ಚಿಕ್ಕಮಗಳೂರು-ನಮ್ಮ ಕಾಫಿನಾಡಿನ ನಗರಸಭೆ ಉತ್ಕೃಷ್ಟ ದರ್ಜೆಗೆ ಏರಲು ಹೊರಡಲು ಹವಣಿಸುತ್ತಿದೆ. ಆದರೆ ಇಲ್ಲಿನ ಮಧ್ಯ ನಗರದ ವಾರ್ಡ್ ಸಂಖ್ಯೆ 4ರ ವಸತಿ ಪ್ರದೇಶದಲ್ಲಿ ನಗರಸಭೆಯು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡಲು ವಿಫಲವಾಗಿದ್ದು, ಅಲ್ಲಿನ ನಿವಾಸಿಗಳು ಪ್ರತಿನಿತ್ಯ ನಗರಸಭೆಗೆ ಇಡಿ ಶಾಪ ಹಾಕುತ್ತಿದ್ದಾರೆ.
ನಗರದ ವಾರ್ಡ್ ಸಂಖ್ಯೆ 4 ರ ಚೆನ್ನಾಪುರ ರಸ್ತೆಗೆ ತೆರಳುವ ಮಾರ್ಗದ ಎಡ ತಿರುವಿನಲ್ಲಿ ಸುಮಾರು 12 ಕುಟುಂಬಗಳು ಕಳೆದ ಹಲವು ವರ್ಷಗಳಿಂದ ವಾಸಿಸುತ್ತಿದ್ದರು. ಈ ಮನೆಗಳಿಗೆ ನಗರಸಭೆಯು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ವಿಫಲವಾಗಿದೆ.

ಈ ರಸ್ತೆಗೆ ಇದುವರೆಗೂ ಡಾಂಬರೀಕರಣದ ಸ್ಪರ್ಷವೇ ಆಗಿಲ್ಲ. ಅಲ್ಲದೆ ಚರಂಡಿ ಮತ್ತು ಒಳಚರಂಡಿ ವ್ಯವಸ್ಥೆ ಇಲ್ಲದೆ ಇಲ್ಲಿನ ನಿವಾಸಿಗಳು ಪರಿತಪ್ಪಿಸುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ.
ಇದರಿಂದ ಸಾಂಕ್ರಾಮಿಕ ಖಾಯಿಲೆಗಳು ಹರಡುವ ಭೀತಿಯಲ್ಲಿ ಇಲ್ಲಿನ ನಿವಾಸಿಗಳು ಬದುಕುತ್ತಿದ್ದು, ಈ ವ್ಯವಸ್ಥೆಯನ್ನು ಸರಿಪಡಿಸಿ ಸಾಮಾನ್ಯವಾಗಿ ನಗರದಲ್ಲಿ ವಾಸಿಸುವ ನಗರವಾಸಿಗಳಂತೆ ನಮ್ಮ ಬದುಕನ್ನು ನಡೆಸಲು ಅನುಕೂಲ ಮಾಡಿಕೊಡಿ ಎಂದು ಅಲ್ಲಿನ ನಿವಾಸಿಗಳ ಆಗ್ರಹವಾಗಿದೆ.

ಸುಮಾರು 12 ವರ್ಷಗಳಿಂದ ಮನೆ ಕಟ್ಟಿಕೊಂಡು ಅದರ ಜೊತೆಯಲ್ಲಿ ನಗರಸಭೆಗೆ ಸಲ್ಲಿಸಬೇಕಾದ ಸಮರ್ಪಕ ಆದಾಯವನ್ನು ಪಾವತಿ ಮಾಡುತ್ತಿರುವ ಇಲ್ಲಿನ ಹಲವು ಕುಟುಂಬಗಳ ಆಕ್ರಂದನ ನಿಜಕ್ಕೂ ಮುಗಿಲು ಮುಟ್ಟುವಂತಿದೆ. ಗ್ರಾಮೀಣ ಭಾಗಗಳಲ್ಲಿ ಈ ಅವ್ಯವಸ್ಥೆ ಸಾಮಾನ್ಯ ಆದರೆ ನಗರದಲ್ಲಿಯೂ ಈ ರೀತಿಯ ದುರಾವಸ್ಥೆ ಒದಗಿರುವುದು ನಿಜಕ್ಕೂ ಶೋಚನೀಯ.