ಚಿಕ್ಕಮಗಳೂರು, ಮೇ 11: “ಭಾರತ ಮಾತೆಯ ರಕ್ಷಣೆಯ ದೃಷ್ಟಿಯಿಂದ ನಾಡಿನ ಎಲ್ಲಾ ಮಾಜಿ ಸೈನಿಕರು ಮತ್ತೊಮ್ಮೆ ಯುದ್ಧಭೂಮಿಯಲ್ಲಿ ಶತ್ರುಗಳ ವಿರುದ್ಧ ಹೋರಾಡಲು ಸದಾ ಸಿದ್ಧರಾಗಿದ್ದೇವೆ,” ಎಂದು ಹಿರಿಯ ಮಾಜಿ ಸೈನಿಕ ಕ್ಯಾಪ್ಟನ್ ನಾಣಯ್ಯ ಹೇಳಿದರು.
ನಗರದ ಹೊರವಲಯದಲ್ಲಿ ಶನಿವಾರ ನಡೆದ ಕರ್ನಾಟಕ ಎಕ್ಸ್ ಸರ್ವೀಸ್ ಪರ್ಸೋನೆಲ್ ರೆಜಿಮೆಂಟ್‌ನ 69ನೇ ಹೋರಾಟದ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಇತ್ತೀಚಿನ ದಿನಗಳಲ್ಲಿ ನೆರೆಯ ಶತ್ರು ದೇಶ ಭಾರತೀಯ ನಾರಿಯರ ಸಿಂಧೂರವನ್ನು ಅಳಿಸಿರುವುದು ಅಮಾನವೀಯ ಘಟನೆ. ಈ ಬಗ್ಗೆ ಭಾರತೀಯ ಸೈನಿಕರು ನಿರಂತರವಾಗಿ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸುತ್ತಿದ್ದಾರೆ. ಇದು ನಾಡಿನ ಜನತೆಗೆ ನ್ಯಾಯ ಒದಗಿಸುವ ಹೆಮ್ಮೆಪತ್ರ ಸಂಗತಿಯಾಗಿದೆ,” “ಪಾಕಿಸ್ತಾನ ಹಲವಾರು ಬಾರಿ ಗಡಿಯನ್ನು ಉಲ್ಲಂಘಿಸಿ ಭಾರತೀಯರ ಹತ್ಯೆ ಮಾಡಿರುವುದು ಖಂಡನೀಯ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಕ್ರಮ ಕೈಗೊಂಡು ಹೊರುತ್ತಿದೆ. ಸರ್ಕಾರ ಆಹ್ವಾನಿಸಿದರೆ, ನಾವು ಮಾಜಿ ಸೈನಿಕರೂ ಕೂಡಾ ಎದೆಗುಂದದೆ ದೇಶಸೇವೆಗೆ ಸಿದ್ಧರಾಗಿದ್ದೇವೆ,” ಎಂದು ತಿಳಿಸಿದರು.

“ಇದಕ್ಕೂ ಮುಂಚೆಯೇ ಶತ್ರು ದೇಶದ ವಿರುದ್ಧ ನಡೆದ ಅನೇಕ ಯುದ್ಧಗಳಲ್ಲಿ ಭಾರತೀಯ ಸೈನಿಕರು ಗೆಲುವು ಸಾಧಿಸಿದ್ದಾರೆ. ಈಗ ಭಾರತ ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸಿದ್ದು, ಬಹುತೇಕ ಬಲಿಷ್ಠ ರಾಷ್ಟ್ರಗಳು ನ್ಯಾಯಬದ್ಧವಾಗಿ ಭಾರತದ ಬೆಂಬಲದಲ್ಲಿ ನಿಂತಿವೆ. ಭಾರತ ಸೈನಿಕರು ಶತ್ರು ದೇಶವನ್ನು ಸಂಪೂರ್ಣ ಮಟ್ಟಹಾಕಲು ಸಿದ್ಧರಾಗಿದ್ದಾರೆ,” ಎಂದರು.
ಮಾಜಿ ಸೈನಿಕ ಕ್ಯಾಪ್ಟನ್ ಸುರೇಶ್ ಮಾತನಾಡಿ, “ಸೈನ್ಯ ವೃತ್ತಿಗೆ ಹೆಚ್ಚು ಹೆಚ್ಚು ಯುವಕರನ್ನು ಆಕರ್ಷಿಸಲು ಹಿರಿಯ ಮಾಜಿ ಸೈನಿಕರು ಮುಂದಾಗಬೇಕು. ನಿವೃತ್ತಿಯ ನಂತರವೂ ದೇಶಕ್ಕಾಗಿ ದುಡಿಯುವ ಮನಸ್ಸು ಇರುವ ಹಿರಿಯರು, ತಮ್ಮ ಅನುಭವಗಳನ್ನು ಹಂಚಿಕೆ ಮಾಡುವುದು ಇಂದಿನ ಪೀಳಿಗೆಗೆ ದೇಶಭಕ್ತಿಯನ್ನು ಹುಟ್ಟುಹಾಕುವ ಶ್ರೇಷ್ಠ ಮಾರ್ಗ,” ಎಂದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಲೋಹಿತ್ ಅಶ್ವ, ಕೃಷ್ಣೇಗೌಡ, ಗೋಪಿನಾಥ್, ಸಿ.ಬಿ. ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.
-ಎನ್. ಸುರೇಶ್