ಚಿಕ್ಕಮಗಳೂರು;ನಿರ್ಮಾಣ ಹಂತದ ನಾರಾಯಣಗುರು ಸಮುದಾಯ ಭವನಕ್ಕೆ ಸರ್ಕಾರದಿಂದ 50ಲಕ್ಷರೂ.ಗಳ
ಅನುದಾನ ಕೊಡಿಸುವುದಾಗಿ ವಿಧಾನಪರಿಷತ್ ಸದಸ್ಯರಾದ ಕಾಂಗ್ರೇಸ್ ಮುಖoಡ ಬಿ.ಕೆ.ಹರಿಪ್ರಸಾದ್ ಭರವಸೆ ನೀಡಿದರು.
ಜಿಲ್ಲಾ ಶ್ರೀನಾರಾಯಣಗುರು ಸಮಿತಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಮೆರವಣಿಗೆಯನ್ನು ಭಾನುವಾರ ಬೆಳಗ್ಗೆ ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಭಿಮಾನ ಹಾಗೂ ಸ್ವಸಾಮರ್ಥ್ಯದಿಂದ ಬದುಕುತ್ತಿರುವ ಆರ್ಯ-ಈಡಿಗ-ಈಳವ ಸಮಾಜಬಾಂಧವರು ಆರ್ಥಿಕವಾಗಿ ಹೆಚ್ಚು ಸಬಲರಾಗಿಲ್ಲ.ಆದರೂ ದೇಣಿಗೆ ಹಾಗೂ ಸಾಲರೂಪದಲ್ಲಿ 80ಲಕ್ಷರೂ.ಹಣ ಒಗ್ಗೂಡಿಸಿ ಉಪ್ಪಳ್ಳಿಯ ಖಾಸಗಿ ಲೇ ಔಟ್‌ನಲ್ಲಿ 10000ಚದರಡಿ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನ ಖರೀದಿಸಿ,ನೆಲಪಾಯವನ್ನು ಹಾಕಿರುವುದು
ಸಂತೋಷದ ಸಂಗತಿ. ಸಮುದಾಯಭವನ ನಿರ್ಮಾಣಕ್ಕೆ ಕನಿಷ್ಠ 50ಲಕ್ಷರೂ.ಗಳನ್ನು ರಾಜ್ಯಸರ್ಕಾರದಿಂದ ಬಿಡುಗಡೆ ಮಾಡಿಸಲು ಪ್ರಯತ್ನಿಸುವ ಭರವಸೆ ಇತ್ತರು.
ಯುಗಪುರುಷ ನಾರಾಯಣಗುರುಗಳು ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬುದನ್ನು ಪ್ರತಿಪಾದಿಸಿದ್ದರು.
ಆಚರಣೆಗಳಲ್ಲಿ ವ್ಯತ್ಯಾಸವಿದ್ದರೂ ಎಲ್ಲ ಧರ್ಮಗಳ ಅಂತಿಮ ಗುರಿ ಒಂದೇ. ಧರ್ಮ ಯಾವುದೇ ಇರಲಿ ಮನುಷ್ಯ ಒಳ್ಳೆಯವನಾದರೆ ಸಾಕು ಎಂಬ ಅವರ ತತ್ವಗಳನ್ನು ಪಾಲಿಸಬೇಕಾಗಿದೆ.ಸಮುದಾಯದ ಹಿತದೃಷ್ಟಿಯಿಂದ ಎಲ್ಲ ಒಳಪಂಗಡಗಳು ಒಗ್ಗಟ್ಟಾಗಿ ಹೆಜ್ಜೆ ಹಾಕಬೇಕೆಂದ ಹರಿಪ್ರಸಾದ್, ಅದ್ಧೂರಿಯಾಗಿ ಗುರುಗಳ ಮೆರವಣಿಗೆ ಆಯೋಜಿಸಿರುವುದು ಅಭಿಮಾನದ ಸಂಗತಿ ಎಂದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀವಿಖ್ಯಾತಾನಂದ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ ಸಂಘಟನೆಯಿoದ ಬಲಿಷ್ಟರಾಗಿ, ವಿದ್ಯೆಯಿಂದ ಪ್ರಗತಿ ಹೊಂದಬೇಕು.ದೇವರನ್ನು ಎಲ್ಲೋ ಹುಡುಕಲು ಹೋಗುವ ಅಗತ್ಯವಿಲ್ಲ,ನನ್ನಲ್ಲೆ ಇದ್ದಾನೆ ಎಂಬ ಅರಿವಿನ ಕೊರತೆ ಇದೆ.ದೇವಸ್ಥಾನಗಳು ಮಾನವನ ಅಭಿವೃದ್ಧಿಗೆ ಒಂದು ಸಾಧನ. ದೇವಸ್ಥಾನಗಳು ಉಸಿರುಗಟ್ಟಿಸುವ ತಾಣಗಳಾಗದೆ ಮನಸ್ಸಿಗೆ ಮುದ ನೀಡುವಂತಾಗಬೇಕು. ದೇಗುಲದಲ್ಲಿ ಆಡಂಬರದ ಪ್ರದರ್ಶನ ಅಗತ್ಯವಿಲ್ಲ.ಕಟ್ಟಡ ಚಿಕ್ಕದಿರಲಿ-ಚೊಕ್ಕದಿರಲಿ ಎಂದ ಸ್ವಾಮೀಜಿ,ತಿಳುವಳಿಕೆಯೆ ಜ್ಞಾನ, ಜ್ಞಾನದ ಅನುಭವವೇ ದೇವರು ಎಂದರು.
ನಿಟ್ಟೂರು ಶ್ರೀನಾರಾಯಣಗುರು ಮಹಾಸಂಸ್ಥಾನದ ಶ್ರೀ ಆರ್ಯ ರೇಣುಕಾನಂದಸ್ವಾಮೀಜಿ ಉಪಸ್ಥಿತರಿದ್ದರು.
ಜಿಲ್ಲಾ ಶ್ರೀನಾರಾಯಣಗುರು ಸಮಿತಿ ಅಧ್ಯಕ್ಷ ದಾಸರಹಳ್ಳಿ ಎಂ.ಕೃಷ್ಣಪ್ಪ ಅಧ್ಯಕ್ಷತೆವಹಿಸಿದ್ದರು.ಸಂಘದ ಉಪಾಧ್ಯಕ್ಷರುಗಳಾದ ಸಿ.ಆರ್.ಕುಮಾರ್, ಎಲ್.ಸಿ.ಚಂದ್ರು,ಅಯ್ಯಪ್ಪ, ರಾಜು, ಜಗದೀಶ್, ಚಂದ್ರುಕೋಟೆ ಮತ್ತಿತರರು ಮೆರವಣಿಗೆಯ ಮುಂಚೂಣಿಯಲ್ಲಿದ್ದರು.
ಶ್ರೀನಾರಾಯಣಗುರು ಭಾವಚಿತ್ರವನ್ನು ಪುಷ್ಪಾಲಂಕೃತ ಅಶ್ವಮೇಧ ರಥದಲ್ಲಿ ಇರಿಸಿ ನಗರದ ಪ್ರಮುಖ ರಸ್ತೆಗಳ
ಮೂಲಕ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನಕ್ಕೆ ತಲುಪಲಾಯಿತು.ಪುರುಷರು ಬಿಳಿ ವಸ್ತ್ರ ಪಂಚೆ, ಶಲ್ಯ,
ಮಹಿಳೆಯರು ಹೊನ್ನಅಂಚಿನ ಬಿಳಿಸೀರೆ, ಹಣೆಗೆ ಭಸ್ಮ ತಿಲಕ ಧರಿಸಿ ಕೇರಳ ಸಂಪ್ರದಾಯಿಕ ಉಡುಗೆ-ತೊಡುಗೆಯೊಂದಿಗೆ ಹಳದಿ ಪತಾಕೆ ಹಿಡಿದು ಜಯ ಘೋಷದೊಂದಿಗೆ ಮರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕೇರಳ ಚಂಡೇವಾದನ ಹಾಗೂ ಡಿಜೆಗೆ ಯುವಜನತೆ ಹೆಜ್ಜೆಹಾಕಿ ಸಂಭ್ರಮ ತಂದುಕೊಟ್ಟರು.