ಚಿಕ್ಕಮಗಳೂರು- ಇರಾನ್‌ನಿಂದ ವಿದ್ಯಾರ್ಥಿಗಳನ್ನು ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ

ಚಿಕ್ಕಮಗಳೂರು: ಇರಾನ್‌ನಲ್ಲಿ ನೆಲೆಸಿರುವ ಒಂಭತ್ತು ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಕೂಡಲೇ ಕ್ರಮ ಕೈಗೊಳ್ಳುವಂತೆ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಕೋರಿದ್ದಾರೆ.

ದೂರವಾಣಿ ಮುಖೇನ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಖುದ್ದು ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇಸ್ರೇಲ್ ಮತ್ತು ಇರಾನ್ ನಡುವೆ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯು ಆ ದೇಶಗಳಲ್ಲಿ ನೆಲೆಸಿರುವ ವಿದೇಶಿಗರಿಗೆ ಆತಂಕ ಉಂಟು ಮಾಡಿದೆ. ಕರ್ನಾಟಕದ ಸುಮಾರು 9 ವಿದ್ಯಾರ್ಥಿಗಳು ಇರಾನ್ ದೇಶದ ರಾಜದಾನಿಯಾದ ತೆಹರಾನ್ ಸಮೀಪದಲ್ಲಿರುವ ಶಹೀದ್ ಬೆಹ್‌ಸ್ಟಿ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದು, ಈ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಆತಂಕಗೊಂಡಿದ್ದಾರೆ.

ಈ ವಿದ್ಯಾರ್ಥಿಗಳ ಪೈಕಿ ಒರ್ವ ವಿದ್ಯಾರ್ಥಿಯಾದ ನದೀಮ್ ಹುಸೇನ್ ಹಾಗೂ ಬೆಂಗಳೂರಿನಲ್ಲಿರುವ ಅವರ ಪೋಷಕರು ಬೆಂಗಳೂರಿನ ಅನಿವಾಸಿ ಭಾರತೀಯ ಸಮಿತಿ ಕಚೇರಿಗೆ ದೂರವಾಣಿ ಮುಖೇನ ಸಂಪರ್ಕಿಸಿದ್ದು ಅವರ ನೋವು ತೋಡಿಕೊಂಡಿದ್ದಾರೆ. ಕೂಡಲೇ ದೇಶಕ್ಕೆ ಹಿಂದಿರುಗಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದವರು ತಿಳಿಸಿದ್ದಾರೆ.



Leave a Reply

Your email address will not be published. Required fields are marked *