ಚಿಕ್ಕಮಗಳೂರು:ಕನ್ನಡ ಜ್ಯೋತಿ ರಥಯಾತ್ರೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ರಥಯಾತ್ರೆಯ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಹೇಳಿದರು.
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕನ್ನಡ ಜ್ಯೋತಿ ರಥಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೆಪ್ಟೆಂಬರ್ ೨೦ ರಂದು ಬೇಲೂರು ಮಾರ್ಗವಾಗಿ ಆಗಮಿಸುವ ರಥವನ್ನು ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದಲ್ಲಿ ಸ್ವಾಗತಿಸಲಾಗುವುದು.ಸೆಪ್ಟೆಂಬರ್ ೨೧ ರಂದು ಬೆಳಿಗ್ಗೆ ೯ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಪಂಚಾಯತಿಯವರೆಗೆ ಮೆರವಣಿಗೆ ಸಾಗಲಿದ್ದು ವಿವಿಧ ಕಲಾ ತಂಡಗಳ ಕಲಾ ಪ್ರದರ್ಶನ ಇರಲಿದೆ.
ಸಾಂಸ್ಕೃತಿಕ ವಲಯದ ಪ್ರಮುಖರು,ಕನ್ನಡ ಪರಸಂಘಟನೆಗಳ ಪದಾಧಿಕಾರಿಗಳು,ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ರಥಯಾತ್ರೆಯೂ ಮುಂದುವರೆದು ಉದ್ದೇಬೋರನಹಳ್ಳಿ, ಸಖರಾಯಪಟ್ಟಣ,ಸರಸ್ವತಿಪುರ ಮಾರ್ಗವಾಗಿ ಕಡೂರು ಕಡೆಗೆ ಸಾಗಲಿದೆ ಎಂದರು.
ಸೆಪ್ಟೆಂಬರ್ ೨೨ ರಂದು ಕಡೂರು,೨೩ ಕ್ಕೆ ತರೀಕೆರೆ,೨೪ ಕ್ಕೆ ಎನ್.ಆರ್ ಪುರ,೨೫ ಕ್ಕೆ ಕೊಪ್ಪ,೨೬ ರಂದು ಮೂಡಿಗೆರೆಗೆ ರಥಯಾತ್ರೆ ಬರಲಿದೆ.ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ೫೦ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-೫೦ ರ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆ ನಡೆಸಲಾಗುತ್ತಿದೆ.ಕನ್ನಡ ಪರ ಸಂಘಟನೆಗಳು,ಕನ್ನಡಾಭಿಮಾನಿಗಳು,ಸಾರ್ವಜನಿಕರು,ವಿದ್ಯಾರ್ಥಿಗಳು ರಥಯಾತ್ರೆಯಲ್ಲಿ ಭಾಗವಹಿಸಿ ರಥಯಾತ್ರೆ ಯಶಸ್ವಿಗೊಳಿಸಬೇಕಿದೆ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
—————ಸೂರಿ ಬಣಕಲ್