ಚಿಕ್ಕಮಗಳೂರು– ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿ ಅಂಗೀಕೃತಗೊಳಿಸಿರು ವ ಹಣಕಾಸಿನ ಮಸೂದೆ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಮಾಡಿರುವ ಅನ್ಯಾಯ ಎಂದು ಅಖಿಲ ಭಾರತ ಬಿಎಸ್‌ಎನ್‌ಎಲ್ ಪಿಂಚಣಿದಾರರ ಕ್ಷೇಮಾಭಿವೃದ್ದಿ ಜಿಲ್ಲಾ ಸಂಘ ಗುರುವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಈ ಕುರಿತು ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ ಕೇಂದ್ರ ಸರ್ಕಾರವು ದಿನೇ ದಿನೇ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಇದೀಗ ಲೋಕಸಭೆಯಲ್ಲಿ ಮಂಡಿಸಿದ ಹಣಕಾಸು ಮಸೂದೆಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಪರಿಷ್ಕರಣೆ ಇರುವುದಿಲ್ಲ ಎಂಬುದಾಗಿಸಿ ಅನ್ಯಾಯ ಮಾಡಲಾಗಿದೆ ಎಂದರು.
1972 ರ ಪಿಂಚಣಿ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿದೆ. 1973 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಸಂವಿ ಧಾನ ಪೀಠದ ತೀರ್ಪೀನ ಪ್ರಕಾರ ಪಿಂಚಣಿಯನ್ನು ಪರಿಷ್ಕರಿಸಿ ಹಿಂದಿನ ಮತ್ತು ಹೊಸಬರಿಗೆ ಯಾವುದೇ ರೀತಿಯ ತಾರತಮ್ಯ ಮಾಡಬಾರದೆಂಬ ಮಹತ್ವದ ತೀರ್ಪನ್ನು ನ್ಯಾಯಾಲಯ ನೀಡಿದೆ ಎಂದು ಹೇಳಿದರು.

ಈ ರೀತಿಯ ಪರಿಷ್ಕರಣೆ ಪಿಂಚಣಿದಾರರಿಗೆ ಸರ್ಕಾರ ಕೊಟ್ಟಿರುವ ದೊಡ್ಡ ಆಘಾತ. ಸತತ ಬೆಲೆ ಏರಿಕೆ ಯಿಂದ ಬದುಕು ದುಸ್ತರವಾಗಿದೆ. ಪಿಂಚಣಿ ಪರಿಷ್ಕರಣೆ ಮಾಡುವುದಿಲ್ಲ ಎಂಬ ಸರ್ಕಾರದ ಹುನ್ನಾರ ಸಂವಿಧಾನ ಬಾಹಿರ. ಈ ಬಗ್ಗೆ ಸಂವಿಧಾನದಲ್ಲೂ ಸಹ ಪಿಂಚಣಿದಾರರಿಗೆ ರಕ್ಷಣೆಯನ್ನು ಕೊಟ್ಟಿದೆ ಎಂದರು.
ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶ ಚಂದ್ರಚೂಡ್‌ರವರ ನೇತೃತ್ವದ ಸಂವಿಧಾನ ಪೀಠ ಪಿಂಚಣಿ ಯಲ್ಲಿ ಯಾವುದೇ ತಾರತಮ್ಯ ಮಾಡುವಾಗಿಲ್ಲ, ಪಿಂಚಣಿ ಪರಿಷ್ಕರಣೆ ನಿರಂತರವಾಗಿರಬೇಕು ಎಂದು 1983 ರಲ್ಲಿ ತೀರ್ಪನ್ನು ವಿಧಿಸಿದೆ. ಆದರೀಗ ಕೇಂದ್ರ ಸರ್ಕಾರ ತೀರ್ಪನ್ನು ಧಿಕ್ಕರಿಸಿ ಪಿಂಚಣಿ ಪರಿಷ್ಕರಣಿ ಮಾಡದಿರಲು ನಿರ್ಧ ರಿಸಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಹಿರಿಯಣ್ಣ, ಮುಖಂಡರಾದ ರಾಘವೇಂದ್ರ, ವೆಂಕಟೇಶ್, ಕಾಫಿ ಬೋರ್ಡ್ ನ ವೆಂಕಟೇಶ್, ರಾಜೇಂದ್ರ ಅನ್ವರ್, ಹುಸೇನ್, ಅಬೂಬಕರ್, ಸೆಂಟ್ರಲ್ ಎಕ್ಸೈಸ್ ಅಂಚೆ ಇಲಾಖೆ ವಿಮಾನ ನಿಗಮ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
- ಸುರೇಶ್ ಎನ್.