ಚಿಕ್ಕಮಗಳೂರು-ಹೆಣ್ಣು-ಮತ್ತು-ಗಂಡು-ಎಂಬ- ತಾರತಮ್ಯವಿಲ್ಲದೆ-ಎಲ್ಲರನ್ನೂ-ಸಮಾನವಾಗಿ- ಗೌರವಿಸಬೇಕು-ಹಿರಿಯ ಸಿವಿಲ್ ನ್ಯಾಯಾಧೀಶರು-ವಿ. ಹನುಮಂತಪ್ಪ


ಚಿಕ್ಕಮಗಳೂರು: ಹೆಣ್ಣು ಮಕ್ಕಳನ್ನು ಭ್ರೂಣದಲ್ಲಿ ಹತ್ಯೆ ಮಾಡುವುದು ಕಾನೂನಾತ್ಮಕ ಅಪರಾಧವಾಗಿದೆ. ಹೆಣ್ಣು ಮತ್ತು ಗಂಡು ಎಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಿ. ಹನುಮಂತಪ್ಪ ಹೇಳಿದರು.

ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಘಟಕ ಹಾಗೂ ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್, ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ”ಭ್ರೂಣ ಹತ್ಯೆ ನಿಷೇಧ ಮತ್ತು ನಿಯಂತ್ರಣ  ಕಾಯ್ದೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಕಾಯ್ದೆ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದಾರಿ ತಪ್ಪುತ್ತಿದ್ದು, ಮಕ್ಕಳು ಶಾಲಾ ಅವಧಿಯಲ್ಲಿ ಶಿಕ್ಷಣದ ಕಡೆಗೆ ಗಮನ ನೀಡಬೇಕು.ಜೀವನದಲ್ಲಿ ಮಕ್ಕಳು ಗುರಿಗಳನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು. ಗುರಿ ಸಾಧಿಸುವವರೆಗೆ ಪ್ರಯತ್ನ ಬಿಡಬಾರದು, ಸಂವಿಧಾನದ ಆಶಯದಂತೆ ಸಂವಿಧಾನದ ಅಡಿಯಲ್ಲಿ ಕಾನೂನಾತ್ಮಕವಾಗಿ ಮಕ್ಕಳನ್ನು ರಕ್ಷಣೆ ಮಾಡಬೇಕು. ಸರ್ಕಾರವು ಮಕ್ಕಳ ರಕ್ಷಣೆ ಕುರಿತು ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು, ಮಕ್ಕಳು ಬೆಳೆದು ಸಮುದಾಯ ರಾಜ್ಯ, ದೇಶವನ್ನು ಮುನ್ನಡೆಸಬೇಕು. ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, 18 ವರ್ಷದೊಳಗಿನ ಹೆಣ್ಣು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.

ಮಕ್ಕಳು ನಮ್ಮ ನಡುವೆ ಓಡಾಡುವ ಚೇತನಗಳು, ಅವರ ರಕ್ಷಣೆ  ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಮಕ್ಕಳನ್ನು ರಕ್ಷಣೆ ಮಾಡುವುದು ತಾಯಿಯ ಗರ್ಭದಲ್ಲಿರುವಾಗಲೇ ಹಲವಾರು ಕಾನೂನಾತ್ಮಕ ರಕ್ಷಣೆ ಹಾಗೂ ಯೋಜನೆಗಳ ಫಲವನ್ನು ಪಡೆದು ಜನಿಸುತ್ತದೆ. ಮಕ್ಕಳು ದೇಶದ ಆಸ್ತಿ, ಮಕ್ಕಳು ನಂಬಿಕೆ, ನೆಮ್ಮದಿ, ಸುಖ-ಸಂತೋಷದ ಹಾಗೂ ಕಲಿಯುವ ವಾತಾವರಣದಲ್ಲಿ ಬೆಳೆದು ಬಂದರೆ ಅವರಿಗೆ ಅರ್ಥಪೂರ್ಣ ಭವಿಷ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹುಟ್ಟುವ ಪ್ರತಿ ಮಗುವನ್ನು ಅಕ್ಕರೆಯಿಂದ ಜಾಗರೂಕತೆಯಿಂದ ಬೆಳೆಸಿ ಎಂದು ಹೇಳಿದರು.

ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಶುಂಪಾಲರಾದ ಶ್ರೀಧರಮೂರ್ತಿ ಟಿ.ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಉಪಯುಕ್ತವಾಗಿದೆ.ನಾವು ಪ್ರತಿದಿನ ಮಕ್ಕಳಿಗೆ ಪಠ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಿರುತ್ತೇವೆ ಆದರೆ ಇಂದು ನ್ಯಾಯಾಧೀಶರು ಮಕ್ಕಳಿಗೆ ತಮ್ಮ ಅನುಭವ ಮತ್ತು ಪ್ರಕರಣದ ಉದಾಹರಣೆ ನೀಡಿ ಅರ್ಥ ಗರ್ಭಿತವಾಗಿ ಮಾಹಿತಿ ನೀಡಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ  ಮಾತನಾಡಿ ಸಂವಿಧಾನದ ಅಡಿಯಲ್ಲಿ ಮಕ್ಕಳಿಗೂ ಕೂಡಾ ಹಕ್ಕುಗಳಿದ್ದು ಅವುಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳಿಗೆ ಸಮಸ್ಯೆಗಳು ಬಂದ ಸಮಯದಲ್ಲಿ ಮಕ್ಕಳ ಸಹಾಯವಾಣಿ-1098 ಗೆ ಕರೆಮಾಡಿದ್ದಲ್ಲಿ ತುರ್ತಾಗಿ ಸ್ಪಂದಿಸಿ ಮಕ್ಕಳ ರಕ್ಷಣೆಯನ್ನು ಮಾಡಲಾಗುತ್ತದೆ. ಮಕ್ಕಳು ಮೊಬೈಲ್ ಬಳಕೆಗಳನ್ನು ಕಡಿಮೆ ಮಾಡಿ ಓದಿನ ಕಡೆ ಗಮನಹರಿಸಬೇಕು ಪ್ರತಿದಿನ ಮಕ್ಕಳು ಯೋಗ, ಧ್ಯಾನ ಮಾಡುವುದರಿಂದ ಹೆಚ್ಚಿನ ಜ್ಞಾನವನ್ನು ಪಡೆಯಬಹುದು. ಮಕ್ಕಳು ವಾಹನಗಳನ್ನು ಚಲಾಯಿಸುವಾಗ ಅಪಘಾತವಾಗಬಹುದು ಆದ್ದರಿಂದ 18 ವರ್ಷದ ನಂತರ ಲೈಸೆನ್ಸ್ ಪಡೆದು ವಾಹನ ಚಲಾಯಿಸಬೇಕು ಎಂದು ತಿಳಿಸಿದರು.

ಜಿಲ್ಲಾ ನಿರೂಪಣಾಧಿಕಾರಿ ಲೋಕೇಶ್ವರಪ್ಪ ಪಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಂತೋಷ, ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಯಾಂತ್ರಿಕ ವಿಭಾಗ ವಿಬಾಗಾಧಿಕಾರಿ, ಡಾ| ಸುನೀಲ್‌ಕುಮಾರ್ ಹೆಚ್,ಎಸ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?