ಚಿಕ್ಕಮಗಳೂರು-ಮದ್ರಸಗಳನ್ನು ಮುಚ್ಚಿಸುವ ಮತ್ತು ಮಂಡಳಿಗಳಿಗೆ ಧನಸಹಾಯ ನೀಡುವುದನ್ನು ನಿಲ್ಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶಿಫಾರಸು ಮಾಡಿ ಮುಸ್ಲೀಂರನ್ನು ಕಡೆಗಣಿಸುತ್ತಿದೆ ಎಂದು ಜಾಮಿಯಾ ಅರೇಬಿ ಯಾ ಕಂಜುಲ್ ಇಮಾನ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಫೈರೋಜ್ ಅಹಮದ್ ರಜ್ವಿ ಆರೋಪಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಇದು ಸಂಘ ಪರಿವಾರದ ಸೈದ್ಧಾಂತಿಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಮತ್ತು ಮುಸ್ಲಿಮರನ್ನು ಗುರಿಯಾಗಿಸುವ ದೊಡ್ಡ ಕಾರ್ಯಸೂಚಿಯ ಭಾಗವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.
ಆಯೋಗದ ಶಿಫಾರಸ್ಸು ಕರ್ನಾಟಕದ ಮದ್ರಸಾಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ರಾಜ್ಯ ಸರ್ಕಾರವು ಇಲ್ಲಿನ ಮದ್ರಸಗಳಿಗೆ ಯಾವುದೇ ಹಣಕಾಸಿನ ನೆರವು ನೀಡುತ್ತಿಲ್ಲ. ಮದ್ರಸಾಗಳೆಂದರೆ ಬೆಳಿಗ್ಗೆ ಮತ್ತು ಸಂಜೆ ಒಂದೆರಡು ಗಂಟೆಗಳ ಕಾಲ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರಗಳಾಗಿವೆ.
ಈಗಾಗಲೇ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಹಯೋಗದೊಂದಿಗೆ ರಾಜ್ಯದ 100 ಮದರಸಾಗಳಲ್ಲಿ ಸುಮಾರು 5000ಮದ್ರಸಾ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿ 10ನೇ ತರಗತಿಯವರೆಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಆಯೋಗದ ಶಿಫಾರಸು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ,ಇದನ್ನು ಕೂಡಲೇ ಹಿಂಪಡೆಯಬೇಕು. ಈ ಶಿಫಾರಸನ್ನು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡರೆ ಉತ್ತರ ಭಾರತದ ಮದ್ರಸಾಗಳಿಗೆ ದೊಡ್ಡಮಟ್ಟಿನ ಪರಿಣಾಮ ಬೀರಬಹುದು ಎಂದಿದ್ದಾರೆ.
ಮದ್ರಸ ಶಿಕ್ಷಣದ ಬಗ್ಗೆ ತಪ್ಪು ವ್ಯಾಖ್ಯಾನದಿಂದಾಗಿ ಮಕ್ಕಳು ಶಿಕ್ಷಣದಿಂದ ಅವಕಾಶ ವಂಚಿತರಾಗುವ ಹಾಗೂ ತಾರತಮ್ಯದ ಹೊಸ ಪದರಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಮದರಸಾಗಳಿಗೆ ರಾಜ್ಯ ಧನಸಹಾಯವನ್ನು ನಿಲ್ಲಿಸಲು ಶಿಫಾರಸು ಮಾಡುವುದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದಿರುವ ಅವರು,ರಾಜ್ಯ ಸರ್ಕಾರ ನೀಡುತ್ತಿರುವ ಅನುದಾನವನ್ನು ನಿಲ್ಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಾಡಿರುವ ಶಿಫಾರಸ್ಸು ಆಕ್ಷೇಪಾರ್ಹ, ಭಾರತೀಯ ಸಂವಿಧಾನದ ಅನುಚ್ಛೇದ 29, 30ರಲ್ಲಿ ಖಾತ್ರಿ ಪಡಿಸಿರುವ ಅಲ್ಪಸಂಖ್ಯಾತರು ತಮ್ಮ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ತಿಳಿಸಿದ್ದಾರೆ.
———––ಸುರೇಶ್