ಚಿಕ್ಕಮಗಳೂರು – ಕೈಮರದ ಶ್ರೀಗುರು ನಿರ್ವಾಣಸ್ವಾಮಿ ಮಠದ ಶ್ರೀಮಲ್ಲಿಕಾರ್ಜುನಸ್ವಾಮಿ ಪಲ್ಲಕ್ಕಿಮಹೋತ್ಸವ ನಾಡಿನ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಚಂದ್ರದ್ರೋಣ ಗಿರಿಪರ್ವತ ಸಾಲಿನ ಪದತಲದ ಕೈಮರ ಸಮೀಪ ಹೊಸಳ್ಳಿಯ ಶ್ರೀಗುರು ನಿರ್ವಾಣಸ್ವಾಮಿ ಮಠದಲ್ಲಿ ಸಂಪ್ರದಾಯದAತೆ ಪಾಲ್ಗುಣಬಹುಳ ಏಕಾದಶಿ ಮತ್ತು ದ್ವಾದಶಿಯಂದು ಶ್ರೀಮಲ್ಲಿಕಾರ್ಜುನಸ್ವಾಮಿ ಪಲ್ಲಕ್ಕಿ ಮಹೋತ್ಸವ ಶ್ರದ್ಧಾಭಕ್ತಿಯೊಂದಿಗೆ ಇಂದು ಸಂಪನ್ನಗೊಂಡಿತು.
ಶ್ರೀಮಠದ ಧರ್ಮದರ್ಶಿ ಎನ್.ಮಹೇಶ್ ಮತ್ತು ಕರ‍್ಯದರ್ಶಿ ಎನ್.ಎಂ.ಅಜಯ್ ನೇತೃತ್ವದಲ್ಲಿ ಹೊಸಳ್ಳಿ, ತೋಟದಳ್ಳಿ, ಹಿತ್ಲುಮಕ್ಕಿ, ಪುಟ್ಟೇನಹಳ್ಳಿ, ಮಾವಿನಹಳ್ಳಿ, ದಾಸರಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಇಂದು ಮಧ್ಯಾಹ್ನ ಶ್ರೀಸ್ವಾಮಿಯ ಅಲಂಕೃತ ಪಲ್ಲಕ್ಕಿಯನ್ನು ಶ್ರೀಮಠದ ಸುತ್ತ ಮೂರುಸುತ್ತು ಉತ್ಸವ ನಡೆಸಿ ಉತ್ಸವಮೂರ್ತಿಯನ್ನು ಗರ್ಭಗುಡಿಯೊಳಗೆ ನೆಲೆಗೊಳಿಸಿದರು. ಜಾತ್ರಾಮಹೋತ್ಸವ ನಡೆಸಿಕೊಟ್ಟ ಗ್ರಾಮಸ್ಥರಿಗೆ ಶ್ರೀಮಠದ ವತಿಯಿಂದ ಪ್ರಸಾದ ಭೋಜನ ಜೊತೆಗೆ ತೆಂಗಿನಕಾಯಿಯ ತಾಂಬೂಲ ನೀಡಿ ಗೌರವಿಸಲಾಯಿತು.
ಏಕಾದಶಿಯ ಮಂಗಳವಾರ ಪೂರ್ವಾಹ್ನ ಶ್ರೀಮಲ್ಲಿಕಾರ್ಜುನಸ್ವಾಮಿ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಆವರಣಕ್ಕೆ ತಂದು ಅಲಂಕೃತ ಪಲ್ಲಕ್ಕಿಯಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ಮಂಗಳವಾದ್ಯಗಳು ಮೊಳಗಿದವು. ಒಳಾವರಣದ ಪಲ್ಲಕ್ಕಿಯಮ್ಮ ಸಹೋದರಿಯರ ಗುಡಿಯ ಮುಂದೆ ಪೂಜೆಸ್ವೀಕರಿಸಿ ಹೊರಟ ಉತ್ಸವಕ್ಕೆ ಸುಮಂಗಲಿಯರು ಆರತಿ ಬೆಳಗಿ ಸ್ವಾಗತಕೋರಿದರು. ಶ್ರೀಗುರು ನಿರ್ವಾಣಸ್ವಾಮಿಗಳ ಗದ್ದುಗೆಯ ಮುಂಭಾಗಕ್ಕೆ ಬಂದ ಉತ್ಸವ ಪೂಜೆ ಸ್ವೀಕರಿಸಿ ಪ್ರಾಂಗಣದಲ್ಲಿ ಪ್ರದಕ್ಷಣೆಹಾಕಿ ರಾಜದ್ವಾರದಿಂದ ಹೊರಟು ಗರುಡಗಂಬ ಸುತ್ತಿ ಜನರ ಹರ್ಷೋದ್ಘಾರದ ನಡುವೆ ಮುನ್ನಡೆಯಿತು.

ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಠದ ಹೊರ ಆವರಣದಲ್ಲಿ ಮೂರುಸುತ್ತುಗಳ ಉತ್ಸವದ ನಂತರ ಶ್ರೀಸ್ವಾಮಿಯನ್ನು ಸಂಪಿಗೆ ಮರದ ಕೆಳಗಿನ ಪಲ್ಲಕ್ಕಿಕಟ್ಟೆಯ ಮೇಲೆ ಮೂರ್ತ ಮಾಡಲಾಯಿತು. ‘ಭಹಲ್ಲರಿ ವೀರ…’ ಖಡ್ಗ ಸಮರ್ಪಣೆಯೊಂದಿಗೆ ಹಳ್ಳಿವಾದ್ಯದ ತಾಳಕ್ಕೆ ಹೆಜ್ಜೆಹಾಕಿದ ಗ್ರಾಮಸ್ಥರು ಶ್ರೀಸ್ವಾಮಿಯ ಪವಾಡಗಳನ್ನು ಹಾಡಿಹೊಗಳಿದರು. ಪಲ್ಲಕ್ಕಿಯಲ್ಲಿ ವಿರಾಜಮಾನರಾದ ಶ್ರೀಸ್ವಾಮಿಗೆ ಗ್ರಾಮಸ್ಥರು ಪೂಜೆಸಲ್ಲಿಸಿ ಹಣ್ಣುಕಾಯಿ ಫಲಸಮರ್ಪಿಸಿ ಭಕ್ತಿ-ಭಾವ ಮೆರೆದರು.
ಇಳಿಹೊತ್ತಿನಲ್ಲಿ ಪಲ್ಲಕ್ಕಿಗೆ ಪೂಜೆಸಲ್ಲಿಸಿ ಮಠದ ಆವರಣದಿಂದ ಹೊರಟ ರಾತ್ರಿಯ ಉತ್ಸವ ತೋಟದ ಆವರಣದಲ್ಲಿರುವ ಕೆಂಚಪ್ಪನ ಗುಡಿ ಹಾದು, ಗಾಳಿಹಳ್ಳಿಮಠ ತಲುಪಿತು. ಅಲ್ಲಿ ಪೂಜೆ ಸ್ವೀಕರಿಸಿದ ನಂತರ ಗಾಳಿಹಳ್ಳಿಮಠದ ಶ್ರೀಸಿದ್ದೇಶ್ವರಸ್ವಾಮಿಯ ಪಲ್ಲಕ್ಕಿ ಉತ್ಸವವೂ ಜೊತೆಗೂಡಿ ಹೊರಟವು. ಹೊಸಳ್ಳಿ ಪಲ್ಲಕ್ಕಿಹರದಲ್ಲಿ ನೂರಾರು ಗ್ರಾಮಸ್ಥರು ನೆರೆದು ಎದುರುಗೊಂಡರು. ಜೋಡಿ ಪಲ್ಲಕ್ಕಿಗಳ ಉತ್ಸವ ಹರದಲ್ಲಿ ವಿದ್ಯುತ್ ದೀಪಾಲಂಕಾರದ ನಡುವೆ ನಡೆಯಿತು.

ನಂತರ ಶ್ರೀಮಲ್ಲಿಕಾರ್ಮುನಸ್ವಾಮಿ ಪಲ್ಲಕ್ಕಿಯು ಶ್ರೀ ಗುರುನಿರ್ವಾಣಸ್ವಾಮಿ ಮಠತಲುಪಿ ಗದ್ದುಗೆ ಆಗುವುದರ ವೇಳೆಗೆ ಬೆಳಗಿನಜಾವ ಸಮೀಪಿಸಿತು. ರಾತ್ರಿಪೂರ್ತಿ ಜಾತ್ರೆಯ ಸಡಗರ ಮನೆಮಾಡಿತ್ತು. ಶ್ರೀಮಠದ ಆವರಣ ತಳಿರುತೋರಣ, ಕೇಸರಿಪತಾಕೆ, ಬಂಟಿಂಗ್ಸ್ ಜೊತೆಗೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದೊಂದಿಗೆ ಝಗಮಗಿಸಿತು. ನೂರಾರು ಅಂಗಡಿಮುಗಟ್ಟುಗಳು ಜಾತ್ರೆಯ ಸಡಗರ ಹೆಚ್ಚಿಸಿತು.
ಪಾಲ್ಗುಣ ಬಹುಳ ತದಿಗೆ ಮಾರ್ಚ್ ೧೭ರಂದು ಹಗಲು ಬ್ರಹ್ಮರಥೋತ್ಸವ, ರಾತ್ರಿ ಮಹಾರಥೋತ್ಸವ ಜರುಗಿತ್ತು. ಚೌತಿಯ ಮಂಗಳವಾರ ಘಳಿಗೆ ತೇರು ನಡೆದಿತ್ತು. ಪಂಚಮಿಯಂದು ಓಕಳಿ, ಮಂಟಪ ಉತ್ಸವ ನಡೆದಿದ್ದರೆ, ದಶಮಿಯ ಸೋಮವಾರ ಧ್ವಜಾರೋಹಣ, ಸಂತರ್ಪಣೆ, ಭಕ್ತಾದಿಗಳ ಮುಡಿತೆಗೆಸುವುದು, ಹರಕೆ ಹಾಡ್ಯಗಳನ್ನೊಪ್ಪಿಸಿ ಆಶೀರ್ವಾದ ಪಡೆಯಲು ವಿಶೇಷ ಅವಕಾಶ ಕಲ್ಪಿಸಲಾಗಿತ್ತು.
ನಿನ್ನೆ ಮತ್ತು ಇಂದು ಪಲ್ಲಕಿಉತ್ಸವ ನಡೆದಿದ್ದು, ಮಧ್ಯಾಹ್ನ ಗ್ರಾಮಸ್ಥರಿಗೆ ತಾಂಬೂಲ ನೀಡುವುದರೊಂದಿಗೆ ಪ್ರಸಕ್ತ ಸಾಲಿನ ಶ್ರೀಗುರುನಿರ್ವಾಣಸ್ವಾಮಿ ಮಠದ ಜಾತ್ರಮಹೋತ್ಸವ ಸಂಪನ್ನಗೊಂಡಿತ್ತು.