ಚಿಕ್ಕಮಗಳೂರು, ಮೇ 12: “ವಿಶ್ವದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಬೌದ್ಧಧರ್ಮವನ್ನು ಅನುಸರಿಸಲಾಗುತ್ತಿದೆ. ಆ ಸಾಲಿನಲ್ಲಿ ಭಾರತೀಯರು ಬುದ್ಧರ ವಿಚಾರಧಾರೆಗಳು ಹಾಗೂ ತತ್ತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಾಕೃಷ್ಣ ಹೇಳಿದರು.
ನಗರದ ಜಿಲ್ಲಾ ಬಿಎಸ್‌ಪಿ ಕಚೇರಿಯಲ್ಲಿ ಸೋಮವಾರ ನಡೆದ ಬುದ್ಧ ಪೂರ್ಣಿಮಾ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಜ್ಜನರ ಸಹವಾಸ ಬೆಳೆಸಿ, ದುಶ್ಚಟಗಳನ್ನು ತ್ಯಜಿಸು, ಕಂಡವರ ಆಸ್ತಿ ಆಸೆಪಡಬೇಡ ಮತ್ತು ಉತ್ತಮ ನಡವಳಿಕೆ ಹೊಂದುವುದು ಬುದ್ಧರ ತತ್ತ್ವಗಳಾಗಿವೆ. ಈ ಮಾರ್ಗದಲ್ಲಿ ಸಾಗುವುದು ಪ್ರತಿಯೊಬ್ಬರ ಧರ್ಮವಾಗಬೇಕು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬುದ್ಧರ ಗುಣಾತ್ಮಕ ಸಂದೇಶಗಳನ್ನು ಅಡಕಗೊಳಿಸಿದ್ದಾರೆ. ಬುದ್ಧರ ನೆಲೆಬೀಡು ಭಾರತದಲ್ಲಿರುವಾಗಲೂ ಅವರು ಬೋಧಿಸಿದ ತತ್ತ್ವಗಳನ್ನು ಅನುಸರಿಸದಿರುವುದು ದುರಂತ. ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಜಾತಿ ಮತ್ತು ಧರ್ಮಗಳ ನಡುವೆ ಬಿರುಕು ಉಂಟಾಗುತ್ತಿದ್ದು, ಬುದ್ಧನ ಸಂದೇಶಗಳನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಯುದ್ಧ ಬೇಡ, ಬುದ್ಧ ಬೇಕು; ಹಿಂಸೆ ತ್ಯಜಿಸಿ ಅಹಿಂಸಾ ಮಾರ್ಗದಲ್ಲಿ ಸಾಗಬೇಕು,” ಎಂದು ಅವರು ಹೇಳಿದರು.

“ಭಗವಾನ್ ಬುದ್ಧರ ಜೀವನಶೈಲಿಯನ್ನು ಆಳವಾಗಿ ಅಧ್ಯಯನ ಮಾಡಿದ ಡಾ. ಬಿ.ಆರ್. ಅಂಬೇಡ್ಕರ್ ಲಕ್ಷಾಂತರ ಜನರೊಂದಿಗೆ ಬೌದ್ಧಧರ್ಮ ಸ್ವೀಕರಿಸಿದರು. ದೇಶದ ಸಂವಿಧಾನ ರಚನೆಯಲ್ಲಿಯೂ ಬುದ್ಧನ ವಿಚಾರಧಾರೆಗೆ ಒತ್ತು ನೀಡಿ ಸುಭದ್ರ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ,” ಎಂದು ಹೇಳಿದರು.
ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ. ಸುಧಾ ಮಾತನಾಡಿ, “ರಾಜಮನೆತನದಲ್ಲಿ ಜನಿಸಿದ ಬುದ್ಧನು ಯೌವನ, ಮುಪ್ಪು ಮತ್ತು ಶವಯಾತ್ರೆಯ ದೃಶ್ಯವನ್ನು ಕಂಡು ಜ್ಞಾನೋದಯದ ಕಡೆ ಚಿಂತನೆ ನಡೆಸಿದರು. ನಂತರ ರಾಜ್ಯ, ಸಂಪತ್ತು ಹಾಗೂ ಕುಟುಂಬವನ್ನು ತ್ಯಜಿಸಿ ವೃಕ್ಷದಡಿಯಲ್ಲಿ ತಪಸ್ಸುಮಾಡಿ ಇಡೀ ರಾಷ್ಟ್ರಕ್ಕೆ ಜ್ಞಾನದ ಬೆಳಕು ಹರಡಿದವರು,” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಹೆಚ್. ಕುಮಾರ್, “ದೈನಂದಿನ ಬದುಕಿನಲ್ಲಿ ಸರಳವಾಗಿ ಬದುಕು ಕಟ್ಟಿಕೊಳ್ಳಲು ಬುದ್ಧನ ಜೀವನವೇ ಸಾಕ್ಷಿಯಾಗಿದೆ. ಇಂದಿನ ಯುವಜನತೆಗೆ ಬುದ್ಧನ ಜ್ಞಾನದ ಸಂಪತ್ತು ಬಹು ಅಗತ್ಯ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಎಸ್‌ಪಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಯೋಜಕ ಕೆ.ಆರ್. ಗಂಗಾಧರ್, ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್. ಮಂಜುಳಾ, ಮುಖಂಡರಾದ ಮಾರ್ಥ, ಲತಾ, ಭಾಗ್ಯ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
- ಸುರೇಶ್ ಎನ್.