ಚಿಕ್ಕಮಗಳೂರು-ಸುಳ್ಳು ದಾಖಲೆ ಸೃಷ್ಟಿಸಿ ದಲಿತರ ಜಮೀನು ಮೇಲ್ಜಾತಿಗೆ ವರ್ಗಾವಣೆ-ಕ್ರಮಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಮನವಿ

ಚಿಕ್ಕಮಗಳೂರು:- ದಲಿತರಿಗೆ ನೀಡಿರುವ ಕುಳುವಾಡಿಕೆ ಹಾಗೂ ದರ್ಖಾಸು ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ಮೇಲ್ಜಾತಿಯವರಿಗೆ ಖಾತೆ ಮಾಡಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರುಗಳು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಒಕ್ಕೂಟದ ಮುಖಂಡ ಮರ್ಲೆ ಅಣ್ಣಯ್ಯ ತಾಲ್ಲೂಕಿನ ಎರೆಹಳ್ಳಿ ಗ್ರಾಮದ ಭದ್ರಮ್ಮ ಕೋಂ ಲೇ.ಅಣ್ಣಪ್ಪನವರಿಗೆ ಹಳೇ ಮೂಡಿಗೆರೆ ಮತ್ತು ದಾರದಹಳ್ಳಿ ಗ್ರಾಮದಲ್ಲಿ ಸೇರಿದ ಜಮೀನನ್ನು ಓರ್ವ ಮಹಿಳೆ ತಾನು ಅಣ್ಣಪ್ಪನವರ ಹೆಂಡತಿಯಂದು ಸುಳ್ಳು ದಾಖಲೆ ಸೃಷ್ಟಿಸಿ ಅವರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಂಡಿರುತ್ತಾರೆ ಎಂದು ದೂರಿದರು.‌

ಮೂಲತಃ ಅಣ್ಣಪ್ಪನವರು ಸರ್ಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗಲೇ ಮೃತರಾಗಿದ್ದಾರೆ. ಆತನ ಹೆಂಡತಿ ಭದ್ರಮ್ಮ ಎಂಬುವವರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಲಭ್ಯವಾಗುತ್ತಿವೆ. ಈ ಬಗ್ಗೆ ಎಲ್ಲಾ ದಾಖಲಾತಿಗಳಿವೆ ಹಾಗೂ ಮಗನಿಗೆ ಸರ್ಕಾರಿ ನೌಕರಿಯನ್ನು ನೀಡಲಾಗಿದೆ ಎಂದರು.

ಹೀಗಾಗಿ ತಾತನಿಂದ ಬಂದ ಕುಳುವಾಡಿಕೆ ಜಮೀನು ಕಾನೂನಿನ ಪ್ರಕಾರ ಭದ್ರಮ್ಮ ಅವರಿಗೆ ಸೇರಬೇ ಕಾಗಿದೆ. ಈ ಪ್ರಕರಣದ ಸಂಬಂಧ ಮೂಡಿಗೆರೆ ತಹಶೀಲ್ದಾರ್, ಕಚೇರಿಯ ಕೆಲವು ನೌಕರರು ಹಣದ ಆಸೆಗೆ ಬಲಿಯಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಾತನ ಹೆಸರಿನಲ್ಲಿದ್ಧ ಖಾತೆ, ವಂಶವೃಕ್ಷ ನಕಲಿಸಿ ಹಿಂದುಳಿದ ವರ್ಗದ ಮಹಿಳೆಗೆ ಸೇರಿಸಲಾಗಿದೆ ಎಂದರು.

ಕಾನೂನಿನಡಿ ಕುಳುವಾಡಿಕೆ ಭೂಮಿಯನ್ನು ಬೇರೆಯವರಿಗೆ ವರ್ಗಾಯಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಸುಳ್ಳು ದಾಖಲೆ ಸೃಷ್ಟಿಸಿರುವ ಖಾತೆಯನ್ನು ಕೂಡಲೇ ರದ್ದುಮಾಡಿ ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರುಗಳಾದ ದಂಟರಮಕ್ಕಿ ಶ್ರೀನಿವಾಸ್, ರಘು, ವಿರೂಪಾಕ್ಷ ಮಾಗಡಿ, ಪೂರ್ಣೇಶ್ ಸತ್ತಿಹಳ್ಳಿ, ಶಿವಣ್ಣ ಎನ್.ಆರ್.ಪುರ ಹಾಜರಿದ್ದರು.

-ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?