ಚಿಕ್ಕಮಗಳೂರು, ಮೇ.19:- ತಾಲ್ಲೂಕಿನ ಕೆಸವಿನ ಹಕ್ಲು ಗ್ರಾಮದಲ್ಲಿ ಖಾಸಗೀ ಸಂಸ್ಥೆ ನಡೆಸುತ್ತಿರುವ ಕಲ್ಲು ಗಣಿಗಾರಿಕೆಯ ಅನುಮತಿಯನ್ನು ರದ್ದುಪಡಿಸಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಸೋಮ ವಾರ ಬಿಎಸ್ಪಿ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಆಲ್ದೂರು ಹೋ ಬಳಿಯ ಕೆಸವಿನ ಹಕ್ಕು ಗ್ರಾಮದಲ್ಲಿನ ಗಣಿಗಾರಿಕೆಯಿಂದ ಚಂಡಗೋಡು, ಗುಡ್ಡದೂರು, ಬೆಳಗೋಡು, ಕಂಚಿಕಲ್‌ದುರ್ಗ, ದೋಣಗುಡಿಗೆ, ವಗರ್‌ರಸ್ತೆ ಗ್ರಾಮಗಳಿಗೆ ತೀವ್ರ ಆತಂಕ ಎದುರಾಗಿದೆ ಎಂದರು.

ಖಾಸಗೀ ಸಂಸ್ಥೆಯೊಂದಕ್ಕೆ ಭೂ ವಿಜ್ಞಾನ ಇಲಾಖೆ ಕ್ರಷನ್ ನಡೆಸಲು ಅನುಮತಿ ನೀಡಿದೆ. ಆದರೆ ಈ ಸಂಸ್ಥೆ ನೀಡಿರುವ ಅನುಮತಿಯನ್ನು ಮೀರಿ ಸುಮಾರು 300 ಅಡಿ ಆಳದಷ್ಟು ಕೊರೆದು ಕಲ್ಲುಗಳನ್ನು ತೆಗೆ ಯುತ್ತಿರುವ ಪರಿಣಾಮ ಗ್ರಾಮಗಳಲ್ಲಿ ಭೂ ಕಂಪನವಾಗಿ ನಿವಾಸಿಗಳು ಭಯಭೀತರಾಗುತ್ತಿದ್ದಾರೆ ಎಂದು ಹೇಳಿದರು.
ಕೂಡಲೇ ಭೂ ವಿಜ್ಞಾನ ಇಲಾಖೆ ಖಾಸಗೀ ಸಂಸ್ಥೆಗೆ ನೀಡಿರುವ ಕಲ್ಲು ಗಣಿಗಾರಿಕೆಯ ಪರವಾನಿಗೆ ರದ್ದುಪಡಿಸಬೇಕು. ಒಂದು ವೇಳೆ ಯಾವುದೇ ಒತ್ತಡಕ್ಕೆ ಒಳಗಾಗಿ ಗಣಿಗಾರಿಕೆಗೆ ಅನುಮತಿ ನೀಡಿದ್ದಲ್ಲಿ ಗ್ರಾ ಮಸ್ಥರೊಟ್ಟಿಗೆ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ಲೋಕಸಭಾ ಕ್ಷೇತ್ರದ ಸಂಯೋಜಕ ಕೆ.ಆರ್.ಗಂಗಾಧರ್, ಗ್ರಾಮಸ್ಥರಾದ ನಾರಾಯಣ್, ಪುಟ್ಟೇಗೌಡ, ಜಯರಾಮೇಗೌಡ, ವಸಂತ್‌ಕುಮಾರ್, ಸುರೇಶ್ ಮತ್ತಿತರರಿದ್ದರು.
– ಸುರೇಶ್ ಎನ್.