ಚಿಕ್ಕಮಗಳೂರು-ಸರಳವಾದ ಬದುಕು, ಉದಾತ್ತವಾದ ಚಿಂತನೆ, ಸಾಮಾನ್ಯರ ನಡುವೆಯೇ ಸಾಮಾನ್ಯರಂತೆ ಬೆರೆತು ಸ್ಪಂದಿಸುವ ಮೂಲಕ ಶೋಷಿತರ ಪರವಾಗಿ ನಿಂತು ಬದುಕಿನ ಕತ್ತಲನ್ನು ಹೋಗಲಾಡಿಸಿದವರು ಬಿ.ಕೆ.ಸುಂದರೇಶ್ ಎಂದು ಸಾಮಾಜಿಕ ಚಿಂತಕ ಡಿ.ಎಂ.ಮoಜುನಾಥಸ್ವಾಮಿ ಹೇಳಿದರು.
ನಗರದ ಮಾರ್ಕೆಟ್ ರಸ್ತೆ ಸಮೀಪ ಬಿ.ಕೆ.ಸುಂದರೇಶ್ ಆಟೋ ನಿಲ್ದಾಣದಲ್ಲಿ ಏರ್ಪಡಿಸಿದ್ಧ ದಿ|| ಬಿ.ಕೆ. ಸುಂದರೇಶ್ ಪುಣ್ಯಸ್ಮರಣೆ ಪ್ರಯುಕ್ತ ಮೌನಾಚರಿಸಿ ಹಾಗೂ ಕ್ಯಾಂಡಲ್ ಹಂಚುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿ ಈಚೆಗೆ ಅವರು ಮಾತನಾಡಿದರು.
ಸಮತಲದ ನೆಲೆಯಲ್ಲಿ ಸಮ ಸಮಾಜದ ಕನಸನ್ನು ಕಾಣುತ್ತಾ, ಆ ಕನಸಿನ ಅನುಷ್ಠಾನದೊಂದಿಗೆ ಸಾಗುತ್ತಿದ್ದ ಬಿಕೆಎಸ್ ಅಕಾಲಿಕವಾಗಿ ದುರ್ಮರಣಕ್ಕಿಡಾಗಿ ತನ್ನ 37ನೇ ವಯಸ್ಸಿಗೆ ಮೃತರಾದರೂ ದೈಹಿಕವಾಗಿ ಜನಸಾಮಾನ್ಯರಲ್ಲಿ ಉಳಿದಿದ್ದಾರೆ ಎಂದು ಹೇಳಿದರು.
ಬಿಕೆಎಸ್‌ರವರು ಸಮಾಜಕ್ಕೆ ಕೊಟ್ಟು ಹೋದ ಬಳುವಳಿಗಳನ್ನು ಜಿಲ್ಲೆಯ ಎಷ್ಟು ಜನ ಅರ್ಥ ಮಾಡಿಕೊಂಡಿದ್ದಾರೋ ತಿಳಿದಿಲ್ಲ. ಆದರೆ ಅವರ ಸಮಾಜಮುಖಿ ಕೊಡುಗೆಗಳನ್ನು ಸ್ಮರಿಸುತ್ತಾ, ಬಿಕೆಎಸ್ ಚಿತ್ರಪಟವನ್ನು ಅದೆಷ್ಟೋ ಸಾಮಾನ್ಯ ಕುಟುಂಬಗಳು ಇಂದಿಗೂ ಮನೆ, ಮನದಲ್ಲಿ ಇರಿಸಿ ಪ್ರತಿದಿನ ಸ್ಮರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ದ್ವೇಷ ಬಿಟ್ಟು ದೇಶ ಕಟ್ಟು ಎಂಬ ಸಿದ್ಧಾಂತದ ರಾಜಕಾರಣ ಮಾಡಿದ ಅಪರೂಪದ ವ್ಯಕ್ತಿ ಬಿಕೆಎಸ್.ಸದಾ ಕ್ರಿಯಾಶೀಲವಾಗಿ ಸಮಾಜಮು ಖಿಯಾಗಿ ಮಿಡಿಯುತ್ತಿದ್ದ ಜನಮುಖಿ ಹೋರಾಟಗಾರರು.ನಮ್ಮನ್ನೆಲ್ಲ ಭೌತಿಕವಾಗಿ ಆಗಲಿ ಸದ್ದಿಲ್ಲದೆ ಸರಿದು ಹೋಗಿ 30 ವರ್ಷಗಳೇ ಕಳೆದಿವೆ ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಷ್ಡಾನದ ಅಧ್ಯಕ್ಷ ದಯಾನಂದ್ ಮಾತನಾಡಿ, ಸಮ ಸಮಾಜ ನಿರ್ಮಿಸುವ ಹಾಗೂ ಬಡವರ ಮೂಲಭೂತ ಹಕ್ಕಿಗಾಗಿ ಬದುಕನ್ನೇ ಸಮಾಜಕ್ಕೆ ತ್ಯಾಗಗೈದ ಮಹಾನಾಯಕ ಬಿ.ಕೆ.ಸುಂದರೇಶ್. ಅವರು ಅಗಲಿದ ಬಳಿಕ ಪತ್ನಿ ರಾಧಾ ಸುಂದ್ರೇಶ್ ಕೂಡಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಶೋಷಿತರ ಪರವಾಗಿ ನಿಂತಿರುವುದು ಹೆಮ್ಮೆಯ ಸಂಗತಿ ಎಂದರು.
ಆಟೋ ಸಂಘದ ಅಧ್ಯಕ್ಷ ನಿಸಾರ್ ಅಹ್ಮದ್ ಮಾತನಾಡಿ, ಎಲ್ಲಾ ಜಾತಿ, ಧರ್ಮಗಳು ಒಂದೇ, ಸಮಾಜದಲ್ಲಿ ಪ್ರತಿಯೊಬ್ಬರು ನಾಡಿನ ಮಕ್ಕಳೆಂಬ ಪರಿಕಲ್ಪನೆ ಹೊಂದಿದ್ದ ಬಿ.ಕೆ.ಎಸ್.ರವರು ಅಲ್ಪಾಯುಷ್ಯನಲ್ಲೇ ಅಗಲಿರುವುದು ಶೋಷಿತರ ಪಾಲಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಸಿಯೂಟ ಸಂಘದ ಅಧ್ಯಕ್ಷ ಜಿ.ರಘು, ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಪೂರ್ಣೇಶ್, ಮುಖಂಡರುಗಾಳದ ಕೆಸವಿಮನೆ ಬೈರೇಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಕೆ.ಆರ್. ನಂಜೇಗೌಡ, ಸತ್ಯನಾರಾಯಣ್, ಆಟೋಸಂಘದ ಅಲ್ತಾಫ್, ಇಕ್ಬಾಲ್ ಅಹ್ಮದ್, ಜಮೀರ್, ಅಬ್ರಾರ್, ಸಲೀo ಮತ್ತಿತರರಿದ್ದರು.
————-ಸುರೇಶ್