ಚಿಕ್ಕಮಗಳೂರು;ಜಿಲ್ಲೆಯಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ-ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ

ಚಿಕ್ಕಮಗಳೂರು:ಜಿಲ್ಲೆಯಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಅವರು ಹೇಳಿದ್ದಾರೆ.

ನಗರದ ಕಾಬ್‌ಸೆಟ್‌ನಲ್ಲಿ ವಸ್ತ್ರ ಚಿತ್ರಕಲಾ ಉದ್ಯಮಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿನಿ ಯೋಜನೆಯಡಿ ಉದ್ಯಮಶೀಲತಾಭಿವೃದ್ಧಿ ತರಬೇತಿ ಪಡೆದಿರುವ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೀಪಗಳನ್ನು ಸಿದ್ಧಪಡಿಸಿ ಅವುಗಳನ್ನು ಮೊದಲನೇ ಹಂತದಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಿಗೆ ನೀಡಲು ಉದ್ದೇಶಿಸಲಾಗಿದೆ.ನಂತರದಲ್ಲಿ ಇತರೆ ಇಲಾಖೆಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.

ಮಹಿಳಾ ಸಬಲೀಕರಣ ಆಗಬೇಕು,ಇದು,ಸರ್ಕಾರದ ಮೂಲ ಉದ್ದೇಶವಾಗಿದೆ.ಇದಕ್ಕಾಗಿ ತರಬೇತಿಯನ್ನು ನೀಡಲಾಗುತ್ತಿದೆ.ಇದರ ಪ್ರಯೋಜನ ಪಡೆದುಕೊಳ್ಳಬೇಕು.ಪ್ರತಿಯೊಬ್ಬ ಮಹಿಳೆಯರಲ್ಲೂ ಒಂದು ಕನಸ್ಸು ಇರುತ್ತದೆ. ಅದು,ನನಸಾಗಬೇಕು,ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು,ಇದಕ್ಕೆ ಬೇಕಾದ ತರಬೇತಿಯನ್ನು ಪಡೆದು ಕೌಶಲ್ಯತೆ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಯಾವುದೇ ಕ್ಷೇತ್ರ ಇರಲಿ ಅಲ್ಲಿ ನಮ್ಮ ಪ್ರಾಮುಖ್ಯತೆ ಎಷ್ಟು ಎಂಬುದನ್ನು ಸಾಭೀತುಪಡಿಸಬೇಕು.ಒಳ್ಳೆಯ ಕೆಲಸ ನಮ್ಮನ್ನು ಗುರುತು ಮಾಡುತ್ತದೆ.ಅದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.ಅದರಿಂದ ಏನೇ ಕಲಿತರೂ ನಮ್ಮಲ್ಲಿ ಛಲ ಹೊಂದಿರಬೇಕು ಆಗ ಮಾತ್ರ ಯಶಸ್ಸು ನಮ್ಮದಾಗುತ್ತದೆ ಎಂದರು.

ತರಬೇತಿಗಳಲ್ಲಿ ಕಲಿತಿರುವುದು ಅಷ್ಟೇ ದಿನಕ್ಕೆ ಸೀಮಿತವಾಗಿರಬಾರದು.ಅದನ್ನು ವೃತ್ತಿಯಾಗಿ ಕಾರ್ಯ ರೂಪಕ್ಕೆ ತರಬೇಕು,ಆಗ ಮಾತ್ರ ಕಲಿಕೆಗೆ ಗೌರವ ಬರುತ್ತದೆ.ನಮ್ಮ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ.ಹಾಗಾಗಿ ಭವಿಷ್ಯದ ಮುಂದಿನ ದಿನಗಳನ್ನು ಚಾಲೆಂಜಾಗಿ ತೆಗೆದುಕೊಳ್ಳಬೇಕು.ಆ ಮೂಲಕ ಸಂಸಾರಕ್ಕೆ ಅಷ್ಟೆ ಅಲ್ಲ, ಸಮಾಜಕ್ಕೂ ಮಾದರಿಯಾಗೇಬೇಕು ಎಂದು ಹೇಳಿದರು.

ಕೌಶಲ್ಯ ತರಬೇತಿ ಪಡೆದಿರುವ ಮಹಿಳೆಯರು ಗ್ರಾಮೀಣ ಭಾಗದಲ್ಲಿ ಇದೇ ವೃತ್ತಿಯ ಬಗ್ಗೆ ಆಸಕ್ತಿ ಇರುವ ಮಹಿಳೆಯರನ್ನು ಒಟ್ಟುಗೂಡಿಸಿ ಅವರಿಗೂ ತರಬೇತಿ ನೀಡಿ ಒಟ್ಟಾಗಿ ವೃತ್ತಿಯಲ್ಲಿ ತೊಡಗಿದರೆ ಎಲ್ಲರಿಗೂ ಅನುಕೂಲವಾಗಲಿದೆ.ಇದರಿಂದ ಮಾರ್ಕೇಟಿಂಗ್‌ಗೂ ಅನುಕೂಲವಾಗಲಿದೆ. ಕಚ್ಚ ಸಾಮಾಗ್ರಿಗಳು ಹೋಲ್ ಸೆಲ್ ದರದಲ್ಲಿ ಖರೀದಿ ಮಾಡಲು ಸಹಾಯವಾಗಲಿದೆ.ಮಹಿಳೆಯರು ಉತ್ಪಾಧನೆ ಮಾಡಿರುವ ವಸ್ತುಗಳ ಮಾರಾಟಕ್ಕೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಅಸ್ಮಿತೆ ಕೇಂದ್ರವನ್ನು ತೆರೆಯಲಾಗಿದ್ದು,ಅಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ವಸ್ತುಗಳ ಮಾರಾಟಕ್ಕೆ ಹಲವು ದಾರಿಗಳು ಇವೆ.ಇದಕ್ಕಾಗಿ ಹಲವು ವೆಬ್‌ಸೈಟ್‌ಗಳು ಇತರೆ ಸಂಪರ್ಕ ಸಾಧನಗಳು ಇವೆ ಎಂದ ಅವರು,ವಸ್ತ್ರ ಉದ್ಯಮದಲ್ಲಿ ನಾವು ಬೆಳೆಯಬೇಕಾದರೆ ಗುಂಪಾಗಿ ಉದ್ಯಮ ನಡೆಸಿಕೊಂಡು ಹೋಗಬೇಕು. ಆಗ ನಮ್ಮಲ್ಲಿ ಶಕ್ತಿ ಬರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೂನಿಯನ್ ಆರ್‌ಸೆಟಿಯ ನಿರ್ದೇಶಕ ಯೋಗೇಂದ್ರ ಪ್ರತಾಪ್ ಸಿಂಗ್, ಜಿಲ್ಲಾ ಪಂಚಾಯ್ತಿಯ ಡಿಆರ್‌ಡಿಎ ಕೋಶದ ಯೋಜನಾ ನಿರ್ದೇಶಕಿ ನಯನಾ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.ಎಚ್.ಕೆ. ಶ್ವೇತಾ ಪ್ರಾರ್ಥಿಸಿದರು.ಯೂನಿಯನ್ ಆರ್‌ಸೆಟಿ ಉಪನ್ಯಾಸಕ ಸಿ. ರವಿಚಂದ್ರ ಸ್ವಾಗತಿಸಿದರು.ಉಪನ್ಯಾಸಕಿ ಎಸ್.ಡಿ. ದೀಪಿಕಾ ವಂದಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿರೀಕ್ಷಕರಾದ ಬಿ.ಕೆ. ಪವಿತ್ರ ಅವರು ಕಾರ್ಯಕ್ರಮ ನಿರೂಪಿಸಿದರು.
.

Leave a Reply

Your email address will not be published. Required fields are marked *

× How can I help you?