ಚಿಕ್ಕಮಗಳೂರು:ಇತ್ತೀಚೆಗೆ 6 ಜನ ಪ್ರಮುಖ ನಕ್ಸಲರು ಶರಣಾಗತಿಯಾಗುವುದರೊಂದಿಗೆ ರಾಜ್ಯದ ಬಹುತೇಕ ನಕ್ಸಲರ ಸಮಸ್ಯೆ ಮುಗಿದು ಹೋಗಿದೆ ಅನ್ನುವ ಅಭಿಪ್ರಾಯಗಳಿದ್ದು ಆ ನಕ್ಸಲರ ಶರಣಾಗತಿಯ ಹಿಂದೆ ಗೌರಮ್ಮ ಎಂಬ ದನಗಾಹಿ ಮಹಿಳೆಯೊಬ್ಬರ ಪಾತ್ರ ಇದ್ದಿದ್ದು ಸದ್ಯ ಬೆಳಕಿಗೆ ಬಂದಿದೆ.
ದಟ್ಟಕಾಡಿನಲ್ಲಿದ್ದ ನಕ್ಸಲರು ಹಾಗು ಅವರ ಶರಣಾಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಾಂತಿಗಾಗಿ ನಾಗರೀಕ ವೇದಿಕೆಯ ಮದ್ಯದ ಪ್ರಮುಖ ವಿಷಯ ವಿನಿಮಯದಲ್ಲಿ ಗೌರಮ್ಮ ಮುಖ್ಯ ಪಾತ್ರ ವಹಿಸಿದ್ದರು.
ವಿಕ್ರಂ ಗೌಡ ಎನ್ಕೌಂಟರ್ ಗು ಮುನ್ನವೇ ಈ ಶರಣಾಗತಿ ಪ್ರಕ್ರಿಯೆ ಪ್ರಾರಂಭವಾಗಿದ್ದು,ಸರಕಾರದ ಹಾಗು ಶಾಂತಿಗಾಗಿ ನಾಗರೀಕ ವೇದಿಕೆ ನೀಡುತ್ತಿದ್ದ ಮಾಹಿತಿಗಳನ್ನು ಜೊತೆಗೆ ನಕ್ಸಲರು ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳ ಪತ್ರಗಳನ್ನು ಗೌರಮ್ಮ 20 ರಿಂದ 30 ಕಿಲೋಮೀಟರ್ ನಡೆದುಕೊಂಡೆ ಎರಡು ಕಡೆಗಳಿಗೂ ಮುಟ್ಟಿಸುವ ಕೆಲಸವನ್ನು ಸುಧೀರ್ಘ 72 ದಿನಗಳ ಕಾಲ ನಡೆಸಿದ್ದರು ಎಂಬ ಮಾಹಿತಿಗಳಿವೆ.
ಶೃಂಗೇರಿ ತಾಲೂಕಿನ ಕಿಗ್ಗಾದ ಕಿತ್ತಲೆಮನೆ ನಿವಾಸಿ ಗೌರಮ್ಮನವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಸಂಘಸಂಸ್ಥೆಗಳು ಇವರನ್ನು ಗುರುತಿಸುವ ಕೆಲಸ ಮಾಡುವ ಅಗತ್ಯವಿದೆ.
————————-ಆಶಾ ಸಂತೋಷ್ ಅತ್ತಿಗೆರೆ