ಚಿಕ್ಕಮಗಳೂರು: ಪರಿಸರ ಸಮತೋಲನ ಕಾಪಾಡಿಕೊಳ್ಳಲು ಅಮೂಲ್ಯ ಕೊಡುಗೆ ನೀಡುತ್ತಿರುವುದು ಪಶ್ಚಿಮ ಘಟ್ಟಗಳು ಎಂದು ವೈಲ್ಡ್ ಕ್ಯಾಟ್-ಸಿ ಸಂಸ್ಥೆಯ ರೂವಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ವಿ.ಗಿರೀಶ್ ಹೇಳಿದರು.
ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವೈಲ್ಡ್ ಕ್ಯಾಟ್-ಸಿ ಸಂಸ್ಥೆಯ ವತಿಯಿಂದ ಶಾಲಾ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಮಾತನಾಡಿದ ಅವರು, ನಗರದ ಸ್ಕೌಟ್ಸ್ ಭವನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಶೋಲಾ ಕಾಡುಗಳು, ಕೀಟ ಪ್ರಪಂಚ, ಹಲವಾರು ಜಾತಿಯ ಪಕ್ಷಿಗಳು, ವನ್ಯ ಜೀವಿಗಳು, ವಿಶಿಷ್ಟ ಜಾತಿಯ ಕಪ್ಪೆಗಳು ಮತ್ತು ಹಾವುಗಳ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು. ಆ ಜವಾಬ್ದಾರಿಯನ್ನು ಮಕ್ಕಳು ಮುಂದುವರಿಸಿಕೊಂಡು ಹೋಗಬೇಕು ಎಂದು ಕಿವಿ ಮಾತು ಹೇಳಿದರು.

ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ವೈಲ್ಡ್ ಕ್ಯಾಟ್-ಸಿ ಸಂಸ್ಥೆ ೨೫ ವರ್ಷಗಳ ಸುದೀರ್ಘ ಪಯಣದಲ್ಲಿ ಪರಿಸರ ರಕ್ಷಣೆಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದನ್ನು ಮುಂದುರಿಸಿಕೊಂಡು ಬರುತ್ತಿದೆ. ಈ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಂವಾದ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ನಗರದ ಟಿಎಂಎಸ್ ಶಾಲೆ, ಪ್ರೈಡ್ ಯುರೋ ಶಾಲೆ ಮತ್ತು ಎಂಇಎಸ್ ಡೆಮೋನ್ಸ್ಟ್ರೇಷನ್ ಶಾಲಾ ಮಕ್ಕಳು ಸಂವಾದದಲ್ಲಿ ಭಾಗವಹಿಸಿ ಹಲವು ಮಹತ್ವದ ವಿಚಾರಗಳ ಬಗ್ಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಶಾಲಾ ಅಧ್ಯಾಪಕರು, ಆಡಳಿತ ಮಂಡಳಿ ಮುಖ್ಯಸ್ಥರು, ವೈಲ್ಡ್ ಕ್ಯಾಟ್-ಸಿ ಸಂಸ್ಥೆಯ ಪ್ರಮುಖರು ಭಾಗವಹಿಸಿದ್ದರು.
– ಸುರೇಶ್ ಎನ್. ಚಿಕ್ಕಮಂಗಳೂರು