ಚಿಕ್ಕಮಗಳೂರು– ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆಂದೆ ವಿವಿಧ ಮಾನಸಿಕ ಆರೋಗ್ಯ ವೃತ್ತಿಪರರಿಂದ ಪ್ರಾರಂಭವಾದ ಮನೋಸ್ಪಂದನ ಚಿಕಿತ್ಸಾ ಕೇಂದ್ರವು ನಗರದ ಹೊರವಲಯದಲ್ಲಿರುವ ಹೌಸಿಂಗ್ ಬೋರ್ಡ್ ಸಮೀಪ ಉದ್ಘಾಟನೆ ಗೊಂಡಿತು.
ಮನೋ ಸಾಮಾಜಿಕ ಕಾರ್ಯಕರ್ತರಾದ ರಾಜು ನರಸಯ್ಯ ಮಾತನಾಡಿ ಮನೋಸ್ಪಂದನ ಮನೋವೈದ್ಯಕೀಯ ಮತ್ತು ಆಪ್ತಸಮಾಲೋಚನಾ ಕೇಂದ್ರವು ಚಿಕ್ಕಮಗಳೂರು ಜಿಲ್ಲೆಯಲ್ಲೇ ಪ್ರಪ್ರಥಮವಾಗಿ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆಂದೆ ವಿವಿಧ ಮಾನಸಿಕ ಆರೋಗ್ಯ ವೃತ್ತಿಪರರಿಂದ ಪ್ರಾರಂಭವಾದ ಆರೋಗ್ಯ ಸಂಸ್ಥೆಯಾಗಿದ್ದು, ಇಲ್ಲಿ ಎಲ್ಲಾ ರೀತಿಯ ಮಾನಸಿಕ ಕಾಯಿಲೆಗಳು, ವರ್ತನೆಗಳಲ್ಲಿನ ಸಮಸ್ಯೆಗಳಿಗೆ ಚಿಕಿತ್ಸೆ ಹಾಗೂ ವಿವಿಧ ರೀತಿಯ ಆಪ್ತ ಸಮಾಲೋಚನಾ ಸೇವೆಗಳನ್ನ ನೀಡಲಾಗುವುದು ಎಂದರು.
ಮನೋ ವೈದ್ಯರಾದ ವಿನಯ್ ಕುಮಾರ್ ಮಾತನಾಡಿ ಆಪ್ತ ಸಮಾಲೋಚನೆಯಲ್ಲಿ ವೈವಾಹಿಕ ಮತ್ತು ಕೌಟುಂಬಿಕ ಆಪ್ತ ಸಮಾಲೋಚನೆ, ಲೈಂಗಿಕ ಸಮಸ್ಯೆಗಳಿಗೆ ಚಿಕಿತ್ಸೆ ಮತ್ತು ಸಮಲೋಚನೆ, ಲೈಂಗಿಕ ಮಾರ್ಗದ ಸೋಂಕುಗಳು, ಮಾದಕ ವ್ಯಸನ ಮತ್ತು ಮೊಬೈಲ್, ಕ್ಯಾನ್ಸರ್ ಮಧುಮೇಹ ಹಾಗೂ ರಕ್ತದೊತ್ತಡದ ರೋಗಿಗಳಿಗೆ ಆಪ್ತ ಸಮಾಲೋಚನೆ, ವ್ಯಕ್ತಿತ್ವ ಬೆಳವಣಿಗೆ ಮತ್ತು ಜೀವನ ಕೌಶಲ್ಯ ಶಿಕ್ಷಣ ಮತ್ತು ತರಬೇತಿ, ವಾಕ್ ಮತ್ತು ಶ್ರವಣ ಚಿಕಿತ್ಸೆ, ಮಕ್ಕಳಿಗೆ ಬೇಸಿಗೆ ಶಿಬಿರ, ಹೆಚ್.ಐ.ವಿ ಸೋಂಕಿತರಿಗೆ ಆಪ್ತಸಮಾಲೋಚನೆ ಮಾಡಲಾಗುವುದು ಎಂದು ತಿಳಿಸಿದರು.

ಮತ್ತೊಬ್ಬ ಮನೋಸಾಮಾಜಿಕ ಕಾರ್ಯಕರ್ತರಾದ ಎಂ.ಕೆ ಜಯಣ್ಣ ಮಾತನಾಡಿ, ಮನೋ ಸ್ಪಂದನದ ಸೇವೆಗಳೆಂದರೆ ಮಾನಸಿಕ ಸಾಮರ್ಥ್ಯ ಪರೀಕ್ಷೆಗಳು, ಮನೋ ರೋಗಗಳ ಮೌಲ್ಯಮಾಪನ, ಮಾನಸಿಕ ರೋಗಗಳ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ನಡೆಸುವುದಾಗಿದೆ ಎಂದರು.
ಈ ಸಂದರ್ಭದಲ್ಲಿ ಚಿಕಿತ್ಸಾ ಮನೋಶಾಸ್ತ್ರಜ್ಞರಾದ ಡಾ.ಸತೀಶ್, ಸಾಮಾಜಿಕ ಮನೋಶಾಸ್ತ್ರಜ್ಞರಾದ ಕಿರಣ್, ಮನೋ ಸಾಮಾಜಿಕ ಕಾರ್ಯಕರ್ತರಾದ ಪ್ರಭುಕುಮಾರ್ ಉಪಸ್ಥಿತರಿದ್ದರು.