ಚಿಕ್ಕಮಗಳೂರು. ಸರ್ಕಾರಿ ಶಾಲೆಗಳು ಉಳಿಯಲು ಮತ್ತು ಅಭಿವೃದ್ಧಿ ಪಥದತ್ತ ಸಾಗಲು ಪ್ರತಿಯೊಬ್ಬರ ಶ್ರಮವು ಅವಶ್ಯವಾಗಿದ್ದು ಸರ್ಕಾರಿ ಶಾಲೆ ಉಳಿವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೆಳಿದರು.
ಚಿಕ್ಕಮಗಳೂರು ತಾಲೂಕಿನ ಚಿಕ್ಕಕೊಳಲೆಯ ಕಬ್ಬಿನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಯ ಉಳಿವು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಅಭಿವೃದ್ಧಿ ಹೊಂದಿದ ವಿದ್ಯಾರ್ಥಿಗಳಿಂದಲೇ ಸಾಧ್ಯ ಜೊತೆಯಲ್ಲಿ ಸರ್ಕಾರ ಸೇರಿದಂತೆ ಪ್ರತಿಯೊಬ್ಬರ ಶ್ರಮದಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದುವ ಮೂಲಕ ಸರ್ಕಾರಿ ಶಾಲೆಯ ಉಳಿವಿಗೆ ಕಾರಣವಾಗುತ್ತದೆ. ಸರ್ಕಾರಿ ಶಾಲೆಗಳು ಧಾನಿಗಳ ಸಹಕಾರದಿಂದ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ಸಂತೋಷದಾಯಕ ಮುಂದಿನ ದಿನಗಳಲ್ಲಿ ಈ ರೀತಿಯ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳ ಉತ್ಸಾಹದ ಪ್ರಭಾವ ಪ್ರತಿಯೊಂದು ಸರ್ಕಾರಿ ಶಾಲೆಗಳ ಮೇಲೆಯೂ ಬೀರಬೇಕು, ಪ್ರತಿಯೊಬ್ಬರು ಸರ್ಕಾರಿ ಶಾಲೆಗಳ ಮೇಲೆ ಕಾಳಜಿ ವಹಿಸಿ ಸರ್ಕಾರದೊಂದಿಗೆ ಕೈಜೋಡಿಸಿ ಬಡ ವಿದ್ಯಾರ್ಥಿಗಳ ಉತ್ತಮ ವಿದ್ಯಾಭ್ಯಾಸಕ್ಕೆ ಸಹಕಾರಿ ಆಗಬೇಕು ಎಂದರು.
ವಿಧಾನ ಪರಿಷತ್ ಶಾಸಕ ಸಿಟಿ ರವಿ ಮಾತನಾಡಿ ಸರ್ಕಾರಿ ಶಾಲೆಗಳು ನಮ್ಮ ಸಮಾಜಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡುತ್ತಾ ಬಂದಿದ್ದು ಪ್ರಸ್ತುತ ದಿನದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ಆಸಕ್ತಿ ಕುಗ್ಗಿದೆ ಆದರೆ ಸ್ಥಳೀಯರ ಸಹಕಾರದಿಂದ ಶಾಲೆಗಳು ಮತ್ತೊಮ್ಮೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.

ದಾನಿಗಳ ಸಹಕಾರದಿಂದ ನೂತನ ಸ್ಪರ್ಷ ಪಡೆಯುತ್ತಿರುವ ಇಂತಹ ಸರ್ಕಾರಿ ಶಾಲೆಗಳು ಮಾದರಿಯಾಗಿ ಅತ್ಯುತ್ತಮ ಪ್ರತಿಭೆಗಳನ್ನು ಹೊರತರಲು ಸಹಕಾರ ಮಾಡಿಕೊಡುತ್ತದೆ ಎಂದರು.
ಮಾಜಿ ಶಾಸಕ ಐಬಿ ಶಂಕರ್ ಮಾತನಾಡಿ ಗುರುಗಳ ಮಹತ್ವವನ್ನು ತಿಳಿಸಿಕೊಟ್ಟರು, ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಅವರು ಸಂವಿಧಾನದ ಆಶಯಗಳನ್ನು ಪೋಷಕರಿಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಹಲವು ದಾನಿಗಳು ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ವಿವಿಧ ಸಾಮಗ್ರಿಗಳನ್ನು ಶಾಲಾ ಪರಿಕರಗಳನ್ನು ದೇಣಿಗೆಯಾಗಿ ನೀಡಿ ಮಾನವೀಯತೆ ಮೆರೆದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಮೋಹನಪ್ಪ ಗೌಡ. ಶ್ರೀಕಂಠಪ್ಪ, ಕುರುವಂಗಿ ವೆಂಕಟೇಶ್, ಉಪ್ಪಳ್ಳಿಯ ಕೆ.ಭರತ್ ಸೇರಿದಂತೆ ಊರಿನ ಗ್ರಾಮಸ್ಥರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಇದ್ದರು.