ಚಿಕ್ಕಮಗಳೂರು-ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಮಂತ್ರಿ ಸ್ಥಾನದಿಂದ ಅನರ್ಹಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಬಹುಜನ ಸಮಾಜ ಪಾರ್ಟಿ ಮುಖಂಡರುಗಳು ಶುಕ್ರವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಬಿ.ಎಸ್.ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ದೇಶವು ಸ್ವಾತಂತ್ರ್ಯಗೊಂಡು ಏಳುವರೆ ದಶಕಗಳು ಕಳೆದರೂ ಅಂಬೇಡ್ಕರ್ ತತ್ವ,ಸಿದ್ಧಾಂತಗಳಿಗೆ ಕೊಡಲಿಪೆಟ್ಟು ಹಾಕುತ್ತಿರುವುದು ನಾಚಿಕೇಡಿನ ಸಂಗತಿ.ಸಂವಿಧಾನ ನಡೆಯ ವಿರುದ್ಧ ಯಾರೇ ಧ್ವನಿಗೂಡಿಸಿದರೂ ಅಂಥವರ ಮೇಲೆ ಕ್ರಮ ವಹಿಸಬೇಕು ಎಂದರು.
ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಹೆಸರನ್ನು ಪದೇ ಪದೇ ಉಚ್ಚರಿಸುವ ಬದಲು ದೇವರನ್ನು ಸ್ಮರಿಸಿದ್ದರೆ ಏಳೇಳು ಜನ್ಮಗಳ ಸ್ವರ್ಗ ದೊರೆಯುತ್ತಿತ್ತು ಎಂದು ಹೇಳಿರುವ ಗೃಹಮಂತ್ರಿಗಳು ದೇಶದ ಇತಿಹಾಸ ಪುಟ ಒಮ್ಮೆ ಗಮನಿಸಿ ಎಂದು ಹೇಳಿದರು.
ರಾಷ್ಟ್ರದ ಬಹುಸಂಖ್ಯಾತ ಪರಿಶಿಷ್ಟ ಜಾತಿ,ಪಂಗಡ,ಹಿಂದುಳಿದ ವರ್ಗ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ವಿದ್ಯಾಭ್ಯಾಸ,ಆಸ್ತಿ ಹಾಗೂ ಅಧಿಕಾರದಿಂದ ವಂಚಿಸಿ ಮನುವಾದಿ ಮೇಲ್ವಾತಿಗೆ ಸೇರಿದ ಗೃಹಮಂತ್ರಿಗಳು,ಬಿಜೆಪಿ ಪಕ್ಷ ಹಾಗೂ ಆರ್‌ಎಸ್‌ಎಸ್ ಸಂಘಟನೆ ಸ್ವಾತಂತ್ರ್ಯ ಸಮಾನತೆಯ ಆಶಯಗಳನ್ನು ಎಂದು ಸಹಿಸಿಕೊಂಡಿಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯ ಅಥವಾ ದೇಶದಲ್ಲಿ ಅವಕಾಶ ದೊರಕಿದ ವೇಳೆಯಲ್ಲಿ ಅಂಬೇಡ್ಕರ್,ಸಂವಿಧಾನ ಮತ್ತು ಮೀಸಲಾತಿ ಕುರಿತು ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಹೀಗಾಗಿ ಮನುವಾದಿ, ಜಾತಿವಾದಿ ಅಮಿತ್ ಶಾ ಅವರು ಸಂವಿಧಾನದ ಆಧಾರದ ಮೇಲೆ ರಚನೆಯಾಗಿರುವ ಸರ್ಕಾರದಲ್ಲಿ ಮಂತ್ರಿಯಾಗಿ ಮುಂದುವರೆಯಲು ನೈತಿಕತೆಯಿಲ್ಲ ಎಂದು ತಿಳಿಸಿದರು.
ಆ ನಿಟ್ಟಿನಲ್ಲಿ ರಾಷ್ಟ್ರಪತಿಗಳು ಡಾ|| ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಮನಸ್ಥಿತಿ ಹೊಂದಿರುವ ಕೇಂದ್ರ ಗೃಹಸಚಿವರನ್ನು ತಕ್ಷಣವೇ ಮಂತ್ರಿ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಕಾರ್ಯದರ್ಶಿ ಕೆ.ಬಿ. ಸುಧಾ, ಲೋಕಸಭಾ ಕ್ಷೇತ್ರ ಸಂಯೋಜಕ ಕೆ.ಆರ್.ಗಂಗಾಧರ್, ಜಿಲ್ಲಾ ಸಂಯೋಜಕ ಯು.ಬಿ.ಮಂಜಮ್ಮ, ಉಪಾಧ್ಯಕ್ಷರಾದ ಕೆ.ಎಸ್.ಮಂಜುಳಾ, ಬಾಬು, ಕಾರ್ಯದರ್ಶಿ ಡಿ.ಪುಟ್ಟಸ್ವಾಮಿ, ಖಜಾಂಚಿ ವಾಹೀದ್ ಜಾನ್, ಮುಖಂಡರುಗಳಾದ ಹೆಚ್.ಕುಮಾರ್, ವಸಂತ್‌ಕುಮಾರ್, ಹೊನ್ನಪ್ಪ, ವಿಜಯ್‌ಕುಮಾರ್, ಇದ್ದರು.
———-—ಸುರೇಶ್