ಚಿಕ್ಕಮಗಳೂರು:- ಕೃಷಿ ಭೂಮಿ ಹಾಗೂ ರಸ್ತೆ ಮೇಲೆ ಸುರಿದಿರುವ ಅನುಪಯುಕ್ತ ಮಣ್ಣನ್ನು ತೆರವುಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಂಬಳೆ, ಗೌಡನಹಳ್ಳಿ ಗ್ರಾಮಸ್ಥರು ಪ್ರಗತಿಪರ ಮುಖಂಡರುಗಳು ನೇತೃತ್ವದಲ್ಲಿ ಮಂಗಳವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕ ರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗೌಡನಹಳ್ಳಿ ಗ್ರಾಮಸ್ಥ ಹೇಮಂತ್ ತಾಲ್ಲೂಕಿನ ಅಂಬಳೆ ಮತ್ತು ಇಂಡಸ್ಟ್ರೀಯಲ್ ಮುಖಾಂತರ ಗೌಡನಹಳ್ಳಿಗೆ ಸಂಪರ್ಕ ರಸ್ತೆಯನ್ನು ಕಡಿತಗೊಳಿಸಿ ಅಭಿವೃದ್ದಿ ಪ್ರದೇಶದ ಅನುಪಯುಕ್ತ ಮಣ್ಣನ್ನು ರಸ್ತೆ, ಚರಂಡಿ, ರೈತರ ಭೂಮಿಗೆ ಹಾಕಲಾಗುತ್ತಿದೆ ಎಂದು ದೂರಿದರು.
ಅಂಬಳೆ ಮತ್ತು ಗೌಡನಹಳ್ಳಿ ಕೈಗಾರಿಕಾ ಪ್ರದೇಶದ ಮುಖಾಂತರ ಅಂಬಳೆ ಮುಖ್ಯರಸ್ತೆಯಿಂದ ಕೈಗಾರಿಕಾ ಪ್ರದೇಶದ ಗೌಡನಹಳ್ಳಿ ಸಂಪರ್ಕ ರಸ್ತೆ ಸುಮಾರು ೭೫ ವರ್ಷಗಳಿಂದೆಯೇ ನಿರ್ಮಿಸಲಾಗಿದ್ದು, ಈ ಮಾರ್ಗವಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು, ವಾಹನ ಸಂಚಾರ ವ್ಯವಸ್ಥೆಗಾಗಿ 3೦ ಅಡಿ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಈ ರಸ್ತೆ ಪ್ರದೇಶದಲ್ಲಿ ಗೌಡನಹಳ್ಳಿ, ಅಂಬಳೆ ಗ್ರಾಮಸ್ಥರ ಕೃಷಿಭೂಮಿಯಿದೆ. ಈ ಮಾರ್ಗದಿಂದ ಕೈಗಾರಿಕಾ ಪ್ರದೇಶಕ್ಕೆ ಕಾರ್ಮಿಕರು ಸಂಚಾರ ಮಾಡುತ್ತಿರುವುದು ಅನುಕೂಲವಾಗಿದೆ. ಆದರೆ ಕೈಗಾರಿಕಾ ವಿಸ್ತೃತ ಭೂಪ್ರದೇಶದಲ್ಲಿ ಅಭಿವೃದ್ದಿಪಡಿಸಿದ ಭೂಮಿಯ ಅನುಪಯುಕ್ತ ಮಣ್ಣನ್ನು ಎರಡು ಗ್ರಾಮಸ್ಥರ ಕೃಷಿ ಭೂಮಿ ಮತ್ತು ರಸ್ತೆಗೆ ಹಾಕಿ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಜಿಲ್ಲಾಡಳಿತ ಸ್ಥಳಕ್ಕೇ ಖುದ್ದುಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಕೃಷಿಭೂಮಿ ಮತ್ತು ರಸ್ತೆಗೆ ಅನಧಿಕೃತವಾಗಿ ಸುರಿದಿರುವ ಅನುಪಯುಕ್ತ ಮಣ್ಣನ್ನು ತೆರವುಗೊಳಿಸಿ ಗ್ರಾಮಸ್ಥರು ಸಂಚರಿಸಲು ಹಾಗೂ ಕೃಷಿ ಚಟುವಟಿಕೆಗೆ ಅಡ್ಡಿಯಾಗದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್, ದೇವರಾಜ್, ನಾರಾಯಣ್, ಪ್ರತಾಪ್, ಹರೀಶ್, ನಿಂಗ ರಾಜು, ನಾಗೇಶ್, ಮುಖಂಡರುಗಳಾದ ಭೀಮಯ್ಯ, ಶ್ರೀನಿವಾಸ್, ಮಾಗಡಿ ಮಂಜುನಾಥ್, ರಾಕೇಶ್, ರಘು, ಮಂಜು, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
- ಸುರೇಶ್ ಎನ್.