ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಕೂವೆ ಕಲ್ಮನೆ ಗ್ರಾಮದ ಸರ್ವೆ ನಂಬರ್ 49, 50 ರ ಪ್ರದೇಶ ಜನವಸತಿಯಾಗಿದ್ದು ಅದನ್ನು ಮೀಸಲು ಅರಣ್ಯದಿಂದ ಮುಕ್ತ ಮಾಡುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ಆಗ್ರಹಿಸಿದೆ.
ಒಕ್ಕೂಟದ ಅಧ್ಯಕ್ಷ ಎಚ್.ಬಿ.ಶಿವಣ್ಣ ಮತ್ತಿತರೆ ಪದಾಧಿಕಾರಿಗಳು ಇಂದು ಅರಣ್ಯ ಸಂರಕ್ಷಣಾಧಿಕಾರಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸರ್ವೆ ನಂಬರ್ 49 ಮತ್ತು 61 ರ ಜಾಗ ಜನವಸತಿ ಪ್ರದೇಶವಾಗಿರುವುದರಿಂದ ಇದನ್ನು ಮೀಸಲು ಅರಣ್ಯ ಮಾಡಲು ಸ್ಥಳೀಯ ಜನರ ವಿರೋಧವಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ನಡಾವಳಿ ಮಾಡಲಾಗಿದೆ. ಈ ಜಮೀನಿನ ಸ್ಥಳ ತನಿಖೆ ಮಾಡುವಂತೆ ಆಗ್ರಹಿಸಿ ಕಂದಾಯ ಇಲಾಖೆಗೆ ಮನವಿ ಮಾಡಿದ ಪರಿಣಾಮ ಉಪತಹಸೀಲ್ದಾರ್, ರೆವಿನ್ಯೂ ಇನ್ಸ್ಫೆಕ್ಟರ್, ವಿಎ ಅವರು ಸ್ಥಳ ತನಿಖೆ ಮಾಡಿ ಶಿವಮೊಗ್ಗ ಅರಣ್ಯ ವ್ಯವಸ್ಥಾಪಕರಿಗೆ ವರದಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ವರದಿಯಲ್ಲಿ ಈ ಪ್ರದೇಶ ಜನವಸತಿಯಿಂದ ಕೂಡಿದ್ದಾಗಿದೆ ಎಂದು ತಿಳಿಸಿದ್ದಾರೆ. ಆದರೂ ಇನ್ನೂ ಅದನ್ನು ಮೀಸಲು ಅರಣ್ಯದಿಂದ ಕೈಬಿಟ್ಟು ಜನವಸತಿ ಪ್ರದೇಶ ಎಂದು ಘೋಷಿಸುವ ಮಾರ್ಪಾಡು ಮಾಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ವೆ ನಂಬರ್ 49 ಮತ್ತು 51 ನ್ನು ಬಿಟ್ಟು ಸರ್ವೆ ನಂಬರ್ 46 ನ್ನು ಮೀಸಲು ಅರಣ್ಯ ಮಾಡಲು ಸ್ಥಳೀಯರು ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಮನವಿ ಪರಿಗಣಿಸಿ ಜನವಸತಿ ಪ್ರದೇಶವನ್ನು ಅರಣ್ಯದಿಂದ ತೆರವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಂದ್ರ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮತ್ತಿತರರಿದ್ದರು.