ಚಿಕ್ಕಮಗಳೂರು-ಜನಸಂಪರ್ಕ-ಸಭೆಯಲ್ಲಿ-ಭೂ-ಒತ್ತುವರಿ-ಧ್ವನಿ

ಚಿಕ್ಕಮಗಳೂರು: ತಾಲ್ಲೂಕು ಹುಲಿಕೆರೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಕ್ರಮ ಭೂ ಒತ್ತುವರಿ ಬಗ್ಗೆ ಚರ್ಚೆ ನಡೆಯಿತು. ಸಖರಾಯಪಟ್ಟಣ ಹೋಬಳಿ ಹುಲೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಾಮಿಕಟ್ಟೆ ಗ್ರಾಮದಲ್ಲಿ ನಡೆದಿರುವ ಕೆರೆ ಮತ್ತು ಗೋಮಾಳದ ಜಾಗಗಳಲ್ಲಿ ಅಕ್ರಮ ಭೂ ಒತ್ತುವರಿ ನಡೆದಿದ್ದು, ಸರ್ಕಾರಿ ಸರ್ವೇ ಕಾರ್ಯದಲ್ಲಿ ಒತ್ತುವರಿ ದೃಢಪಟ್ಟಿದ್ದರೂ ಸಹ ಭೂ ತೆರವು ಮಾಡಲು ಅಧಿಕಾರಿಗಳು ಮಾತ್ರ ಮೀನಾಮೇಷ ಎಣಿಸುತ್ತಿದ್ದಾರೆ.

ಈ ವಿಷಯವಾಗಿ ಗ್ರಾಮಸ್ಥರು ಎರಡು ವರ್ಷಗಳಿಂದಲೂ ಸುದೀರ್ಘ ಹೋರಾಟ, ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಬಹಿಷ್ಕಾರವನ್ನು ಮಾಡಲು ಮುಂದಾದಾಗ ತಹಸೀಲ್ದಾರ್ ಸಮ್ಮುಖದಲ್ಲಿ ಕೆಲವು ತಿಂಗಳ ಒಳಗಾಗಿ ಕೆರೆ ಒತ್ತುವರಿ ತೆರವು ಮಾಡುತ್ತೇವೆ ಎಂಬ ಭರವಸೆಯ ಹಿನ್ನೆಲೆಯಲ್ಲಿ ಚುನಾವಣಾ ಬಹಿಷ್ಕಾರವನ್ನು ಹಿಂಪಡೆದಿದ್ದರು, ಆದರೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಮಿಕಟ್ಟೆ ಹಾಗೂ ಸುತ್ತಮುತ್ತಲ ಗ್ರಾಮದ ಅಂತರ್ಜಲಕ್ಕೆ ಹಾಗೂ ಜನ, ಜಾನುವಾರುಗಳಿಗೆ ಪ್ರಮುಖ ನೀರಿನ ಮೂಲವಾಗಿದ್ದು, ಇಂತಹ ನೀರಿನ ಮೂಲವಾದ ಕೆರೆಯ ಜಾಗವನ್ನು ಗ್ರಾಮದ ಕೆಲವು ಪ್ರಭಾವಿಗಳು ಒತ್ತುವರಿ ಮಾಡಿದ್ದಾರೆ. ಇಂತಹ ನೀರಿನ ಮೂಲವಾದ ಸ್ವಾಮಿಕಟ್ಟೆ ಗ್ರಾಮದ ಗುಡಾಣ ಶೆಟ್ಟಿಕೆರೆ ಹಾಗೂ ಚಂದ್ರಣ್ಣನ ಕೆರೆ ಸಂಬಂಧಿತ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಮಾಡಿ ಬರನಾಡಿನ ಗ್ರಾಮದ ಜೀವನಾಡಿಯಾದ ಕೆರೆಯನ್ನು ಉಳಿಸಿಕೊಡುವಂತೆ ಗ್ರಾಮಸ್ಥರು ಸಭೆಯಲ್ಲಿ ಮನವಿ ಮಾಡಿದರು.

ಅಲ್ಲದೇ ಸಖರಾಯಪಟ್ಟಣ ರಾಜಸ್ವ ನಿರೀಕ್ಷರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಲವರಿಗೆ ಭೂ ಮಂಜೂರು ಮಾಡಿದ್ದಾರೆ, ಆದಷ್ಟು ಬೇಗ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

Leave a Reply

Your email address will not be published. Required fields are marked *

× How can I help you?