ಚಿಕ್ಕಮಗಳೂರು-ಪ್ರೌಢಾವಸ್ಥೆಯ ಮಹಿಳೆ ಕುಟುಂಬದ ಆಧಾರಸ್ತಂಭ.ಆಕೆ ಆರೋಗ್ಯವಾಗಿದ್ದರೆ ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸಿರುತ್ತದೆ ಎಂದು ಆಯುರ್ವೇದ ಯೋಗತಜ್ಞೆ ಡಾ,ಗೌರಿ ವರುಣ್ ಅಭಿಪ್ರಾಯಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ಎಂ.ಜಿ.ರಸ್ತೆ ಮತ್ತು ಮಧುವನ ಬಡಾವಣೆ ಸದಸ್ಯರನ್ನೊಳಗೊಂಡ ಶರಣೆ ಮೋಳಿಗೆ ಮಹಾದೇವಿ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ನಿನ್ನೆ ಸೋಮವಾರ ಸಂಜೆ ಆಯೋಜಿಸಿದ್ದ ‘ಬನದ ಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯ, ಯೌವನ, ಪ್ರೌಡಾವಸ್ಥೆ, ಮುಪ್ಪು ನಾಲ್ಕು ಘಟ್ಟಗಳಲ್ಲಿ ಪ್ರೌಡಾವಸ್ಥೆ ಪ್ರಮುಖ.ಮಕ್ಕಳು, ಪತಿ, ವೃದ್ಧಾಪ್ಯದ ಅತ್ತೆ-ಮಾವ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರ ಆಗುಹೋಗುಗಳ ಬಗ್ಗೆ ಗಮನಹರಿಸಬೇಕಾದ ಅನಿವಾರ್ಯತೆ ಯಜಮಾನಿಗೆ ಇರುತ್ತದೆ.ಒತ್ತಡ-ಆತಂಕ ಮಾಡಿ ಕೊಂಡರೆ ಆರೋಗ್ಯಕ್ಕೆ ಮಾರಕ ಎಂದವರು ಎಚ್ಚರಿಸಿದರು.
ರಾಸಾಯನಿಕ ವಸ್ತುಗಳು ಹೆಚ್ಚಾಗಿರುವ ಸೋಪು,ಪೌಡರ್,ಶ್ಯಾಂಪೂ, ಬಟ್ಟೆಗಳೂ ಸೇರಿದಂತೆ ಅತಿಯಾದ ಸೌಂದರ್ಯವರ್ಧಕಗಳ ಬಳಕೆಯಿಂದ ಮಹಿಳೆಯರ ಹಾರ್ಮೋನ್‌ಗಳ ಮೇಲೆ ವ್ಯತಿರಿತ್ಯ ಪರಿಣಾಮ ಬೀರುತ್ತದೆ.ಬ್ರೆಸ್ಟ್ -ಗರ್ಭಕೋಶದ ಕ್ಯಾನ್ಸರ್ ಮಹಿಳೆಯರಿಗೆ ಬರುವ ಸಾಧ್ಯತೆ ಗಳಿವೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ.ಗೌರಿ ಸಲಹೆ ಮಾಡಿದರು.
ಪ್ರತಿನಿತ್ಯ ಅರ್ಧತಾಸು ಯೋಗ, ಒಂದಷ್ಟು ನಡಿಗೆ, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯ ಕಾಪಾಡಿ ಕೊಳ್ಳಬಹುದು. ಪ್ರೌಷ್ಠಿ ಕಾಂಶಗಳನ್ನೊಳಗೊoಡ ಆಹಾರ ಸೇವನೆ ಅತ್ಯಗತ್ಯ. ಋತುಚಕ್ರ ವ್ಯತ್ಯಯದ ಸಮಯದಲ್ಲಿ ಹಾರ್ಮೋನ್‌ಗಳ ಕಾರ್ಯ ವಿಧಾನದಲ್ಲಿ ಬದಲಾವಣೆ ಸಹಜ. ನಿದ್ರಾಹೀನತೆ, ಸಿಡುಕುತನ, ಬೆವರುವಿಕೆ, ಆಯಾಸ ಸಾಮಾನ್ಯ ಲಕ್ಷಣಗಳು.ಹೃದಯಾಘಾತ ಸೇರಿದಂತೆ ಅನೇಕ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಅಧಿಕ. ವಾಸ್ತವವಾಗಿ ಋತುಚಕ್ರ ಮಹಿಳೆಯರಿಗೆ ರಕ್ಷಣಾ ಕೊಡೆಯಂತೆ ಕಾರ್ಯ ನಿರ್ವಹಿಸುತ್ತದೆ. ಬದಲಾವಣೆಯನ್ನು ಅರ್ಥಮಾಡಿಕೊಂಡು ಜೀವನಶೈಲಿ ಸುಧಾರಿಸಿಕೊಂಡರೆ ಒಳಿತು ಎಂದರು.
ಆಹಾರದಲ್ಲಿ ಅನ್ನಕ್ಕಿಂತ ಹಣ್ಣು, ತರಕಾರಿ, ಮೊಳಕೆಕಾಳು, ಹಾಲು, ಗಟ್ಟಿಮೊಸರು, ತುಪ್ಪ ಸೇರಿದಂತೆ ನ್ಯೂಟ್ರಿಷನ್ ಅಧಿಕ ಸೇವನೆ ಅಗತ್ಯ. ಚನ್ನಾಗಿ ನಿದ್ದೆ ಮಾಡಬೇಕು. ಸರಿಯಾದ ಕಾಲದಲ್ಲಿ ಊಟ, ತಿಂಡಿ ಅಗತ್ಯ ಎಂದ ಡಾ.ಗೌರಿ, ನಮ್ಮಿಂದಲೇ ಮನೆಯ ನೆಮ್ಮದಿ ಶಾಂತಿ ಸಂತೋಷ ಎಂಬುದನ್ನು ಅರ್ಥಮಾಡಿಕೊಂಡು ವರ್ತಿಸಬೇಕೆಂದರು.
ಅಕ್ಕಮಹಾದೇವಿ ಮಹಿಳಾಸಂಘದ ಅಧ್ಯಕ್ಷೆ ಯಮುನಾಸಿ.ಶೆಟ್ಟಿ ಬನದ ಹುಣ್ಣಿಮೆಯ ಪ್ರಾಮುಖ್ಯತೆ ಕುರಿತಂತೆ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇದೊಂದು ದೊಡ್ಡಹಬ್ಬ. ಬನಶಂಕರಿ ದೇವಿಯನ್ನು ಪ್ರಮುಖವಾಗಿ ಆರಾಧಿಸಲಾಗುತ್ತಿದೆ.ಮಾತೃ ಪ್ರಧಾನವಾದ ಆಚರಣೆ ಸಂತೋಷ-ಸoಭ್ರಮವನ್ನು ಸಮಾಜದಲ್ಲಿ ಹೆಚ್ಚುಸುತ್ತದೆ ಎಂದರು.
ತoಡದ ಮುಖಂಡೆ ವೀಣಾವಿಶ್ವನಾಥ್ ಪ್ರಾಸ್ತಾವಿಸಿ ಮೂರುವರ್ಷ ಅವಧಿಯ ಕಾರ್ಯಕ್ರಮ ತೃಪ್ತಿ ತಂದಿದೆ ಎಂದು ಸದಸ್ಯರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಸದಸ್ಯರುಗಳಾದ ಸುಧಾಶೇಖರ್ ಸ್ವಾಗತಿಸಿ, ಗೀತಾಬಾಲಿ ವಂದಿಸಿದರು. ಸುಜಾತಾ ಜಗದೀಶ್ ಮತ್ತು ಶರ್ಮಿಳಾ ಅಶೋಕ ಪ್ರಾರ್ಥಿಸಿದರು, ಉಷಾ ನಿರೂಪಿಸಿ. ಉಮಾ ಅತಿಥಿ ಪರಿಚಯಿಸಿದರು. ಸರೋಜಮ್ಮ ಮತ್ತು ಶಾಂತವಾಣಿ ತಂಡ ನಾಡಗೀತೆ ಹಾಡಿದರು.ಮೊಬೈಲ್ ಅವಲಂಬನೆ ಕುರಿತ ಲತಾ ಮುರಿಗೇಶ್‌ರ ವಿಡಂಬನ ಗೀತೆ ಗಮನಸೆಳೆಯಿತು .
ಕಾರ್ಯದರ್ಶಿ ರೇಖಾಉಮಾಶಂಕರ್, ಖಜಾಂಚಿ ಭಾರತಿಶಿವರುದ್ರಪ್ಪ, ಸಹಕಾರ್ಯದರ್ಶಿ ನಾಗಮಣಿಕುಮಾರ್, ಹೇಮಾಲತಾ ವೇದಿಕೆಯಲ್ಲಿದ್ದರು.
ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ವೀಣಾ ವಿಶ್ವನಾಥ್ ಬಹುಮಾನ ವಿತರಿಸಿದರು.ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು.