು, ಬನ್ನೂರು, ಆವ್ವಳ್ಳಿ, ಇಳೇಖಾನ್, ಬೆಳಗೋಡು, ವಸ್ತಾರೆ, ಬಾಚಿನಗಹಳ್ಳಿ, ಹಲಸುಮನೆ, ಕದ್ರಿಮಿದ್ರಿ ಗ್ರಾಮಗಳಲ್ಲಿ 4/1 ನೋಟಿಫಿಕೇಷನ್ ಪರಿವರ್ತನೆ ಮಾಡಲು ಅರಣ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ ಎಂದರು.
ಈ ಹಿಂದೆ ಅನೇಕ ಕಂದಾಯ ಭೂಮಿಯನ್ನು ಅರಣ್ಯ ಭೂಮಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂತ ಕಡೆಗಳಲ್ಲಿ ಕೂಡ ರೈತರು ಬೀದಿಪಾಲಾಗಿದ್ದಾರೆ. ಬಹುತೇಕ ಗ್ರಾಮದ ಭೂಮಿಗಳಲ್ಲಿ ಕೃಷಿಕರು, ನಿವೇ ಶನ ರಹಿತರು ವಾಸವಾಗಿದ್ದು ಜೊತೆಗೆ ಸಾವಿರಾರು ಮಂದಿ ನಿವೇಶನಕ್ಕಾಗಿ ಕಾದು ಕುಳಿತುಕೊಂಡಿದ್ದಾರೆ ಎಂದು ಹೇಳಿದರು.

ಇನ್ನೂ ಕೆಲವೆಡೆ ಸಾವಿರಾರು ಕುಟುಂಬಗಳು, ಬೆಳೆಗಾರರ ಕೂಲಿಲೈನ್‌ಗಳಲ್ಲಿ ನಿವೇಶನಕ್ಕಾಗಿ, ಸ್ವಂತ ಮನೆ ನಿರ್ಮಿಸಿಕೊಳ್ಳಲು ಕನಸು ಕಾಣಲಾಗುತ್ತಿದೆ. ಅಂಗನವಾಡಿ ಶಾಲೆ, ಆಟದ ಮೈದಾನ, ಸಮುದಾಯ ಭವನ, ಸ್ಮಶಾನಕ್ಕೆ ಜಾಗವಿಲ್ಲದೇ ಆಹಾಕಾರಪಡುವಂತಾಗಿದೆ ಎಂದರು.
ಆದ್ದರಿಂದ ಜಿಲ್ಲೆಯ ಯಾವುದೇ ಗ್ರಾಮದ ಕಂದಾಯ ಭೂಮಿಯನ್ನು ಅರಣ್ಯ ಎಂದು ಪರಿವರ್ತನೆ ಮಾಡಬೇಕಾದರೆ ಎಲ್ಲಾ ಮೂಲಭೂತ ಸೌಲಭ್ಯದ ಕೊರತೆಗಳನ್ನು ನೀಗಿಸಬೇಕಾಗಿದೆ ಮತ್ತು ಅರಣ್ಯಕ್ಕೆ ವರ್ಗಾಯಿಸಬೇಕಾದ ವೇಳೆಯಲ್ಲಿ ಮುಂದಿನ ಪೀಳಿಗೆಗೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರವನ್ನು ಕೈ ಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ ಮು ಖಂಡರುಗಳಾದ ಹರೀಶ್ ಮಿತ್ರ, ಕಬ್ಬಿಕೆರೆ ಮೋಹನ್‌ಕುಮಾರ್, ಭಾರತಿ, ದಿವಾಕರ್ ಹಾಜರಿದ್ದರು.
– ಸುರೇಶ್ ಎನ್.