ಚಿಕ್ಕಮಗಳೂರು:– ಜನತೆಯ ಖಾತೆಗೆ ನೇರ ನಗದು ಸೇರಿದಂತೆ ಪಂಚಗ್ಯಾರಂಟಿಯ ಎಲ್ಲಾ ಯೋಜನೆಗಳಿಂದ ಜಿಲ್ಲೆಗೆ ಪ್ರತಿ ಮಾಸಿಕ 8೦ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಧ್ಯವರ್ತಿ ಗಳಿಲ್ಲದೆ ಜನತೆಯ ಕಲ್ಯಾಣಕ್ಕಾಗಿ ನೀಡುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾ ನಂದಸ್ವಾಮಿ ಹೇಳಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದ ನ್ಯಾಯಬೆಲೆ ಅಂಗಡಿ ಹಾಗೂ ಸಹಕಾರ ಸಂಘಗಳ ಅಕ್ಕಿ ವಿತರಣಾ ಕೇಂದ್ರಕ್ಕೆ ತಾಲ್ಲೂಕು ಅಧ್ಯಕ್ಷರಾದ ಮಲ್ಲೇಶ್ ಸ್ವಾಮಿ ಹಾಗೂ ಗ್ಯಾರಂಟಿ ಪ್ರಾಧಿಕಾರದ ಪದಾಧಿಕಾರಿಗಳ ತಂಡದೊಂದಿಗೆ ಶುಕ್ರವಾರ ಭೇಟಿ ನೀಡಿ ಅಕ್ಕಿ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಾಂತ ಇಂದು ಆಯಾ ತಾಲ್ಲೂಕು ಅಧ್ಯಕ್ಷರುಗಳ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ಅನ್ನಭಾಗ್ಯದ ಅಕ್ಕಿ ವಿತರಣೆ ಅಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆಂದು ತಿಳಿಸಿದ ಅವರು, ಜಿಲ್ಲೆಯ ಹತ್ತು ಲಕ್ಷ ಜನತೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ.ಗಳನ್ನು ರಾಜ್ಯಸರ್ಕಾರ ಭರಿಸಿ ಅನುಕೂಲ ಕಲ್ಪಿಸಿದೆ. ಪಡಿತರ ಚೀಟಿದಾರರ ಪ್ರತಿ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ವಿತರಿಸುತ್ತಿದೆ ಮತ್ತು ಪಂಚ ಗ್ಯಾರಂಟಿಗಳನ್ನು ಕೊಟ್ಟ ಮಾತಿನಂತೆ ಜಾರಿಗೊಳಿಸುತ್ತಿದ್ದು ಫಲಾನುಭವಿಗಳು ಸರ್ಕಾರಕ್ಕೆ ಕೃತಜ್ಞರಾಗಬೇಕು ಎಂದು ಶ್ಲಾಘಿಸಿದರು.

ಸರ್ಕಾರವು ಹಣದ ಬದಲಾಗಿ ಅಕ್ಕಿ ವಿತರಿಸುತ್ತಿದ್ದು, ಪಡಿತರದಾರರು ಕಾಳಸಂತೆಯಲ್ಲಿ ಮಾರಾಟ ಮಾಡದೇ, ಜೀವನೋಪಾಯಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಕೆಲವೆಡೆ ತಾಂತ್ರಿಕ ದೋಷದಿಂದ ಸಣ್ಣಪುಟ್ಟ ಸಮಸ್ಯೆಯಿದೆ ಹೊರತು ಉಳಿದೆಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ಆದೇಶದಂತೆ ಸಂಪೂರ್ಣ ಅಕ್ಕಿಯನ್ನು ವಿತರಿಸಿ ಶೇ.99ರ ಪ್ರಗತಿ ಸಾಧಿಸಿದೆ.
ಇಂದಿಗೂ ಜಿಲ್ಲೆಯಲ್ಲಿ ಬಹುತೇಕ ಮಂದಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದುಕೊಂಡಿದ್ದಾರೆ. ಆದರೆ ಒಬ್ಬರಾದರೂ ಯೋಜನೆಗಳ ಸೌಲಭ್ಯ ಬೇಡವೆಂದು ಹೇಳಿಲ್ಲ. ಹೀಗಾಗಿ ಜನತೆ ಯೋಜನೆಗಳನ್ನು ಉಪಯೋಗಿಸಿಕೊಳ್ಳಬೇಕು. ಜೊತೆಗೆ ಮುಸ್ಲೀಂ ಬಾಂಧವರಿಗೆ ರಂಜಾನ್ ಮಾಸಾಚರಣೆ ಹಿನ್ನೆಲೆ ಸರ್ವರಿಗೂ ಒಳಿತಾಗಲೀ ಎಂದು ಶುಭ ಕೋರಿದರು.
ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ, ಗ್ರಾಮೀಣ ಭಾಗದ ಲಕ್ಯಾ, ಮುಗುಳುವಳ್ಳಿ ಮತ್ತು ಮೂಗ್ತಿಹಳ್ಳಿ ಹಾಗೂ ನಗರ ಪ್ರದೇಶದ ನೆಹರುನಗರ, ಉಪ್ಪಳ್ಳಿ ನ್ಯಾಯಬೆಲೆ ಅಂಗಡಿಗಳ ಅಕ್ಕಿ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪಡಿತರ ಚೀಟಿದಾರರಿಗೆ ಸಮಗ್ರ ಮಾಹಿತಿ ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಸದಸ್ಯರುಗಳಾದ ಅನ್ಸರ್, ಅರಸ್, ಜಯಂತಿ, ನಾಗಣ್ಣ,ಧರ್ಮಯ್ಯ, ನಗರಸಭಾ ಉಪಾಧ್ಯಕ್ಷರಾದ ಅಮೃತೇಶ್, ಸದಸ್ಯರುಗಳಾದ ಮುನೀರ್ ಅಹ್ಮದ್, ಲಕ್ಷ್ಮಣ್, ಖಲಂಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.