ಕೊರಟಗೆರೆ: ರಾಜ್ಯ ಸರ್ಕಾರ ಪೌರ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸುವಲ್ಲಿ ಮಲತಾಯಿ ದೋರಣೆ ಮಾಡುತ್ತಿದೆ ಎಂದು ಕೊರಟಗೆರೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕ ಮತ್ತು ನೀರು ಸರಬರಾಜು ನೌಕರರ ಸಂಘವು ದಿನನಿತ್ಯ ಸೇವೆಗಳನ್ನು ಸ್ಥಗಿತಗೊಳಿಸಿ ಬೇಡಿಕೆ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡು ತಹಶೀಲ್ದಾರ್‍ಗೆ ಮತ್ತು ಪ.ಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್ ಕರೆಗೆ ಇಲ್ಲಿನ ಪ.ಪಂ ಪೌರ ನೌಕರರು ಕರ್ತವ್ಯಕ್ಕೆ ಗೈರಾಗಿ ದಿನನಿತ್ಯ ಕೆಲಸವನ್ನು ಸ್ಥಗಿತಗೊಳಿಸಿ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ (ಮೇ.27)ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಪ.ಪಂ ಅಧಿಕಾರಿ ವರ್ಗ ಕಚೇರಿಗೆ ಬೀಗ ಹಾಕಿ ಮುಷ್ಕರದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ಪೌರ ನೌಕರರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಪೌರ ನೌಕರರ ಸಂಘದ ಅಧ್ಯಕ್ಷ ಎನ್.ನರಸಿಂಹ ಮಾತನಾಡಿ, ರಾಜ್ಯಾದ್ಯಂತ ಪೌರ ಕಾರ್ಮಿಕರು ತಮ್ಮ ಹಕ್ಕಿಗಾಗಿ ಮುಷ್ಕರ ಕೈಗೊಂಡಿದ್ದಾರೆ. ರಾಜ್ಯಾಧ್ಯಕ್ಷರ ಕರೆಗೆ ಎಲ್ಲಾ ಪೌರ ನೌಕರರು ತಮ್ಮ ಕರ್ತವ್ಯಕ್ಕೆ ಗೈರಾಗಿ ಮುಷ್ಕರಕ್ಕೆ ಕೈ ಜೋಡಿಸಿದ್ದಾರೆ. 30ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪೌರ ನೌಕರರಿಗೆ ಸಮಾನ ವೇತನ, ನಿವೃತ್ತಿ ವೇತನ, ಮರಣಕ್ಕೆ ಪರಿಹಾರ ನೀಡಿಲ್ಲಾ, ಕಸ ಸಂಗ್ರಹಣೆಯ ವಾಹನ ಡ್ರೈವರ್, ಕ್ಲೀನರ್‍ಗಳಿಗೆ ಸರ್ಕಾರ ಯಾವುದೇ ಸೇವಾ ಭದ್ರತೆ ಓದಗಿಸದೆ ಮಲತಾಯಿ ದೋರಣೆ ಮಾಡುತ್ತಿದೆ ಎಂದು ಆರೋಪ ಮಾಡಿದರು.
ಕಂಪ್ಯೂಟರ್ ಅಪರೇಟರ್ ವನಿತಾ ಮಾತನಾಡಿ, ಖಾಯಂ ನೌಕರರಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ರಾಜ್ಯ ಸರ್ಕಾರ ಪೌರ ನೌಕರರಿಗೂ ಓದಗಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ಪೌರ ನೌಕರರು ಕಾರ್ಯನಿರ್ವಹಿಸುತ್ತಿದ್ದು 3-4ತಿಂಗಳಿಗೊಮ್ಮೆ ನೌಕರರಿಗೆ ವೇತನ ಸಿಗುತ್ತಿದೆ. ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸುವ ತನಕ ಮುಷ್ಕರ ಕೈ ಬಿಡುವುದಿಲ್ಲ ಎಂದು ಹೇಳಿದರು.

ಪೌರ ನೌಕರರ ಬೇಡಿಕೆ ಏನು?
* ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು.
* ಜ್ಯೋತಿ ಸಂಜೀವಿನಿ, ಕೆಜಿಐಡಿ, ಸೇರಿದಂತೆ ಸರ್ಕಾರಿ ನೌಕರ ಪಡೆಯುವ ಎಲ್ಲಾ ಸೌಲಭ್ಯ ನೀಡಬೇಕು.
* ಹೊರಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುವ ಪೌರ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು.
* ದಿನಗೂಲಿ, ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಖಾಯಂ ಮಾಡುವುದು.
* ಎಲ್ಲಾ ನೌಕರರಿಗೆ ಎಸ್‍ಎಫ್‍ಸಿ ಮುಕ್ತ ನಿಧಿಯಿಂದ ವೇತನ ನೀಡುವುದು.

ಈ ವೇಳೆ ಪೌರ ನೌಕರರ ಸಂಘದ ಉಪಾಧ್ಯಕ್ಷ ಮುನಿಗೋಪಾಲ್, ಖಚಾಂಚಿ ನಾಗರತ್ನಮ್ಮ, ವೇಣುಗೋಪಾಲ್, ಶೈಲೇಂದ್ರ, ಹುಸೇನ್, ರೇಣುಕಾ, ಸಾವಿತ್ರಮ್ಮ, ಗಜಲಕ್ಷ್ಮೀ, ಹರೀಶ್, ನಾಗೇಶ್, ಡ್ರೈವರ್, ಮಂಜುನಾಥ್, ಜಯಮ್ಮ ಚೆನ್ನಪ್ಪ, ನಂದ, ನೀರು ಸರಬರಾಜು ನೌಕರ ರಾಮಕೃಷ್ಣ, ವೇಣು, ಭೀಮರಾಜು, ಲಿಂಗರಾಜು, ತಿಮ್ಮರಾಜು, ದೇವರಾಜ್, ಇಮ್ರಾನ್ ಸೇರಿದಂತೆ ಇತರರು ಇದ್ದರು.

ಪೌರ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಖಾಯಂಗೊಳಿಸಬೇಕು, ಜೊತೆಗೆ ಸರ್ಕಾರಿ ನೌಕರರಿಗೆ ಸಿಗುವಂತಹ ಪ್ರತಿ ಸೌಲಭ್ಯವನ್ನು ಪೌರ ನೌಕರರಿಗೆ ನೀಡಬೇಕು. ತಮ್ಮ ಕರ್ತವ್ಯವನ್ನ ಇಂದು ಪೌರ ನೌಕರರ ಸ್ಥಗಿತಗೊಳಿಸಿ ಬೇಡಿಕೆ ಈಡೇರಿಕೆಗೆ ಮುಷ್ಕರ ಕೈಗೊಂಡಿದ್ದಾರೆ. ನೌಕರರ ಬೆಂಬಲಕ್ಕೆ ಪ.ಪಂ ಅಧಿಕಾರಿ ವರ್ಗ ನಿಂತಿದೆ. ಪೌರ ನೌಕರರನ್ನು ಸರ್ಕಾರ ಕಡೆಗಣಿಸದೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ಅನುಕೂಲ ಕಲ್ಪಿಸಬೇಕು.
– ವೇಣುಗೋಪಾಲ್, ಆರ್.ಐ ಪ.ಪಂ.
- ವರದಿ-ಶ್ರೀನಿವಾಸ್, ಕೊರಟಗೆರೆ