
ಚಿಕ್ಕಮಗಳೂರು:ಸಖರಾಯಪಟ್ಟಣ, ದೇವನೂರು ಜಿ.ಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಸಧ್ಯದಲ್ಲೇ ಭದ್ರಾ ಉಪಕಣಿವೆ 3ನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರುಗಳನ್ನು ಆಹ್ವಾನಿಸಿ ಚಾಲನೆ ನೀಡಲಾಗುವುದೆಂದು ಶಾಸಕ ಹೆಚ್.ಡಿ. ತಮ್ಮಯ್ಯ ಭರವಸೆ ನೀಡಿದರು.
ಅವರು ಇಂದು ಕಡೂರು ತಾಲ್ಲೂಕು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಡಘಟ್ಟ-ಜೋಡಿಹೋಚಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ 3.47 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ, ಶಂಕಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕಳೆದ ಎಂಟು ತಿಂಗಳ ಹಿಂದೆ ಮೇಲನಹಳ್ಳಿಯಿಂದ ನಿಡಘಟ್ಟದವರೆಗೆ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು, ಗುತ್ತಿಗೆದಾರರು ವಿಳಂಭ ಮಾಡಿದ್ದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ತಾವು ಅಧಿಕಾರಿಗಳ ಮೇಲೆ ಒತ್ತಡ ತಂದು ಈಗಾಗಲೇ ಈ ಕಾಮಗಾರಿ ಬಹುತೇಕ ಮುಗಿದಿದ್ದು, ವೈಟ್ ಟ್ಯಾಪಿಂಗ್ ಮುಗಿಸಿ ಈ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದೆಂದು ಹೇಳಿದರು.
ಜಿಲ್ಲೆಯಾದ್ಯಂತ ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೇಸಿಗೆ ಕಾಲವಾಗಿರುವ ಈ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ಅಭಾವ ಆಗದಂತೆ ಮುನ್ನಚ್ಚರಿಕೆ ಕ್ರಮ ವಹಿಸುವಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಸಭೆ ನಡೆಸಿ ಸಂಬoಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನಿಡಘಟ್ಟ ಗ್ರಾ.ಪಂ ಗೆ 2.30 ಕೋಟಿ ರೂ ಹಾಗೂ ಜೋಡಿಹೋಚಿಹಳ್ಳಿ ಗ್ರಾ.ಪಂ ಗೆ 1.17 ಕೋಟಿ ರೂ ಒಟ್ಟು 3.47 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ದೇವಾಲಯ ಜೀರ್ಣೋದ್ದಾರ, ಸಮುದಾಯ ಭವನ ನಿರ್ಮಾಣ, ಕಾಂಕ್ರೀಟ್ ರಸ್ತೆ, ಚರಂಡಿ, ಶಾಲೆ ಅಭಿವೃದ್ಧಿ ಮುಂತಾದ ಎರಡು ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಎರಡೂ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಡೆಸುವ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನಕ್ಕೆ ತಂದರೆ ವಾಟರ್ ಸಪ್ಲೇ, ಎಇಇ, ಜೆಇ, ಇಓ, ಪಿಡಿಓ ಇದ್ದು, ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆಂದು ಹೇಳಿದರು.