ಚಿಕ್ಕಮಗಳೂರು-ರೈತರಿಗೆ ಉತ್ತಮ ದರ ಒದಗಿಸಲು ರೈತ ಉತ್ಪಾದಕ ಕಂಪನಿಗಳಿಗೆ ಉತ್ತೇಜನ-ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್

ಚಿಕ್ಕಮಗಳೂರು: ರೈತರ ಕಷ್ಟದ ದುಡಿಮೆಯ ಬಹುಭಾಗ ಯಾವುದೇ ಬಂಡವಾಳ ಹೂಡದೆ, ಕಷ್ಟಪಡದೇ ಇರುವ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದನ್ನು ತಪ್ಪಿಸಿ ರೈತರ ಉತ್ಪನ್ನಗಳಿಗೆ ಉತ್ತಮ ದರ ಒದಗಿಸಬೇಕೆಂಬ ಉದ್ದೇಶದಿಂದ ರೈತ ಉತ್ಪಾದಕ ಕಂಪನಿಗಳನ್ನು ಆರಂಭಿಸಲು ಸರ್ಕಾರ ಉತ್ತೇಜನ ನೀಡಲಾಗುತ್ತಿದೆ ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಕಡೂರಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಮೃತ ಮಹೋತ್ಸವ ಹಾಗೂ ಕಡೂರು ಪ್ರಗತಿ ರೈತ ಉತ್ಪಾದಕರ ಕಂಪನಿ ಸಹಯೋಗದಲ್ಲಿ ಆರಂಭಿಸಿರುವ ರೈತ ಬಜಾರ್ ಉದ್ಘಾಟಿಸಿ ಅವರು ಮಾತನಾಡಿದರು.

ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಒದಗಿಸುವಲ್ಲಿ ರೈತ ಬಜಾರ್ ಕಲ್ಪನೆ ವಿನೂತನವಾಗಿದೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಸಾಕಷ್ಟು ವಿದ್ಯುತ್ ಶೇಖರಣೆ ಮಾಡಲಾಗಿದೆ. ಹೀಗಿದ್ದರೂ ಸಹ ತಮ್ಮ ಸರ್ಕಾರ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಾದ ಕ್ರಮ ಕೈಗೊಂಡಿದೆ. ಏಷ್ಯಾದಲ್ಲಿಯೇ ದೊಡ್ಡದಾದ ಸೋಲಾರ್ ಪಾರ್ಕ್ ಪಾವಗಡದಲ್ಲಿ ರೈತರ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿದ್ದು, 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ರೈತರ ಸಹಯೋಗದಲ್ಲಿ ಇಲ್ಲಿ 10 ಸಾವಿರ ಎಕರೆ ಪ್ರದೇಶವನ್ನು ಈ ಯೋಜನೆಗೆ ಬಳಸಿಕೊಳ್ಳಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 19500 ಮೆಗಾವ್ಯಾಟ್ ಬೇಡಿಕೆ ಇದ್ದು, ಉದ್ದೇಶಿತ ಯೋಜನೆಗಳು ಕಾರ್ಯಗತವಾದರೆ ಸಮರ್ಪಕ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದು ತಿಳಿಸಿದರು.

ನೆನೆಗುದಿಗೆ ಬಿದ್ದಿದ್ದ ಕುಸುಮ್-ಸಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರದ ಜೊತೆ ವ್ಯವಹರಿಸಿದ್ದು ಒಂದು ವರ್ಷದೊಳಗೆ 3000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಕಾರ್ಯ ಆರಂಭವಾಗಲಿದೆ. ಕುಸುಮ್-ಬಿ ಯೋಜನೆಯಡಿ ಶೇ.80 ಸಹಾಯಧನದೊಂದಿಗೆ ಕೊಳವೆ ಬಾವಿ ಹೊಂದಿರುವ ರೈತರಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಈ ವರ್ಷ 40 ಸಾವಿರ ಪಂಪ್‌ಸೆಟ್‌ಗಳಿಗೆ ಈ ಅವಕಾಶ ಲಭ್ಯವಿದ್ದು, ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೈಗಾರಿಕೆಗಳು ಸ್ಥಾಪನೆಯಾಗಿ ಉದ್ಯೋಗಾವಕಾಶ ದೊರೆಯಬೇಕೆಂಬ ಉದ್ದೇಶದಿಂದ ಕಡೂರಿನಲ್ಲಿ ಬಹುದೊಡ್ಡ ಗಾರ್ಮೆಂಟ್ಸ್ ಫ್ಯಾಕ್ಟರಿ ಶೀಘ್ರದಲ್ಲೆ ಕಾರ್ಯಾರಂಭ ಮಾಡಲಿದೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಶಾಸಕರ ಎಲ್ಲ ಪ್ರಯತ್ನಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ರೈತರ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಒದಗಿಸಿ ಲಾಭವಾಗಿಸುವ ಉದ್ದೇಶದಿಂದ ರೈತ ಬಜಾರ್ ಕಾರ್ಯಾರಂಭsವಾಗಿದೆ. ಟಿಎಪಿಸಿಎಂಎಸ್‌ನ ಈ ಕಾರ್ಯ ಪ್ರಶಂಸನೀಯ ಎಂದರಲ್ಲದೆ, ರಚನಾತ್ಮಕ ಕಾರ್ಯಗಳಿಗೆ ತಮ್ಮ ಸರ್ಕಾರದ ಸಹಕಾರ ಇರುವುದಾಗಿ ತಿಳಿಸಿದರು. ನಮ್ಮ ಸರ್ಕಾರ ಆ ಕಾರ್ಯಕ್ಕೆ ಚಾಲನೆ ನೀಡಿದೆ. ಸರ್ಕಾರದ ರೈತಪರ ಕಾಳಜಿಗೆ ಸಾಕ್ಷಿಯಾಗಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಭದ್ರಾ ಉಪಕಣಿವೆ ಯೋಜನೆಯ 2 ನೇ ಹಂತದ ಕಾಮಗಾರಿಗೆ ಒಂದೇ ಹಂತದಲ್ಲಿ 400 ಕೋಟಿ ರೂ.ಗಳನ್ನು ಸರ್ಕಾರ ಒದಗಿಸಿದೆ  ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್ ಮಾತನಾಡಿ ಟಿಎಪಿಸಿಎಂಎಸ್, ರೈತ ಉತ್ಪಾದಕ ಕಂಪನಿ ಮತ್ತು ಅನಿಕೇತನ ಸಂಸ್ಥೆಯ ಸಹಭಾಗಿತ್ವದಲ್ಲಿ ಇಡೀ ರಾಜ್ಯದಲ್ಲಿ ಪ್ರಪ್ರಥಮವಾಗಿ ರೈತ ಬಜಾರ್ ಕಾರ್ಯಾರಂಭಗೊಂಡಿದ್ದು, ಮತ್ತಷ್ಟು ರೈತಪರ ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ಕೈಗೊಳ್ಳಲಾಗಿದೆ ಎಂದರು.

ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ರೈತ ಬಜಾರ್ ಸಾಮಾಜಿಕ ಜಾಲತಾಣವನ್ನು ಲೋಕಾರ್ಪಣೆ ಮಾಡಿದರು.

ಈ ವೇಳೆ ಕಂಸಾಗರ ಸೋಮಶೇಖರ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಲ್.ರುದ್ರೇಗೌಡ, ಪುರಸಭೆಯ ಸದಸ್ಯರು, ರೈತ ಉತ್ಪಾದಕ ಕಂಪನಿಯ ಪದಾಧಿಕಾರಿಗಳು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?