ಚಿಕ್ಕಮಗಳೂರು-ಮನುಷ್ಯನ ಹೃದಯಾಳದಿ-ಭಗವಂತನ ನೆಲೆಸಿರುತ್ತಾನೆ – ಶ್ರೀ ಮರುಳಸಿದ್ಧ ಸ್ವಾಮೀಜಿ


ಚಿಕ್ಕಮಗಳೂರು– ಮನುಷ್ಯನ ಹೃದಯಾಳದಿ ಭಗವಂತನು ನೆಲೆಸಿರುವನು. ಎಲ್ಲೆಲ್ಲೋ ತೆರಳಿ ಶೋಧಿಸುವ ಮೊದಲು, ಆತ್ಮದಲ್ಲಿ ಅಡಗಿರುವ ಪರಮಾತ್ಮನೊಟ್ಟಿಗೆ ಸನ್ಮಾರ್ಗದಲ್ಲಿ ಸಾಗಿದಾಗ ಬದುಕು ಸಾತ್ವಿಕ ರೂಪು ಪಡೆದುಕೊಳ್ಳಲಿದೆ ಎಂದು ಬಸವತತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.


ತಾಲ್ಲೂಕಿನ ಲಕ್ಯಾ ಹೋಬಳಿ ಸಮೀಪ ಗಾಣದಾಳು ಗ್ರಾಮದಲ್ಲಿ ವಿಶ್ವಬಂಧು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ, ಕುಂಭಾಭಿಷೇಕ, ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಆರ್ಶೀವಚನ ನೀಡಿದರು. ಭಕ್ತಾಧಿಗಳು ಮತ್ತು ಗ್ರಾಮಸ್ಥರು ದೇವಾಲಯ ನಿರ್ಮಾಣ ಅಥವಾ ಜೀರ್ಣೋದ್ದಾರಕ್ಕೆ ಮುಂದಾದರೆ ಸಾಲದು, ದೈನಂದಿನ ಪೂಜಾಕೈಂಕರ್ಯಗಳಲ್ಲಿ ತಲ್ಲೀನರಾಗಬೇಕು. ಪ್ರಾರ್ಥನೆ, ಪೂಜೆಯ ಜೊತೆಗೆ ವೈಮನಸ್ಸಿನ ಕೆಡಕನ್ನು ತೊಡೆದು, ಸದ್ಗುಣಗಳನ್ನು ಮೈಗೂಡಿಸಿಕೊಂಡು ಸಾಗಿದರೆ ದೇವಾಲಯ ನಿರ್ಮಾಣಗೊಂಡಿದ್ದಕ್ಕೆ ಸಾರ್ಥಕವಾದಂತೆ ಎಂದು ತಿಳಿಸಿದರು.


ಶ್ರೀ ಮರುಳಸಿದ್ದೇಶ್ವರರು ಹಾಗೂ ಬಸವಣ್ಣನವರ ಒಂದೇ ಕಾಲದಲ್ಲಿ ಜೀವಿಸಿದವರು. ಶೋಷಿತರ ಧ್ವನಿಯಾಗಿ ಮತ್ತು ಸಂಸ್ಕೃತಿ, ಸಂಪ್ರದಾಯದ ಅಂಕುಡೊಂಕುಗಳನ್ನು ತಿದ್ದಲು ಇಡೀ ಜೀವನವನ್ನೆ ಸಮಾಜಕ್ಕಾಗಿ ಮುಡಿಪಿಟ್ಟ ಶ್ರೇಷ್ಟ ದಾರ್ಶನಿಕರು. ಯಜ್ಞಾಧಿಗಳನ್ನು ವಿರೋಧಿಸಿ ಉತ್ತಮ ಪರಂಪರೆಯನ್ನು ಸಮಾಜಕ್ಕೆ ಧಾರೆಗೈದವರು ಎಂದು ಬಣ್ಣಿಸಿದರು.


ಎದೆಗೂಡಿನಲ್ಲಿ ಪರಮಾತ್ಮನನ್ನು ಕಾಣಲು ಮಾನವ ತನ್ನ ದೃಷ್ಟಿಕೋನ ಬದಲಿಸಿ, ಶ್ರದ್ದಾರ್ಪೂಕವಾಗಿ ಒಳಗಣ್ಣಿನಿಂದ ಪ್ರಾರ್ಥಿಸಿದರೆ, ತಾನಾಗಿಯೇ ದರ್ಶನ ಭಾಗ್ಯ ಕರುಣಿಸುವನು. ತನ್ನೊಳಗಿನ ದೇವರನ್ನು ಪೂಜಿಸುವ ಪರಿಯನ್ನು ಅರಿತುಕೊಳ್ಳಬೇಕು. ಈ ರೀತಿಯಲ್ಲೂ ಮರುಳಸಿದ್ದರು ತನ್ನ ವ್ಯಾಪ್ತಿಯಲ್ಲಿ ಸಕಲದೈವವು ಒಂದೆಡೆ ನೆಲೆಸಿದ್ದಾನೆ ಎಂಬ ಸಿದ್ಧಾಂತ ಸಾರಿದ್ದರು ಎಂದು ಹೇಳಿದರು.


ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಶ್ರೀ ಮರುಳಸಿದ್ಧರ ಕಾಲಘಟ್ಟದಲ್ಲಿ ಆರ್ಥಿಕ ಸಮಾನತೆ, ಮಹಿ ಳೆಯರಿಗೆ ಗೌರವಿಸುವುದು, ಕಾಯಕವೇ ಕೈಲಾಸ ಎಂಬುದನ್ನು ವಚನಗಳ ಮುಖಾಂತರ ಸಾರಿ ಸಮಸಮಾಜಕ್ಕೆ ಹೆಜ್ಜೆಯಿಟ್ಟ ಶ್ರೇಷ್ಟರ ದೇವಾಲಯವನ್ನು ಪುಟ್ಟ ಗ್ರಾಮದಲ್ಲಿ ಪ್ರತಿಷ್ಟಾಪಿಸಿರುವ ಗ್ರಾಮಸ್ಥರ ಮನಸ್ಸು ಅತೀವ ದೊಡ್ಡದು ಎಂದು ಹೇಳಿದರು.


ಪ್ರಸ್ತುತ ದೇವಾಲಯ ಅಭಿವೃಧ್ದಿಗೆ ಶಾಸಕರ ನಿಧಿಯಿಂದ ೧೦ ಲಕ್ಷ ಅನುದಾನ ಪೂರೈಸುವ ಜೊತೆಗೆ ವಿವಿಧ ದಾನಿಗಳು, ಗ್ರಾಮಸ್ಥರ ಸಹಕಾರದಿಂದ ಇಂದು ವಿಜೃಂಭ್ರಮಣೆಯಿಂದ ಲೋಕಾರ್ಪಣೆಗೊಂಡಿದ್ದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ಒಕ್ಕಲಿನ ಕುಟುಂಬವು ಮುಕ್ತವಾಗಿ ತೆರಳಿ ಪೂಜಾವಿಧಿವಿಧಾನ ಕೈಗೊಳ್ಳಲು ಅನುವು ಮಾಡಲಾಗಿದೆ. ಬಸವತತ್ವ ಪೀಠವು ಕೇವಲ ಚಿಕ್ಕಮಗಳೂರು ತಾಲ್ಲೂಕಿಗೆ ಸೀಮಿತವಾಗಿತ್ತು. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಗದ್ದುಗೆ ವಹಿಸಿಕೊಂಡ ಬಳಿಕ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗದಲ್ಲೂ ಪ್ರತೀತಿ ಪಡೆಯುತ್ತಿದೆ. ಮುಂದೆ ಚಿಕ್ಕಮಗಳೂರಿಗೆ ಆಗಮಿಸುವವರು ಶೃಂಗೇರಿ, ರಂಭಾಪುರೀ ಮಠಗಳಿಗೆ ಭೇಟಿ ನೀಡಿದಂತೆ, ಬಸವತತ್ವಪೀಠಕ್ಕೆ ಭೇಟಿ ನೀಡುವಂತೆ ಅಭಿವೃದ್ದಿಪಡಿಸಲು ಮುಂದಾಗುತ್ತೇವೆ ಎಂದರು.


ಉದ್ಯಮಿ ಹಾಗೂ ದಾನಿ ಬಿ.ಎನ್.ಚಿದಾನಂದ್ ಮಾತನಾಡಿ ದೇವಾಲಯ ಅಭಿವೃಧ್ದಿ ಹಣ ಕೊಡು ವಷ್ಟು ದೊಡ್ಡವರಲ್ಲ, ಕೇವಲ ಸೇವೆಯ ದೃಷ್ಟಿಯಿಂದ ಕೆಲಸ ನಿರ್ವಹಿಸಿದ್ದೇವೆ. ಭಕ್ತಾಧಿಗಳು ಪ್ರಾರ್ಥನೆ ಹಾ ಗೂ ಆಚರಣೆಗಾಗಿ ತಾವು ಸೇರಿದಂತೆ ಅನೇಕರ ದಾನದಿಂದ ಶ್ರೀ ಮರುಳಸಿದ್ದೇಶ್ವರರ ಭವ್ಯ ಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ ಎಂದು ಹೇಳಿದರು.


ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಚಂಚಲ ಮನಸ್ಸನ್ನು ನಿಗ್ರಹಿಸಲು ದೇವಾಲಯ ಅತ್ಯಂತ ಪುಣ್ಯಸ್ಥಳಗಳು. ಪೂರ್ವಿಕರ ಕಾಲದಲ್ಲಿ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಪಾಲಿಸಬೇಕು. ಮೊದಲು ಸ್ಥಳೀಯ ದೇವಾಲಯ ಆದ್ಯತೆ ನೀಡಿ, ತದನಂತರ ಪ್ರಸಿದ್ಧ ದೇಗುಲಗಳಿಗೆ ತೆರುವ ಪದ್ಧ ತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್, ಉದ್ಯಮಿಗಳಾದ ಬಿ.ಎನ್. ರಾಜಶೇಖರ್, ಬಿ.ಎನ್.ಷಡಾಕ್ಷರಿ, ಸಾಹಿತಿ ಚಟ್ನ ಹಳ್ಳಿ ಮಹೇಶ್, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಮಹಡಿಮನೆ ಸತೀಶ್, ಶ್ರೀ ಮರುಳಸಿದ್ದೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಎಂ.ರಮೇಶ್, ಉಪಾಧ್ಯಕ್ಷ ಜಿ.ರಮೇಶ್, ಗ್ರಾಮಸ್ಥರಾದ ಚಂದ್ರಶೇಖರ್, ಮಲ್ಲಿಕಾರ್ಜುನ್, ಗಿರೀಶ್, ಎಲ್.ಆರ್.ಈಶ್ವರಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?