ಚಿಕ್ಕಮಗಳೂರು, ಮೇ.21:- ಪ್ರತಿಯೊಬ್ಬರೂ ಮಾಜಿ ಪ್ರಧಾನಮಂತ್ರಿ ರಾಜೀವ್‌ಗಾಂಧಿ ಅವರ ಆದರ್ಶ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ತಿಳಿಸಿದರು.
ಅವರು ಬುಧವಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಕಾಂಗ್ರೆಸ್ ಆಶ್ರಯದಲ್ಲಿ ನಡೆದ ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 35 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ಕೊಡುವ ಮೂಲಕ ದೂರದರ್ಶನ ಮತ್ತು ಸಾಮಾಜಿಕ ಜಾಲತಾಣವನ್ನು ಪರಿಚಯಿಸಿದ ಕೀರ್ತಿ ದಿವಂಗತ ರಾಜೀವ್ ಗಾಂಧಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.

ರಾಜೀವ್ ಗಾಂಧಿಯವರು ಪ್ರಧಾನಮಂತ್ರಿ ಆದ ಸಂದರ್ಭದಲ್ಲಿ ದೇಶದಲ್ಲಿ ಒಳ್ಳೆಯ ವಾತಾವರಣವನ್ನು ಸೃಷ್ಟಿ ಮಾಡಿದರು. ಅವರು ಕೊಟ್ಟಂತಹ ಅಭಿವೃದ್ಧಿ ಕೆಲಸಗಳನ್ನು ದೇಶದ ಜನರು ಇನ್ನೂ ಮರೆತಿಲ್ಲ ಎಂದರು.
ಮುAದಿನ ದಿನಗಳಲ್ಲಿ ನಡೆಯುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸವನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕೆಂದು ಮನವಿ ಮಾಡಿದರು.

ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ನಯಾಜ್ ಮಾತನಾಡಿ, ನಮ್ಮ ದೇಶ ಪ್ರಪಂಚದಲ್ಲಿ ಬಲಶಾಲಿಯಾಗಿ ಬೆಳೆಯಲು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕೊಡುಗೆ ಅಪಾರವಾಗಿದೆ. ಅವರನ್ನು ಪ್ರತಿದಿನ ನೆನೆಯುವಂತಾಗಬೇಕು ಎಂದು ಹೇಳಿದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ಮಲ್ಲೇಶಸ್ವಾಮಿ ಮಾತನಾಡಿ, ದೇಶದ ಬಡಜನರಿಗಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದವರು ರಾಜೀವ್ ಗಾಂಧಿ ಎಂದು ಬಣ್ಣಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಪಿ.ತನೋಜ್ ಕುಮಾರ್ ನಾಯ್ಡು ಮಾತನಾಡಿ, ಇಂದಿರಾಗಾಂಧಿಯವರ ಮರಣ ನಂತರ ದೇಶದ ಪ್ರಧಾನಿಯಾಗಿ ನೇಮಕವಾದ ನಂತರ ಹಲವಾರು ಜನಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನಮನ್ನಣೆಯನ್ನು ರಾಜೀವ್ ಗಾಂಧಿಯವರು ಗಳಿಸಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಅತೀಖ್ ಖೈಸರ್, ಮಹಮದ್ ಅಕ್ಬರ್, ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಸಿ.ಟಿ.ಶಿವರಾಂ ಅವರುಗಳು ರಾಜೀವ್ ಗಾಂಧಿಯವರು ಕೈಗೊಂಡ ಅಭಿವೃದ್ಧಿಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎಲ್.ಪ್ರವೀಣ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಂ.ಜಾರ್ಜ್, ನಗರಸಭೆ ಸದಸ್ಯ ಪರಮೇಶ್ ರಾಜ್ ಅರಸ್, ಆಶ್ರಯ ಸಮಿತಿ ಸದಸ್ಯ ಪ್ರಸಾದ್ ಅಮಿನ್, ಸಿಡಿಎ ಸದಸ್ಯ ಶೃದೀಪ್, ತಾಲ್ಲೂಕು ಗ್ಯಾರಂಟಿ ಉಪಾಧ್ಯಕ್ಷ ಅನ್ಸರ್ ಆಲಿ, ಸದಸ್ಯ ಪುನೀತ್, ಮುಖಂಡರಾದ ಬಿ.ಎಂ.ಸಂದೇಶ್, ತಾಹೀರ್, ಕೆ.ಭರತ್, ಗಂಗಾಧರ್, ಅಮರ್, ಸೋಮಶೇಖರ್, ಧರ್ಮೇಶ್, ತಂಬಿ, ಕುಸುಮಾ ಭರತ್, ಜಯಂತಿ ಸೇರಿದಂತೆ ಮತ್ತಿತರರು ಇದ್ದರು.

ಅಲ್ಪಸಂಖ್ಯಾತ ಘಟಕದ ಮುಖಂಡ ಶಾಬುದ್ದೀನ್ ಸ್ವಾಗತಿಸಿ, ನಗರ ಕಾಂಗ್ರೆಸ್ ಎಸ್.ಸಿ ಘಟಕದ ಮಾಜಿ ಅಧ್ಯಕ್ಷ ಹೆಚ್.ಎಸ್.ಜಗದೀಶ್ ವಂದಿಸಿದರು. ರಾಜೀವ್ ಗಾಂಧಿಯವರ ಭಾವಚಿತ್ರಕ್ಕೆ ಮುಖಂಡರು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ಪುಷ್ಪಾರ್ಚನೆ ಮಾಡಿದರು.
–