ಚಿಕ್ಕಮಗಳೂರು:- ತಾಲ್ಲೂಕಿನ ಮುಗುಳುವಳ್ಳಿ ಗ್ರಾಮ ಪಂಚಾಯಿತಿಗೆ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಶೃತಿ ಉಮೇಶ್ ಹಾಗೂ ಉಪಾಧ್ಯಕ್ಷರಾಗಿ ಮಲ್ಲೇಶಪ್ಪ ಮಾಗಡಿ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಅಧ್ಯಕ್ಷಗಿರಿ ಎಂಬುದು ಒಂದು ದಿನದ ಸಮ್ಮಾನ, ಇನ್ನುಳಿದ ದಿನಗಳು ಸಾರ್ವಜನಿಕರ ಕೆಲಸದಲ್ಲಿ ತೊಡಗುವುದು ಅತಿ ಮುಖ್ಯ. ಅಧಿಕಾರ ಎಂದಿಗೂ ಶಾಶ್ವತವಲ್ಲ, ಅಭಿವೃದ್ದಿ ಕಾರ್ಯಗಳಿಂದ ಮಾತ್ರ ಗ್ರಾಮಸ್ಥರ ಮನದಾಳದಲ್ಲಿ ಶಾಶ್ವತವಾಗಿ ನೆಲೆಸಲು ಸಾಧ್ಯ ಎಂದು ತಿಳಿಸಿದರು.
ಅಧಿಕಾರದಲ್ಲಿ ಮಾನದಂಡ ಆಧಾರವಾಗಿಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಗ್ರಾಮಸ್ಥರ ಅನುಕೂಲತೆಗೆ ಪೂರ್ಣಪ್ರಮಾಣ ಕೆಲಸವಾಗಿದ್ದರೂ, ಶೇ.7೦ರಷ್ಟು ಪರಿಹಾರ ಕಲ್ಪಿಸುವ ಜಾಣ್ಮೆ ಹೊಂದಿರಬೇಕು. ಪಂಚಾಯಿತಿಗೆ ಬರುವಂಥ ಗ್ರಾಮಸ್ಥರ ಸಮಸ್ಯೆ ತಾಳ್ಮೆಯಿಂದ ಆಲಿಸಿದರೆ ಮಾತ್ರ ಆಡಳಿತ ಚುಕ್ಕಾಣಿ ಹಿಡಿದಿದ್ದು ಸಾರ್ಥಕವಾಗಲಿದೆ ಎಂದರು.

ಜಿ.ಪA. ಮಾಜಿ ಸದಸ್ಯ ಮುಗುಳುವಳ್ಳಿ ನಿರಂಜನ್ ಮಾತನಾಡಿ, ಆಡಳಿತ ಚುಕ್ಕಾಣಿ ಎಂಬುವುದು ಹೂ ವಿನ ಹಾಸಿಗೆಯಲ್ಲ, ಮುಳ್ಳಿನ ಹಾಸಿಗೆಯಂತೆ. ಪ್ರತಿದಿನವು ಗ್ರಾಮಸ್ಥರ ಮೂಲಸವಲತ್ತಿಗೆ ಒತ್ತು ನೀಡುತ್ತಿರ ಬೇಕು. ಸಣ್ಣಪುಟ್ಟ ಲೋಪದೋಷಗಳು ಸಹಜ, ಹೀಗಾಗಿ ಸಬೂಬು ಹೇಳದಂತೆ ಹಾಲಿ, ಮಾಜಿ ಸದಸ್ಯರು ಗಳ ಮಾರ್ಗದರ್ಶನದಲ್ಲಿ ಸಾಗಬೇಕು ಎಂದು ತಿಳಿಸಿದರು.
ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಮಸ್ಯೆ ಹಾಗೂ ಇ-ಸ್ವತ್ತು ಖಾತೆಗೆ ಪಂಚಾಯಿತಿ ಆಡಳಿತವು ಸಾಧಕ-ಬಾಧಕ ತಿಳಿ ಸುವ ಮೂಲಕ ಪ್ರತಿಯೊಬ್ಬರು ವಿಶ್ವಾಸಕ್ಕೆ ತೆಗೆದುಕೊಂಡು ಕಾಲಾವಕಾಶದೊಳಗೆ ಪೂರ್ಣಗೊಳಿಸಿದರೆ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗುತ್ತೀರಿ ಎಂದು ಸಲಹೆ ಮಾಡಿದರು.
ನೂತನ ಅಧ್ಯಕ್ಷೆ ಶೃತಿ ಉಮೇಶ್ ಮಾತನಾಡಿ, ಸಿಕ್ಕಂಥ ಅವಕಾಶದಲ್ಲಿ ಗ್ರಾಮಸ್ಥರ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ಅಲ್ಲದೇ ಸರ್ವರ ಅಭಿಪ್ರಾಯದಂತೆ ಶಕ್ತಿಮೀರಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮುಗುಳುವಳ್ಳಿ, ಅಂಬಳೆ ಹೋಬಳಿ ಅಧ್ಯಕ್ಷ ಯೋಗೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪರ ಮೇಶ್, ಮುಖಂಡ ದೀಪಕ್‌ದೊಡ್ಡಯ್ಯ, ಮುಖಂಡರಾದ ವಿಜಯ್‌ಕುಮಾರ್, ಗ್ರಾ.ಪಂ. ಸದಸ್ಯರಾದ ರಘುನಂದನ್, ಶೇಖರ್, ಉಮೇಶ್, ವನಿತಾ, ಸವಿತಾ, ಭಾಗ್ಯ, ಕಲಾವತಿ, ಚುನಾವಣಾಧಿಕಾರಿ ಆರ್.ಶಿವ ಕುಮಾರ್, ಪಿಡಿಓ ಸುಮಾ ಮತ್ತಿತರರಿದ್ದರು.
- ಸುರೇಶ್ ಎನ್.