ಚಿಕ್ಕಮಗಳೂರು-ಕಿಶೋರಾವಸ್ಥೆ-ಕಾರ್ಮಿಕರನ್ನು-ನೇಮಿಸುವುದು-ಅಪರಾಧ- ಜಿಲ್ಲಾ-ಕಾರ್ಮಿಕ-ಇಲಾಖೆ-ಸಹಾಯಕ-ಆಯುಕ್ತ-ರವಿಕುಮಾರ್

ಚಿಕ್ಕಮಗಳೂರು : ಕಿಶೋರಾವಸ್ಥೆ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಅಂತವರನ್ನು ನೇಮಿಸಿಕೊಂಡ ಮಾಲೀಕರುಗಳಿಗೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುವುದು ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ರವಿಕುಮಾರ್ ಹೇಳಿದರು.


ನಗರದ ಸಂತೆಮೈದಾನದ ಸಿಪಿಐ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ಏರ್ಪ ಡಿಸಿದ್ಧ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಮತ್ತು 18 ವರ್ಷದೊಳಗಿನ ಕಿಶೋರಾವಸ್ಥೇ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ. ಅಲ್ಲದೇ ತಪ್ಪಿತಸ್ಥ ಮಾಲೀಕರ ಮೇಲೆ ಪೊಲೀಸ್ ಇಲಾಖೆಯಿಂದ ಪ್ರಕರಣ ದಾಖಲಿಸಲಾಗುವುದು. ಕೆಲಸಕ್ಕೆ ಸೇರಿಸಿದ ಪಾಲಕರ ಮೇಲೆಯು ಮೊಖದ್ದಮೆ ಹೂಡಲಾಗುವುದು ಎಂದರು.


ಪ್ರಸ್ತುತ ಸಮಾಜದಲ್ಲಿ ಸಾವಿರಾರು ಮಂದಿ ಕಟ್ಟಡ ಕಾರ್ಮಿಕರಾಗಿ ಉದ್ಯೋಗದಲ್ಲಿದ್ದಾರೆ. ಆದರೆ ಮಂಡಳಿಯ ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ವಿಫಲತೆ ಹೊಂದುತ್ತಿವೆ. ಹೀಗಾಗಿ ಕಾರ್ಮಿಕರ ಸಂಘ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇಲಾಖೆ ಸೌಲಭ್ಯಗಳನ್ನು ಪ್ರಚುರಪಡಿಸಿ ಸಮಗ್ರ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.


ಕಟ್ಟಡ ಅಥವಾ ಇನ್ನಿತರೆ ಕಾರ್ಮಿಕರಿಗೆ ಸರ್ಕಾರ ಸವಲತ್ತು ಒದಗಿಸುವುದನ್ನು ಮನಗಂಡು ಕೆಲವರು ನಕಲಿ ಕಾರ್ಡ್ ಪಡೆದುಕೊಂಡಿರುವುದು ಗಮನಕ್ಕೆ ಬಂದಿದ್ದು ಈಗಾಗಲೇ ಅನೇಕ ನಕಲಿ ಕಾರ್ಡ್ಗಳನ್ನು ಪತ್ತೆಹಚ್ಚಿ ನಿಷ್ಕ್ರೀಯಗೊಳಿಸಿದೆ. ಮುಂದಿನ ದಿನಗಳಲ್ಲಿ ಇಂಥ ಏಜೆಂಟರು ಅಥವಾ ಕಾರ್ಡ್ದಾರರು ಕಂಡು ಬಂದಲ್ಲಿ ಇಲಾಖೆ ಗಮನಕ್ಕೆ ತರಬೇಕಿದೆ ಎಂದು ಸಲಹೆ ಮಾಡಿದರು.


ಅರ್ಹ ಫಲಾನುಭವಿಗಳಿಗೆ ಮಂಡಳಿಯಿಂದ ನೊಂದಾಯಿತಗೊಂಡ ಪುರುಷ ಅಥವಾ ಮಹಿಳೆಯರಿಗೆ ಪಿಂಚಣಿ ಸೌಲಭ್ಯ, ತರಬೇತಿ ಮತ್ತು ಸಾಮಾಗ್ರಿ ವಿತರಣೆ, ಹೆರಿಗೆ ಸೌಲಭ್ಯ, ಆಕಸ್ಮಿಕ ಮೃತರಾದಲ್ಲಿ ಅಂತ್ಯಕ್ರಿಯೆ ವೆಚ್ಚ, ಕಾರ್ಮಿಕರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸೌಲಭ್ಯವನ್ನು ಪೂರೈಸಲಾಗುತ್ತಿದೆ ಎಂದರು.


ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ, ಮದುವೆಗೆ ಸಹಾ ಯಧನ, ತಾಯಿ ಮಗು ಸಹಾಯ ಹಸ್ತ, ಸರ್ಕಾರಿ ಬಸ್‌ಪಾಸ್‌ನಲ್ಲಿ ಸೌಲಭ್ಯ ಹಾಗೂ ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾಲಯದಡಿ ಉಚಿತ ವೈದ್ಯಕೀಯ ತಪಾಸಣೆ ಕಲ್ಪಿಸಲಾಗುತ್ತಿದೆ ಎಂದರು.


ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ವಸಂತ್‌ಕುಮಾರ್ ಮಾತನಾಡಿ, ಪ್ರತಿದಿನ ದುಡಿಮೆಯ ಆಸೆಗಾಗಿ ಪಾಲಕರು ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತಗೊಳಿಸುವುದು ಸರಿಯಲ್ಲ. ಸಮಗ್ರ ವಿದ್ಯಾಭ್ಯಾಸ ಕೊಟ್ಟಲ್ಲಿ ಭವಿಷ್ಯದಲ್ಲಿ ಮಕ್ಕಳು ಉನ್ನತ ಸ್ಥಾನದಲ್ಲಿ ಬೆಳಗಲು ಸಾಧ್ಯ. ಹೀಗಾಗಿ ಪಾಲಕರು ಎಚ್ಚೆತ್ತುಕೊಂಡು ಮುನ್ನೆಡೆಯಬೇಕು ಎಂದರು.


ಪ್ರಸ್ತುತ ಕಾರ್ಮಿಕರಾಗಿ ದುಡಿಯುತ್ತಿರುವ ವರ್ಗಕ್ಕೆ ಕಾರ್ಮಿಕ ಮಂಡಳಿ ಹಾಗೂ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಅನೇಕ ಸವಲತ್ತು ನೀಡುತ್ತಿದೆ. ಈ ಬಗ್ಗೆ ಸಂಶಯವಿದ್ದಲ್ಲಿ ನೇರವಾಗಿ ಕಾರ್ಮಿಕ ಇಲಾ ಖೆ ಅಥವಾ ಕಾರ್ಮಿಕರ ಸಂಘಕ್ಕೆ ಭೇಟಿ ನೀಡಿದರೆ ಸಂಪೂರ್ಣ ಮಾಹಿತಿ ತಿಳಿಸಲಾಗುವುದು ಎಂದರು.


ಈ ಸಂದರ್ಭದಲ್ಲಿ ಸಿಪಿಐ ರಾಜ್ಯ ಮಂಡಳಿ ಸದಸ್ಯ ಹೆಚ್.ಎಂ.ರೇಣುಕಾರಾಧ್ಯ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಧರ್ಮರಾಜ್, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಜಯಕುಮಾರ್, ತಾಲ್ಲೂಕು ಉಪಾಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಎಂ.ಎಸ್.ಜಾನಕಿ, ಸದಸ್ಯರುಗಳಾದ ರಂಜಿತ್, ಸ್ವಾಮಿ, ಲಕ್ಕೇಗೌಡ, ಹಾಲಪ್ಪ ಮತ್ತಿತರರಿದ್ದರು.

ಸುರೇಶ್ ಎನ್, ಚಿಕ್ಕಮಗಳೂರು

Leave a Reply

Your email address will not be published. Required fields are marked *

× How can I help you?