ಚಿಕ್ಕಮಗಳೂರು-ಪ್ರವಾಸಿ-ತಾಣಗಳಲ್ಲಿರುವ-ಹೊಟೇಲ್-ಅಂಗಡಿಗಳಲ್ಲಿ-ಸ್ವಚ್ಚತೆ-ಕಾಪಾಡಲು-ಕ್ರಮ-ವಹಿಸಲು-ಒತ್ತಾಯ

ಚಿಕ್ಕಮಗಳೂರು– ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿರುವ ಹೊಟೇಲ್, ಅಂಗಡಿಗಳಲ್ಲಿ ಶುಚಿತ್ವ ಮತ್ತು ಸ್ವಚ್ಚತೆ ಕಾಪಾಡಲು ಕ್ರಮ ವಹಿಸಲು ಸಂಬಂಧಿಸಿದವರಿಗೆ ಸೂಚಿಸುವಂತೆ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಅವರು ಇಂದು ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಜಿಲ್ಲೆಯು ಪ್ರಸಿದ್ಧಿ ಪ್ರವಾಸಿ ತಾಣವಾಗಿದ್ದು, ಇಲ್ಲಿರುವ ಕೆಲವು ಹೋಟೇಲ್ ಮತ್ತು ಅಂಗಡಿಗಳಲ್ಲಿ ಸರಿಯಾಗಿ ಸ್ವಚ್ಚತೆ ಹಾಗೂ ಶುಚಿತ್ವ ಕೊರತೆಯಿಂದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.

ಇಲ್ಲಿನ ಕೆಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ವಾಹನಗಳು ಚಲಾಯಿಸಿಕೊಂಡು ಹೋಗಲು ಆಗದೇ ಇರುವಂತಹ ಕಡಿದಾದ ರಸ್ತೆಗಳಲ್ಲಿ ಜೀಪ್ ಮೂಲಕ ಹೋಗಿ ಬರಬೇಕಾಗಿದೆ. ಈ ಸ್ಥಳಗಳಲ್ಲಿ ಕೆಲವು ಜೀಪಿನ ಮಾಲೀಕರು ಮತ್ತು ಚಾಲಕರು ಮನಸೋ ಇಚ್ಚೆ ಬಾಡಿಗೆ ಕೇಳುವುದರ ಜೊತೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಕಡಿದಾದ ಹಾಗೂ ಸೂಕ್ಷ್ಮ ತಿರುವುಗಳಲ್ಲಿ ತಡೆಗೋಡೆ ಇಲ್ಲದಿರುವುದರಿಂದ ಹಲವಾರು ಅಪಘಾತಗಳು ನಡೆದಿದ್ದು, ಅಂತಹ ಸ್ಥಳಗಳಲ್ಲಿ ಜಾಗರೂಕತೆಯಿಂದ ತೆರಳಲು ಜೀಪ್‌ನ ಮಾಲೀಕರು ಮತ್ತು ಚಾಲಕರಿಗೆ ತಿಳಿ ಹೇಳಬೇಕೆಂದರು.

ಬಾಡಿಗೆ ಜೀಪುಗಳಲ್ಲಿ ಕೆಲವು ಸ್ಥಳಗಳಿಗೆ ಹೋಗಿ ಬರುವಷ್ಟರಲ್ಲಿ ಪ್ರವಾಸಿಗರು ಭಯಭೀತರಾಗಿರುತ್ತಾರೆ. ಒಂದು ಬಾರಿ ಬಂದವರು ಮತ್ತೊಂದು ಬಾರಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರಲು ಹಿಂಜರಿಯುತ್ತಾರೆ. ಅತ್ತಿಗುಂಡಿಯಲ್ಲಿನ ಝರಿ ಪಾಲ್ಸ್ ವೀಕ್ಷಣೆಗೆ ಬರುವಂತಹ ಪ್ರವಾಸಿಗರಿಗೆ ಈ ಘಟನೆಯಿಂದ ಬೇಸತ್ತು ಯಾರಿಗೆ ತಿಳಿಸುವುದು ಎಂಬುದು ಎಂದು ತಿಳಿಯದೇ ಬೇಸರದಿಂದ ಹಿಂದಿರುಗುತ್ತಿದ್ದಾರೆ.

ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಜೀಪಿನ ಚಾಲಕರುಗಳಿಗೆ ವಾಹನ ಚಾಲನೆಯ ವೇಗದ ಮಿತಿ ನಿಗಧಿಪಡಿಸಬೇಕು ಜೊತೆಗೆ ಅತಿ ವಏಗ ಅಜಾಗರೂಕತೆಯಿಂದ ಚಾಲನೆ ಮಾಡುವ ಚಾಲಕರುಗಳಿಗೆ ದಂಡ ವಿಧಿಸುವ ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲಾ ಬಾಡಿಗೆ ವಾಹನಗಳಲ್ಲಿ ಪ್ರವಾಸಿಗರಿಗೆ ದೂರು ಸಲ್ಲಿಸಲು ಅನುಕೂಲವಾಗಲು ಸಂಬAಧಪಟ್ಟ ಇಲಾಖೆ ಅಧಿಕಾರಿಗಳ ದೂರವಾಣಿ ಸಂಖ್ಯೆ ಅಳವಡಿಸುವುದರ ಜೊತೆಗೆ ಎಚ್ಚರಿಕೆಯ ಭಿತ್ತಿಪತ್ರವನ್ನು ಅಳವಡಿಸಬೇಕು. ಸೂಕ್ಚö್ಮ ಪ್ರದೆಶಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವಂತೆ ಒತ್ತಾಯಿಸಿದ್ದಾರೆ.

ಜಿಲ್ಲೆಯ ಪ್ರವಾಸಿ ತಾಣಗಳಿಗೆ ರಜಾ ದಿನಗಳಲ್ಲಿ ಪ್ರವಾಸಿಗರು ಹೆಚ್ಚು ಬರುವುದರಿಂದ ಅವರ ವಾಹನಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸುವುದರಿಂದ ಇಲ್ಲಿನ ಸುತ್ತಮುತ್ತಲಿನ ತೋಟಗಳಿಗೆ ಕೆಲಸ ಮಾಡಲು ತೆರಳುವ ಕಾರ್ಮಿಕರಿಗೆ ಮತ್ತು ಇತರೆ ವಾಹನಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಅತ್ತಿಗುಂಡಿ ಹ್ಯಾಂಡ್ ಪೋಸ್ಟ್ ಹಿಂಭಾಗ ಇರುವ ಸರ್ಕಾರಿ ಜಾಗದಲ್ಲಿ ಪ್ರವಾಸಿಗರ ವಾಹನ ನಿಲುಗಡೆಗೆ ಅವಕಾಶ ಕಲ್ಪಸುವಂತೆ ಮನವಿ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಪ್ರವಾಸಿ ತಾಣಕ್ಕೆ ಎಷ್ಟು ಪ್ರಖ್ಯಾತಿ ಪಡೆದಿದೆಯೋ ಅಷ್ಟೇ ಕುಖ್ಯಾತಿಗೂ ಒಳಪಡುವ ಸನ್ನಿವೇಶ ನಿರ್ಮಾಣವಾಗದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಾಗಿದೆ. ಏಕೆಂದರೆ ಕಳೆದ ನಾಲ್ಕು ತಿಂಗಳಲ್ಲಿ ಅತ್ತಿಗುಂಡಿ ಮತ್ತು ಝರಿ ಪಾಲ್ಸ್ನಲ್ಲಿ ಜೀಪ್ ಮಾಲೀಕರು ಮತ್ತು ಚಾಲಕರು ಕ್ಷಣಿಕ ವಿಷಯಗಳಿಗೆ ಮಾರಣಾಂತಿಕ ಹಲ್ಲೆಗಳು ನಡೆದಿದ್ದು, ಅದು ವಿಕೋಪಕ್ಕೆ ತಿರುಗಿ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಬೆದರಿಕೆ, ಜಾತಿ ನಿಂದನೆ ಇನ್ನು ಮುಂತಾದ ಮೊಕದ್ದಮೆಗಳು ದಾಖಲಾಗಿರುತ್ತವೆ. ಆದ್ದರಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗುವಂತೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಗಂಗಾಧರ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಸೋಮಶೇಖರ್, ಮುಖಂಡ ತಂಬಿ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

× How can I help you?