ಧಾರವಾಡ:ವಿದ್ಯಾರ್ಥಿಗಳಿಗೆ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಜೊತೆಗೆ ಸಂಸ್ಕಾರ ನೀಡುವ ಕೆಲಸವನ್ನು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯು ಮಾಡುತ್ತಿದೆ-ಕಮೀಷನರ್ ಶಶಿಕುಮಾರ್

ಧಾರವಾಡ: ಧಾರಾವಾಡ ವಿಕಾಸ್ ನಗರದಲ್ಲಿರುವ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಚಿಣ್ಣರ ಜಾಣರ ಜಗಲಿ ಹರಟೆ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ತಂದೆ ತಾಯಿಗಳ ಪಾದಪೂಜೆ ಕಾರ್ಯಕ್ರಮವು ಹೇಮಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡರ ನೇತೃತ್ವದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹುಬ್ಬಳ್ಳಿ- ಧಾರಾವಾಡ ಮಹಾನಗರ ಪಾಲಿಕೆಯ ಕಮೀಷನರ್ ಶಶಿಕುಮಾರ್ ಮಾತನಾಡಿ ಆದಿಚುಂಚನಗಿರಿ ಶ್ರೀ ಕ್ಷೇತ್ರದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥಸ್ವಾಮೀಜಿ ಅವರು ಜನಸಾಮಾನ್ಯರಿಗೂ ಶಿಕ್ಷಣ ಸಿಗಬೇಕು ಎಂಬ ಪರಿಕಲ್ಪನೆಯಿಂದ ಧಾರಾವಾಡ ಸೇರಿದಂತೆ,ಮೈಸೂರು,ಬೆಂಗಳೂರು, ಕಾಶಿ, ಅಮೇರಿಕಾ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ.

ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಜೊತೆಗೆ ಸಂಸ್ಕಾರ ನೀಡುವ ಕೆಲಸವನ್ನು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯು ಮಾಡುತ್ತಿದೆ.ಅದೇ ರೀತಿ ಇಂದು ನಮ್ಮ ಧಾರವಾಡ ನಗರದ ವಿಕಾಸ ನಗರದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಗದ್ಗುರು,ಭೈರವೈಕ್ಯ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿಗಳ 51ನೇ ಪಟ್ಟಾಭಿಷೇಕ ಮಹೋತ್ಸವದ ಸವಿನೆನಪಿನ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತಂದೆತಾಯಿಗಳ ಪಾದಪೂಜಾ ಕಾರ್ಯಕ್ರಮ ಹಾಗೂ ಚಿಣ್ಣರ ಜಾಣರ ಜಗಲಿ ಹರಟೆ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಜಾನಪದ ರಂಗನ್ನು ಹೆಚ್ಚಿಸಿದ್ದಾರೆ.ಜಾಣರ ಜಗಲಿ ಕಾರ್ಯಕ್ರಮವು ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ವಾಕ್ ಚಾತುರ್ಯ, ಭಾಷಣ ಕಲೆಯನ್ನು ಕಲಿಸಿಕೊಡುತ್ತದೆ.

ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಅತೀ ಅಗತ್ಯವಾಗಿದೆ.ವಿದ್ಯಾರ್ಥಿಗಳಿಗೆ ಅಂಕಗಳಿಕೆಯ ಜೊತೆಗೆ ಮಾನವೀಯ ಸಂಭಂದಗಳ ಬಗ್ಗೆ ಅರಿವು ಮೂಡಿಸಿ ತಂದೆತಾಯಿಗಳ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸಲು ಪಾದಪೂಜಾ ಕಾರ್ಯಕ್ರಮ ರೂಪಿಸಿ ವಿದ್ಯಾರ್ಥಿಗಳಿಂದಲೇ ತಂದೆ ತಾಯಿಯ ಪಾದಪೂಜೆ ಮಾಡಿಸಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ಸಂಗತಿಯಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದರು.

ನಾಡಿನ ಪ್ರಖ್ಯಾತ ಜಗಲಿ ಹರಟೆ ಕಾರ್ಯಕ್ರಮ ಖ್ಯಾತಿಯ ಗಂಗಾವತಿಯ ಬಸವರಾಜ್ ಮಹಾಮನಿ ಚಿಣ್ಣರ ಜಾಣರ ಜಗಲಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ ಮಕ್ಕಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ಹರಟೆ ಕಾರ್ಯಕ್ರಮ ವರದಾನವಾಗಿದೆ. ಹರಟೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳು ಮಾತನಾಡುವ ಕಲೆಯನ್ನು ಕಲಿತು ಲೋಕಜ್ಞಾನದ ಮೂಲಕ ಅತ್ಯುತ್ತಮ ಸಾಧನೆ ಮಾಡಲಿದ್ದಾರೆ ಎಂದು ಮಾಮನಿ ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿದರು.

ಬೆಳಗಾವಿಯ ನಾಗನೂರು ಮಠದ ಡಾ.ಶ್ರೀ. ಸಿದ್ಧರಾಮೇಶ್ವರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಜನತೆಗೆ ಗುಣ ಮಟ್ಟದ ಶಿಕ್ಷಣ ನೀಡಲು ಬಿಜಿಎಸ್ ಶಿಕ್ಷಣ ಟ್ರಸ್ಟ್ ಮುಂದಾಗಿದೆ. ಪದ್ಮಭೂಷಣ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಮಾನಸ ಪುತ್ರರಾದ ಡಾ.ಜೆ.ಎನ್. ರಾಮಕೃಷ್ಣೇ ಗೌಡ ಅವರ ನೇತೃತ್ವದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ವಿಶೇಷವಾಗಿ ಚಿಣ್ಣರ ಜಾಣರ ಜಗಲಿ ಕಟ್ಟೆಯ ಪರಿಕಲ್ಪನೆ ಆಧಾರದ ಮೇಲೆ ಹರಟೆ ಕಾರ್ಯಕ್ರಮ ರೂಪಿಸಿರುವುದು ವಿಶೇಷವಾಗಿದೆ. ಮಕ್ಕಳ ವ್ಯಕ್ತಿತ್ವದ ಸಮಗ್ರ ವಿಕಾಸಕ್ಕೆ ವರದಾನವಾಗಿರುವ ಹರಟೆ ಕಾರ್ಯಕ್ರಮದ ನೇತೃತ್ವವನ್ನು ದೃಶ್ಯ ಮಾಧ್ಯಮದ ಹರಟೆ ಖ್ಯಾತಿಯ ಮಾಮನಿ ವಹಿಸಿ ಮಕ್ಕಳ ಪ್ರತಿಭೆಯನ್ನು ಹೊರ ಚೆಲ್ಲುವ ಕೆಲಸವನ್ನು ಸಮರ್ಥವಾಗಿ ಮಾಡಿ ಕಾರ್ಯಕ್ರಮ ನಡೆಸಿ ಕೊಟ್ಟಿರುವುದು ಸಂತೋಷ ತಂದಿದೆ ಎಂದು ಸ್ವಾಮೀಜಿ ಹೇಳಿದರು.

ತಂದೆ ತಾಯಿಗಳ ಪಾದಪೂಜೆ ಹಾಗೂ ಚಿಣ್ಣರ ಜಾಣರ ಜಗಲಿ ಕಾರ್ಯಕ್ರಮದ ರೂವಾರಿಗಳು ಹಾಗೂ ಹೇಮಗಿರಿ ಶಾಖಾ ಮಠ ದ ಗೌರವ ಕಾರ್ಯದರ್ಶಿ ಡಾ. ಜೆ.ಎನ್.ರಾಮಕೃಷ್ಣೆಗೌಡ ಮಾತನಾಡಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಮಕ್ಕಳ ವ್ಯಕ್ತಿತ್ವ ವಿಕಸನಗೊಳಿಸುವ ಜೊತೆಗೆ ಮಕ್ಕಳಲ್ಲಿ ಗುರುಹಿರಿಯರು ಹಾಗೂ ತಂದೆತಾಯಿಗಳನ್ನು ಗೌರವಿಸುವ ಸಂಸ್ಕಾರ ತುಂಬುವ ಕಾರ್ಯವನ್ನು ಸಮರ್ಥವಾಗಿ ಮಾಡಲಾಗಿದೆ.

ಗ್ರಾಮೀಣ ಪ್ರತಿಭೆಗಳ ಸಾಮರ್ಥ್ಯ ಕಂಡು ಸಂತೋಷವಾಗಿದೆ.ಮಕ್ಕಳ ಪ್ರತಿಭೆಯನ್ನು ಉತ್ತೇಜಸಿ ಪ್ರೋತ್ಸಾಹಿಸುತ್ತಿರುವ ಪೋಷಕರ ಸಹಕಾರವನ್ನು ಸದಾ ಸ್ಮರಿಸುವುದಾಗಿ ಡಾ.ಜೆ.ಎನ್. ರಾಮಕೃಷ್ಣೆಗೌಡ ಹೇಳಿದರು.ಶಾಲಾ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಯಕ್ಷಗಾನ ನೃತ್ಯವು ಸಾರ್ವಜನಿಕರು ಹಾಗೂ ಅತಿಥಿಗಳನ್ನು ರಂಜಿಸಿತು.

ಪಾಂಡವಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಜಯರಾಮ್, ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಅಪ್ಪನಹಳ್ಳಿ ಅರುಣ್ ಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಚರಣ್ ತಿಲಕ್, ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್, ಮುಖಂಡ ಬೆಳ್ಳಾಳೆ ಮಲ್ಲೇಶ್, ಉಧ್ಯಮಿ ಜಕ್ಕನಹಳ್ಳಿ ವಿಶ್ವನಾಥ್, ತಾಲ್ಲೂಕು ಪಂಚಾಯಿತಿ‌ ಮಾಜಿ ಅಧ್ಯಕ್ಷರಾದ ವಿಜಯಲಕ್ಷ್ಮಿ.ಬಿ. ರಾಜಶೇಖರ್, ಚಿನಕುರಳಿ ರಮೇಶ್, ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ. ಮಂಜುನಾಥ್, ಬನಘಟ್ಟ ಮಂಜುನಾಥ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.

—————————————-ಶ್ರೀನಿವಾಸ್ ಕೆ ಆರ್ ಪೇಟೆ
.

Leave a Reply

Your email address will not be published. Required fields are marked *

× How can I help you?