ಚಿಕ್ಕಮಗಳೂರು- ಭಗವಂತನ ಆರಾಧನೆಯಿಂದ ಮಾನಸಿಕ ನೆಮ್ಮದಿ- ಶ್ರೀ ರೇಣುಕಾ ಮಹಂತ ಶಿವಾಚಾರ್ಯ ಸ್ವಾಮೀಜಿ

ಚಿಕ್ಕಮಗಳೂರು, ಮೇ 11: ಸಂಸಾರದ ಜಂಜಾಟ ಹಾಗೂ ಖಿನ್ನತೆಯಿಂದ ಹೊರಬರಲು ಮನುಷ್ಯನು ದೇವಾಲಯ ಹಾಗೂ ಗುರುಗಳ ಸನ್ನಿಧಿಯಲ್ಲಿ ಪ್ರಾರ್ಥಿಸಿದರೆ ಚಿಂತೆಗಳು ಕಣ್ಮರೆಯಾಗುತ್ತವೆ ಮತ್ತು ಮನಸ್ಸಿಗೆ ಶಾಂತಿ ಲಭಿಸುತ್ತದೆ ಎಂದು ಮಾಚನಗೊಂಡನಹಳ್ಳಿ ಬೃಹನ್ಮಠದ ಶ್ರೀ ರೇಣುಕಾ ಮಹಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ತೊಂಡವಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಶ್ರೀ ಶನೇಶ್ವರ ದೇವಾಲಯ ಪ್ರವೇಶೋತ್ಸವ ಹಾಗೂ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

“ಮಾನವರು ತಮ್ಮ ಕೆಲಸ ಕಾರ್ಯಗಳಿಂದ ಆರ್ಥಿಕವಾಗಿ ಸದೃಢರಾಗಬಹುದು. ಆದರೆ ಮನಸ್ಸಿಗೆ ಶಾಂತಿ ಲಭಿಸಲು ದೇವಾಲಯಗಳಂತಹ ಶ್ರದ್ಧಾಕೇಂದ್ರಗಳು ಅವಶ್ಯಕ. ದೃಢ ಸಂಕಲ್ಪದೊಂದಿಗೆ ಮನುಷ್ಯನು ಮುಂದುವರೆದರೆ, ಭಗವಂತನ ಪ್ರಭಾವದಿಂದ ವೈಯಕ್ತಿಕ ಬದುಕು ಹಸನಾಗುತ್ತದೆ, ಎಂದು ಅವರು, “ಕೌಟುಂಬಿಕ ಚಿಂತೆ, ಮಕ್ಕಳ ಪಾಲನೆ, ಕೆಲಸದ ಒತ್ತಡ ಇತ್ಯಾದಿಗಳಿಂದ ಮನುಷ್ಯನು ಮಾನಸಿಕವಾಗಿ ಕುಗ್ಗುತ್ತಾನೆ. ಶಾಂತಿ ಮತ್ತು ನೆಮ್ಮದಿಯನ್ನು ಕಳೆದುಕೊಂಡು ಬದುಕೆಂಬ ಬಂಡಿಯನ್ನು ಸಾಗಿಸಲು ಅಸಾಧ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಶ್ರದ್ಧಾಕೇಂದ್ರಗಳು ಮತ್ತು ಗುರುಗಳ ಆಶೀರ್ವಾದದಿಂದ ಮತ್ತೆ ನೆಮ್ಮದಿಯನ್ನು ಗಳಿಸಬಹುದು,” ಎಂದು ಹೇಳಿದರು.

“ಮನುಷ್ಯನ ಜೀವನದಲ್ಲಿ ಹುಟ್ಟಿನಿಂದ ಸಾಯುವವರೆಗೂ ಜಂಜಾಟವೇ. ಒಂದಲ್ಲೊಂದು ಚಿಂತೆಯಲ್ಲಿ ಸಿಲುಕಿಕೊಳ್ಳುತ್ತಾನೆ. ಆ ಚಿಂತೆಗಳಿಂದ ಸುಟ್ಟು ಮಣ್ಣಾಗದೆ, ಸದೃಢ ಆತ್ಮಶಕ್ತಿ ಬೆಳೆಸಿಕೊಂಡು ದೇವರ ಮಾರ್ಗದಲ್ಲಿ ಸಾಗಿದರೆ ಹೊಸ ಜೀವನ ದೊರೆಯುತ್ತದೆ,” ಎಂದು ಅವರು ವಿವರಿಸಿದರು.

ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, “ಭಗವಂತನು ಸುಖಸುಮ್ಮನೆ ಒಲಿಯುವುದಿಲ್ಲ. ದೇವಾಲಯಗಳಲ್ಲಿ ಶ್ರದ್ಧೆ, ವಿನಯತೆ ಹಾಗೂ ಆರಾಧನೆ ಎಂಬ ಗುಣಗಳಿದ್ದರೆ ತಾನಾಗಿಯೇ ಆಶೀರ್ವದಿಸುತ್ತಾನೆ. ಸಮಾಜದಲ್ಲಿ ಎಲ್ಲೆಡೆ ತಲೆ ಎತ್ತುವ ಮನುಷ್ಯನು ದೇವಾಲಯದಲ್ಲಿ ಮಾತ್ರ ತಲೆ ತಗ್ಗಿಸುವ ಪವಿತ್ರ ಸ್ಥಳವೆಂದು ಕಂಡುಬರುತ್ತದೆ,” ಎಂದರು.

“ಮನುಷ್ಯನು ಪ್ರಕೃತಿಯ ಪಂಚಭೂತಗಳನ್ನು ದೇವರ ರೂಪದಲ್ಲಿ ಕಾಣಬೇಕು. ಅವನ್ನು ಮಲೀನಗೊಳಿಸುವ ಹಕ್ಕು ಯಾರಿಗೂ ಇಲ್ಲ. ದೇವಾಲಯಗಳನ್ನು ನಿರ್ಮಿಸಿ ಸುಮ್ಮನಾಗದೆ ಪ್ರತಿದಿನವೂ ಆರಾಧನೆ ನಡೆಯಬೇಕು. ಬಹು ವರ್ಷಗಳ ಕನಸು ಈಡೇರಿದ್ದು, ಗ್ರಾಮಸ್ಥರ ಜವಾಬ್ದಾರಿಯೂ ಹೆಚ್ಚಾಗಿದೆ,” ಎಂದರು.

ದೇವಾಲಯ ಸಮಿತಿಯ ಅಧ್ಯಕ್ಷ ಹಾಲಪ್ಪ ಮಾತನಾಡಿ, “ಅನೇಕ ವರ್ಷಗಳಿಂದ ನೆನೆಗುದಿಗೆಯಲ್ಲಿದ್ದ ಶ್ರೀ ಶನೇಶ್ವರ ದೇವಾಲಯ ಗ್ರಾಮಸ್ಥರು, ದಾನಿಗಳು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಪೂರ್ಣಗೊಂಡಿದೆ. ಮುಂಜಾನೆಯಿಂದ ಹೋಮ-ಹವನಗಳು ನಡೆದಿದ್ದು, ಬೃಹನ್ಮಠದ ಶ್ರೀಗಳಿಂದ ಪ್ರಾಣ ಪ್ರತಿಷ್ಠಾಪನೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿದೆ,” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಸ್.ರಾಜು, ಪಿಸಿಎಲ್‌ಡಿ ಬ್ಯಾಂಕ್ ನಿರ್ದೇಶಕ ದಿನೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ್, ರುದ್ರಮ್ಮ, ವಿಎಸ್ಸೆನ್ ಸದಸ್ಯ ಪ್ರಶಾಂತ್, ವಿಗ್ರಹದಾನಿಗಳು ಟಿ.ಹೆಚ್. ಸೋಮಯ್ಯ ಹಾಗೂ ಟಿ.ಎಸ್. ಚಂದ್ರಯ್ಯ, ಗ್ರಾಮಸ್ಥರಾದ ಟಿ.ಆರ್. ಶಿವಯ್ಯ, ಈರಯ್ಯ, ಮಂಜುನಾಥ್, ಪರಮೇಶ್, ಸತೀಶ್, ಮಲ್ಲೇಶ್, ಕಂಡಪ್ಪ, ಪುರುಷೋತ್ತಮ್, ಈರೇಶ್, ಗಂಗಾಧರ್, ಅರ್ಚಕ ಧರ್ಮೇಶ್ ಮತ್ತಿತರರು ಹಾಜರಿದ್ದರು.

  • ಎನ್‌ . ಸುರೇಶ್‌

Leave a Reply

Your email address will not be published. Required fields are marked *