ಚಿಕ್ಕಮಗಳೂರು: ನಮ್ಮ ರಾಜ್ಯವು ಅಡಿಕೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಆರ್ಥಿಕ ಲಾಭ ತಂದು ಕೊಡುವ ಬೆಳೆಯಾಗಿದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ಬಿ.ಜಿ. ಯಮುನಾ ಅವರು ಹೇಳಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕು ಕುನ್ನಾಳು ಗ್ರಾಮದ ಸಾವಯವ ಕೃಷಿಕ ಕೆ.ಹೆಚ್. ಕುಮಾರಸ್ವಾಮಿ ಅವರ ತೋಟದಲ್ಲಿ ಜಿಲ್ಲಾ ತೋಟಗಾರಿಕೆ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ಕೃಷಿ ವಿಜ್ಞಾನ ಕೇಂದ್ರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಡಿಕೆ ಸಿಪ್ಪೆಯಿಂದ ಸಾವಯವ ಗೊಬ್ಬರ ತಯಾರಿಕೆಯ ಕಾರ್ಯಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಡಿಕೆ ಸುಲಿಯುವ ಸಮಯದಲ್ಲಿ ದೊರೆಯುವ ಅಡಿಕೆ ಸಿಪ್ಪೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ಸುರಿದು ಅಥವಾ ಸುಟ್ಟು ಹಾಕಿ ಪರಿಸರಕ್ಕೆ ಸಮಸ್ಯೆಯುಂಟು ಮಾಡುವ ಬದಲು ಅಡಿಕೆ ಸಿಪ್ಪೆಯು ಒಂದು ಸಾವಯವ ಪದಾರ್ಥವಾಗಿದ್ದು ವ್ಯರ್ಥ ಮಾಡುವ ಬದಲಿಗೆ ಕಾಂಪೋಷಿಣಿಕರಣಗೊಳಿಸಿ ತೋಟದ ಮಣ್ಣಿಗೆ ಸೇರಿಸಿ. ಮಣ್ಣಿನಲ್ಲಿರುವ ಸಾವಯವ ಪ್ರಮಾಣ ಹೆಚ್ಚಿಸಿ ಮಣ್ಣಿನ ನೀರು ಹಿಡಿದಿಡುವ ಶಕ್ತಿ ಪೋಷಕಾಂಶ ಸುಧಾರಣೆ ಆಗಲಿದೆ ಎಂದ ಅವರು. ಅಡಿಕೆ ಸಿಪ್ಪೆಯಿಂದ ಇಷ್ಟೊಂದು ಉಪಯೋಗಗಳು ಇದ್ದರು ಸಹ ಅಡಿಕೆ ಸಿಪ್ಪೆಯನ್ನು ಎಲ್ಲೆಂದರಲ್ಲಿ ಎಸೆದರೆ ಪೋಷಕಾಂಶ ನಷ್ಟ ಆಗುವ ಜೊತೆಗೆ ವಾತಾವರಣ ಕಲುಷಿತಗೊಳ್ಳುತ್ತದೆ ಎಂದರು.

ಅಡಿಕೆ ಸಿಪ್ಪೆಯಲ್ಲಿ ಯಥೇಚ್ಛವಾಗಿ ಲಿಗ್ನಿನ್, ಸೆಲ್ಯುಲೋಸ್, ಹೆಮಿ ಸೆಲ್ಯುಲೋಸ್ ಇರುವುದರಿಂದ ಕಳೆಯುವಿಕೆ ನಿಧಾನ ವೈಜ್ಞಾನಿಕವಾಗಿ ಒಂದು ವಸ್ತು ಬೇಗ ಕಳೆಯಬೇಕಾದರೆ ಅದರಲ್ಲಿನ ಸಾರಜನಕ ಹಾಗೂ ಇಂಗಾಲ ಅನುಪಾತ 1.30 ರ ಅಸುಪಾಸಿನಲ್ಲಿರಬೇಕು.
ಆದರೆ ಅಡಿಕೆ ಸಿಪ್ಪೆಯಲ್ಲಿ ಸರಜನಕ ಹಾಗೂ ಇಂಗಾಲ ಅನುಪಾತ 1:110 ರ ಅಸುಪಾಸಿನಲ್ಲಿದೆ. ಇದನ್ನು ವೈಜ್ಞಾನಿಕವಾಗಿ ತೊಟ್ಟಿಗಳಲ್ಲಿ ಅಥವಾ ಗುಂಡಿಗಳಲ್ಲಿ ಒಣಗಿದ ಅಡಿಕೆ ಸಿಪ್ಪೆಯನ್ನು ಹಾಕಿ ಯೂರಿಯಾ, ಸೂಕ್ಷ್ಮ ಜೀವಿಗಳ ಮಿಶ್ರಣ ಪದರ ಪದರವಾಗಿ ಹಾಕಿ, ಸಗಣಿ ಬಗ್ಗಡದಿಂದ ಚೆನ್ನಾಗಿ ನೆನೆಸಿ ಮುಚ್ಚಿ ೨-೩ ದಿನಗಳಿಗೊಮ್ಮೆ ನೀರು ಮತ್ತು ಮಿಶ್ರಣ ಮಾಡಿದರೆ ಉತ್ತಮವಾದ ಕಾಂಪೋಸ್ಟ್ ತಯಾರಿಕೆ ಆಗುತ್ತದೆ ಎಂದು ಹೇಳಿದರು.
ರೈತರು ತಮ್ಮ ತೋಟಗಳಲ್ಲಿ ಈ ಕ್ರಮವನ್ನು ಅನುಸರಿಸಿ ಉತ್ತಮ ಸಾವಯವ ಗೊಬ್ಬರ ತಯಾರಿ ಮಾಡಿಕೊಂಡು ತಾವೇ ತಮ್ಮ ಕೃಷಿಯಲ್ಲಿ ಬಳಸಿದರೆ ಆರ್ಥಿಕವಾಗಿ ಹಾಗೂ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದರು.
ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಹೆಚ್. ಕುಮಾರಸ್ವಾಮಿ ಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸುತ್ತಮುತ್ತಲಿನ ರೈತರು ತಮ್ಮ ತೋಟಗಳಲ್ಲಿ ಈ ರೀತಿಯ ಅಡಿಕೆ ಸಿಪ್ಪೆಯ ಹಲವಾರು ಪ್ರಯೋಜನಗಳನ್ನು ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಸಾವಯವ ಕೃಷಿಕ, ಗರ್ಜಿ ಜಿ.ಎಂ. ಈಶ್ವರಪ್ಪ ಚಂದ್ರಪ್ಪ, ವಿಜಯಕುಮಾರ್, ಮತ್ತಿತರರು ಉಪಸ್ಥಿತರಿದ್ದು, ಈ ಭಾಗದ ಹಲವು ರೈತರು ಕಾರ್ಯಗಾರ ಮತ್ತು ಪ್ರಾತ್ಯಕ್ಷೆ ಕಾರ್ಯಕ್ರಮದಲ್ಲಿ ಭಾಗವಹಸಿದ್ದರು.