ಚಿಕ್ಕಮಗಳೂರು-ತಾಲ್ಲೂಕಿನ ಅಲ್ಲಂಪುರ ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ವಾರ್ಷಿಕ ರಥೋತ್ಸವ, ಕೆಂಡಾರ್ಚನೆ ಹಾಗೂ ಪೂಜಾ ಮಹೋತ್ಸವವು ಶನಿವಾರ ಮುಂಜಾನೆ ಹೋಮ -ಹವನ ಮೂಲಕ ನೂರಾರು ಭಕ್ತಗಣಗಳ ಸಮ್ಮುಖದಲ್ಲಿ ಅತ್ಯಂತ ಶ್ರದ್ದಾಭಕ್ತಿಯಿಂದ ಸಂಪನ್ನಗೊಂಡಿತು.
ಪೂಜಾ ಕೈಂಕಾರ್ಯವು ಕಳೆದ ಎರಡು ದಿನಗಳಿಂದ ಜರುಗಿದ್ದು, ಶ್ರೀ ಶನೇಶ್ವರ ಸ್ವಾಮಿಗೆ ಎಳನೀರು, ಕಬ್ಬಿನಹಾಲಿನ ಮಹಾಭಿಷೇಕ, ಧ್ವಜಾರೋಹಣ, ಪುಣ್ಯಾಹ, ಗಣಪತಿ ಪೂಜೆ, ಮಹಾಸಂಕಲ್ಪ, ಕಳಸ ಸ್ಥಾ ಪನೆ, ಗಣಪತಿ, ನವಗ್ರಹ, ಶನೇಶ್ವರ, ಆಂಜನೇಯ ಮತ್ತು ಗಾಯತ್ರಿ ಹವನ ಜೊತೆಗೆ ತೊಟ್ಟಿಲು ಸೇವೆ ನಡೆಯಿತು.
ಇಂದು ಬೆಳಿಗ್ಗೆ ಶನೇಶ್ವರಸ್ವಾಮಿ ಕಲಶ ಮತ್ತು ಸವಾರಿ ನಡೆಮುಡಿ ಮೇಲೆ ಬಂದು ಸ್ವಾಮಿಯವರ ಕೆಂಡಾರ್ಚನೆ ಜರುಗಿತು. ಮಧ್ಯಾಹ್ನ ೧೨.೩೦ಕ್ಕೆ ಸಾರ್ವಜನಿಕ ಅನ್ನದಾಸೋಹ ಏರ್ಪಡಿಸಲಾಗಿತ್ತು. 2 ಗಂಟೆಗೆ ಬ್ರಹ್ಮರಥದಲ್ಲಿ ಶ್ರೀಯವರನ್ನು ಕುಳ್ಳರಿಸಿ ಭಕ್ತಾಧಿಗಳು ಗ್ರಾಮದ ಸುತ್ತಮುತ್ತಲು ಮೆರವಣಿಗೆ ನಡೆಸಿ ಬಳಿಕ ದೇಗುಲಕ್ಕೆ ಕರೆತಂದರು.

ಬಳಿಕ ಶ್ರೀ ಶನೇಶ್ವರಸ್ವಾಮಿ ಮಹಾಮಂಗಳಾರತಿ ನಡೆಯಿತು. ಈ ಭವ್ಯ ರಥೋತ್ಸವದ ಎರಡು ದಿನದ ಕಾರ್ಯದಲ್ಲಿ ಸುಮಾರು ಐದಾರು ಸಾವಿರ ಭಕ್ತರು ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎನ್.ಲೋಕೇಶ್, ಗೌರವಾಧ್ಯಕ್ಷ ಬಿ.ಎಸ್.ಬಸಪ್ಪಶೆಟ್ಟಿ, ಉಪಾಧ್ಯಕ್ಷ ಯು.ಪಿ.ನಾಗರಾಜ್, ಕಾರ್ಯದರ್ಶಿ ಮೋಹನ್‌ಕುಮಾರ್, ಖಜಾಂಚಿ ತಿಮ್ಮಯ್ಯ, ಪದಾಧಿಕಾರಿ ಗಳಾದ ಶಿವಕುಮಾರ್, ಪಿ.ಆರ್.ಅಮರನಾಥ್, ಕೆ.ಟಿ.ಪರಮೇಶ್, ಎ.ಟಿ.ಲೋಕೇಶ್, ಮಂಜುನಾಥ್, ಕೆ. ಎನ್.ಬಸವರಾಜ್, ಮೋಹನ್‌ಕುಮಾರ್, ಪ್ರಧಾನ ಅರ್ಚಕ ಎ.ಆರ್.ಅನಂತು ಹಾಜರಿದ್ದರು.
- ಸುರೇಶ್ ಎನ್.