ಚಿಕ್ಕಮಗಳೂರು,ಮೇ.08:- ರೆಸಾರ್ಟ್ ಮಾಲೀಕರು ಸ್ಥಳೀಯ ಗ್ರಾಮಸ್ಥರಿಗೆ ಕಿರುಕುಳ ಮತ್ತು ತೊಂದರೆ ನೀಡುತ್ತಿದ್ದು, ಇವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಟಿಸಿಎಲ್ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಉಪ್ಪಳ್ಳಿ ಕೆ.ಭರತ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ತಾಲ್ಲೂಕಿನ ಮಲ್ಲೇನಹಳ್ಳಿಯಲ್ಲಿ ಇರುವ ಬಿಂಡಿಗ ಪೀಕ್ ರೆಸಾರ್ಟ್ಗೆ ಪ್ರತಿನಿತ್ಯ ನೂರಾರು ವಾಹನಗಳು ಬರುತ್ತಿದ್ದು, ಈ ವಾಹನಗಳಲ್ಲಿ ಬರುವ ಪ್ರವಾಸಿಗರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಬರುತ್ತಿರುವುದರಿಂದ ಇಲ್ಲಿನ ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.

ವಾರಂತ್ಯದಲ್ಲಿ ಈ ಭಾಗದಲ್ಲಿ ವಾಹನ ದಟ್ಟಣೆ ಅತಿಯಾಗಿರುತ್ತದೆ. ರೆಸಾರ್ಟ್ ಮಾಲೀಕರು ಪ್ರವಾಸಿಗರ ವಾಹನಗಳಿಗೆ ನಿಲುಗಡೆಗೆ ಸ್ಥಳಾವಕಾಶ ಮಾಡಿಕೊಳ್ಳದೆ ಇಲ್ಲಿನ ಸ್ಥಳೀಯ ಗ್ರಾಮಸ್ಥರು ತಮ್ಮ ಮನೆಗಳಿಗೆ ಮತ್ತು ತೋಟಗಳಿಗೆ ಹೋಗಲು ಅವಕಾಶ ಮಾಡಿಕೊಡದೆ, ತೊಂದರೆ ಕೊಡುತ್ತಿದ್ದಾರೆ. ಈ ರಸ್ತೆಯಲ್ಲಿ ಎರಡು ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಈ ರೆಸಾರ್ಟ್ಗೆ ತೆರಳಲು ಸುಮಾರು 2 ರಿಂದ 4 ಕೀ.ಮೀ ವರೆಗೆ 8 ಅಡಿ ಅಗಲದ ಕಿರಿದಾದ ರಸ್ತೆ ಇದ್ದು, ತಿಂಗಳಿಗೆ ಕನಿಷ್ಠ 2 ರಿಂದ 3 ಬಾರಿ ಈ ರೆಸಾರ್ಟ್ನಲ್ಲಿ ಸಾವಿರಾರು ಜನರನ್ನು ಸೇರಿಸಿಕೊಂಡು ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ರೆಸಾರ್ಟ್ನಲ್ಲಿ ರಾತ್ರಿಯಿಡಿ ಕರ್ಕಶ ಶಬ್ದಗಳೊಂದಿಗೆ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಲ್ಲಿನ ನಿವಾಸಿಗಳು ರಾತ್ರಿ ನಿದ್ದೆ ಮಾಡಲು ಮತ್ತು ವಿದ್ಯಾರ್ಥಿಗಳು ಓದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ರೆಸಾರ್ಟ್ ಮಾಲೀಕರ ವಿರುದ್ಧ ಪೊಲೀಸ್ ಇಲಾಖೆಗೆ ಲಿಖಿತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಬAಧಿಸಿದ ರೆಸಾರ್ಟ್ ಮಾಲೀಕರು ಹಾಗೂ ಸಿಬ್ಬಂದಿಗಳೊಂದಿಗೆ ತಮಗಾಗುತ್ತಿರುವ ತೊಂದರೆ ಬಗ್ಗೆ ಮನವಿ ಮಾಡಿಕೊಂಡರೂ ನಿವಾಸಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಜೊತೆಗೆ ಪ್ರಾಣ ಬೆದರಿಕೆ ಹಾಕುತ್ತಿದ್ದು, ಜಿಲ್ಲಾಡಳಿತ ರೆಸಾರ್ಟ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ನಿವಾಸಿಗಳಿಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಜು, ಮಣಿ, ಬಾಲು, ನಾರಾಯಣ, ಮುತ್ತುರಾಜು, ಅಯ್ಯಪ್ಪ, ಬಾಲಕೃಷ್ಣ, ಶ್ರೀನಿವಾಸ್, ಸುದೇವ, ರ‍್ಮುಗ ಸೇರಿದಂತೆ ಮತ್ತಿತರರು ಇದ್ದರು.