ಚಿಕ್ಕಮಗಳೂರು. ಜೆ.ಸಿ.ಐ ಸಪ್ತಾಹದ ಹಿನ್ನೆಲೆಯಲ್ಲಿ ಸೆಲ್ಯೂಟ್ ಡಿ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿಯಲ್ಲಿ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತ ರುದ್ರಯ್ಯ ಹಾಗೂ ಲೈನ್‌ಮ್ಯಾನ್ ಲಿಂಗರಾಜುರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಖಾಸಗಿ ವಾಹಿನಿಯ ಕಚೇರಿಯಲ್ಲಿ ಕಾರ್ಯಕ್ರಮ ಏರ್ಪಡಿಸಿದ ಜೆ.ಸಿ.ಐ ಮಲ್ನಾಡ್ ಸಂಸ್ಥೆ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಪತ್ರಕರ್ತರಾದ ರುದ್ರಯ್ಯ ಹಾಗೂ ಲೈನ್ ಮ್ಯಾನ್ ಲಿಂಗರಾಜು ಅವರನ್ನು ಗೌರವಿಸಿ ಅಭಿನಂದಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ರುದ್ರಯ್ಯ ಅವರು ನನ್ನ ಸೇವೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸುತ್ತಿರುವ ಜೆಸಿಐ ಸಂಸ್ಥೆಗೆ ಆಭಾರಿಯಾಗಿದ್ದೇನೆ ಎಂದರು.
ಲೈನ್ ಮ್ಯಾನ್ ಲಿಂಗರಾಜು ಮಾತನಾಡಿ, ತಮ್ಮ ಸೇವೆಯನ್ನು ಗುರುತಿಸಿ, ಗೌರವಿಸಿ ಸನ್ಮಾನಿಸುತ್ತಿರುವುದಕ್ಕೆ ಸಂತೋಷ ವ್ಯಕ್ತ ಪಡಿಸಿದರು.
ಜೆ.ಸಿ.ಐ ಮಲ್ನಾಡ್ ಸಂಸ್ಥೆಯ ಅಧ್ಯಕ್ಷರಾದ ಪ್ರದೀಪ್ ಮಾತನಾಡಿ, ಜೆಸಿಐ ಸಂಸ್ಥೆ ವ್ಯಕ್ತಿ ವಿಕಸನದ ಸಂಸ್ಥೆಯಾಗಿದ್ದು ಹಲವು ವರ್ಷಗಳಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಸಮಾಜದಲ್ಲಿ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಗೌರವಿಸುತ್ತಾ ಬಂದಿದ್ದು ಇಂದು ಪತ್ರಕರ್ತರಲ್ಲಿ ಹಾಗೂ ಕೆಪಿಟಿಸಿಎಲ್ ಅಲ್ಲಿ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ರುದ್ರಯ್ಯ ಹಾಗೂ ಲಿಂಗರಾಜು ಅವರನ್ನು ಸನ್ಮಾನಿಸುತ್ತಿರುವುದು ಸಂತಸದ ಸುದ್ದಿ ಎಂದು ಹೇಳಿದರು .

ಜೋನ್ ಪ್ರೆಸಿಡೆಂಟ್ ವಿಜಯ್ ಕುಮಾರ್ ಮಾತನಾಡಿ, ವಿಶ್ವದಾದ್ಯಂತ ಸಮಾಜಮುಖಿ ಚಿಂತನೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜೆಸಿಐ ಸಂಸ್ಥೆ ಚಿಕ್ಕಮಗಳೂರಿನಲ್ಲೂ ಕೂಡ ಉತ್ತಮ ಸಂಘಟನೆ ಯೊಂದಿಗೆ ಹಲವು ತರಬೇತಿ ಹಾಗೂ ಸೇವಾ ಕಾರ್ಯಗಳನ್ನು ಕೈಗೊಂಡಿದ್ದು ಇಂದು ಪತ್ರಕರ್ತರು ಹಾಗೂ ಕೆಪಿಟಿಸಿಎಲ್ ಸಿಬ್ಬಂದಿಯವರನ್ನು ಗೌರವಿಸುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಈ ವೇಳೆ ಜೆಸಿಐ ಮಲ್ನಾಡ್ ಸಂಸ್ಥಾಪಕ ಅನಿಲ್ ಆನಂದ್, ನಿಕಟ ಪೂರ್ವ ಅಧ್ಯಕ್ಷ ಪುಷ್ಪ,ಲೇಡಿ ಜೆಸಿ ಕೋಆರ್ಡಿನೇಟರ್ ಪೂರ್ಣಿಮಾ ಅನಿಲ್, ಪೂರ್ವ ಅಧ್ಯಕ್ಷ ಗಿರಿಧ್ರಾಜ್ ಅರಸ್, ರಘು, ಸೆಕ್ರೆಟರಿ ತಿಲಕ್, ಸದಸ್ಯರಾದ ಗುರುಮೂರ್ತಿ ನಾಡಿಗ್, ರಾಮಚಂದ್ರ, ಕೃಷ್ಣಮೂರ್ತಿ, ರವಿ,ರೋಹಿತ್, ಉಪಸ್ಥಿತರಿದ್ದರು.