ಚಿಕ್ಕಮಗಳೂರು-ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸಬಲರಾಗಲು ಸರ್ಕಾರದ ನಿರ್ದೇಶನದಂತೆ ನಗರಸಭೆಯಿಂದ ಆಸಕ್ತ ಸ್ತ್ರೀ ಸಹಾಯ ಸಂಘಗಳಿಗೆ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ನಗರಸಭಾಧ್ಯಕ್ಷರಾದ ಸುಜಾತಾ ಶಿವಕುಮಾರ್ ಅವರು ತಿಳಿಸಿದರು.
ನಗರಸಭಾ ಸಭಾಭವನದಲ್ಲಿ ಸ್ತ್ರೀ ಸಂಘಗಳಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರದಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿನ ಆಸ್ತಿ ವಸೂಲಾತಿ ಸೇರಿದಂತೆ ನೀರಿನ ಶುಲ್ಕ ವಸೂಲಾತಿಗಾಗಿ ಸರ್ಕಾರವು ನೂತನ ಯೋಜನೆ ರೂಪಿಸಿದ್ದು ಈ ಮೂಲಕ ಸ್ತ್ರೀ ಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಮೂಲಕ ಆಸಕ್ತ ಸಂಘಗಳು ಅರ್ಜಿ ಸಲ್ಲಿಸಿ, ನಗರಸಭೆಯ ಈ ಪ್ರಯತ್ನಕ್ಕೆ ಕೈಜೋಡಿಸುವುದರ ಮೂಲಕ ಮಹಿಳೆಯರು ಸಮಾಜದಲ್ಲಿ ಸದೃಢರಾಗಬೇಕೆಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಅವರು ಮಾತನಾಡಿ, ಕರ್ನಾಟಕದಲ್ಲಿ ಸರ್ಕಾರವು ಚಿಂತಿಸಿರುವ ಈ ನೂತನ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗುವುದರೊಂದಿಗೆ ನಗರಸಭೆಯ ಆದಾಯವು ವೃದ್ಧಿಯಾಗಲಿದೆ ಈ ಮೂಲಕ ತೆರಿಗೆ ವಸೂಲಿಯಲ್ಲಿ ಹೊಸ ಕ್ರಾಂತಿಯನ್ನೇ ಉಂಟುಮಾಡಬಹುದಾಗಿದೆ ಇದಕ್ಕಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಅತಿ ಅವಶ್ಯವಾಗಿದ್ದು ಈ ಯೋಜನೆಯ ಸದುಪಯೋಗವನ್ನು ಪಡಿಸಿಕೊಂಡು ಆಸಕ್ತ ಮಹಿಳಾ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ನೌಕರರ ಕೊರತೆಯಿಂದಾಗಿ ಮನೆ ಮನೆಗೆ ತೆರಳಿ ಕಂದಾಯ ವಸೂಲಿ ಮಾಡಲು ಸ್ವಲ್ಪ ಕಷ್ಟ ಸಾಧ್ಯವಾಗಿದ್ದು ಈ ನೂತನ ಪ್ರಯತ್ನದಿಂದ ಮುಂದಿನ ದಿನಗಳಲ್ಲಿ ಅತ್ಯುತ್ತಮವಾಗಿ ಕಂದಾಯ ವಸೂಲಿ ಮಾಡಬಹುದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಯ್ಕೆಯಾದ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ವಸೂಲಿ ಮಾಡಲಾದ ತೆರಿಗೆಯ ಶೇಕಡ ಐದರಷ್ಟು ರನ್ನು ಪ್ರೋತ್ಸಾಹ ಧನದ ರೂಪದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿ ಶಿವಾನಂದ್ ಸೇರಿದಂತೆ ಹಲವು ಸ್ತ್ರೀ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಸದಸ್ಯರು ಇದ್ದರು.