ಚಿಕ್ಕಮಗಳೂರು:ಬಸವ ಮಂದಿರ ಬಸವತತ್ವ ಪೀಠ-ಶಿವಾನುಭವ ಗೋಷ್ಠಿ-ಕಲ್ಯಾಣ ದಿನದರ್ಶಿನಿ ಬಿಡುಗಡೆ

ಚಿಕ್ಕಮಗಳೂರು:ವಿಶ್ವಗುರು ಬಸವಣ್ಣ ಹಾಗೂ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿದಾಗ ಅವರ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಕಲ್ಯಾಣ ನಗರದ ಬಸವಮಂದಿರ ಬಸವತತ್ವ ಪೀಠದಲ್ಲಿ ಶಿವಾನುಭವ ಗೋಷ್ಠಿ-41 ಶಿವಶರಣ ಮಾಧಾರ ಚನ್ನಯ್ಯನವರ ಸ್ಮರಣೆ ಕಾರ್ಯಕ್ರಮದಲ್ಲಿ ಕಲ್ಯಾಣ ದಿನದರ್ಶಿನಿ ಬಿಡುಗಡೆ ಮಾಡಿ ಮಾತನಾಡಿದರು.

ಯುವಪೀಳಿಗೆ ಈ ಇಬ್ಬರು ದಾರ್ಶನಿಕರ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ಸಂಸ್ಕಾರ ಮತ್ತು ಜೀವನದ ಬದುಕನ್ನು ಕಲಿಸುವ ಅಗತ್ಯ ಇಲ್ಲ, ಇವರ ವಿಚಾರಧಾರೆಗಳನ್ನು ದಿನಕ್ಕೊಂಡು ಪುಟ ಓದಿದರೆ ಸಾಕು ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತಾರೆ ಎಂದು ಹೇಳಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ ವಚನ ‘ಕಾಯಕವೇ ಕೈಲಾಸ’ ಎಂಬ ನುಡಿ ಅಂದಿಗೂ ಇಂದಿಗೂ ಪ್ರಸ್ತುತ ಎಂದ ಅವರು, ಡಿ.5 ರಂದು ಮರುಳಸಿದ್ದ ಸ್ವಾಮೀಜಿಗಳಿಗೆ ಶಿವಮೊಗ್ಗದಲ್ಲಿ ಚಿನ್ಮಯಾನುಗ್ರಹ ದೀಕ್ಷೆ ನೀಡಿರುವುದು ಮಠದ ಭಕ್ತರು ನಿತ್ಯ ಕಾಯಕ ಜೀವಿಗಳಾಗಲು ಪ್ರೇರೇಪಿವೆ ಎಂದರು.

ಮಾರ್ಚ್ 1 ರಂದು ಬಸವ ಮಂದಿರದ ನೂತನ ಕಟ್ಟಡ 5 ಜಗದ್ಗುರುಗಳಿಂದ ಉದ್ಘಾಟನೆಯಾ ಗುತ್ತಿದ್ದು, ಈ ಸಂದರ್ಭದಲ್ಲಿ ಮಠದ ಸದ್ಭಕ್ತರು ಫೆ.28 ರಿಂದಲೇ ಮಠದ ಎಲ್ಲಾ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಮಠದಲ್ಲಿ ಈ ರೀತಿಯ ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಭಕ್ತರನ್ನು ಜಾಗೃತಗೊಳಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಸರ್ವೋದಯ ಹರಿಕಾರ ವಿಶ್ವಗುರು ಬಸವಣ್ಣ ಈ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಐಸಿರಿ ಪತ್ರಿಕೆ ಸಂಪಾದಕ ಹಾಗೂ ಕಾನೂನು ವಿದ್ಯಾರ್ಥಿ ರೋಹನ್ ಭಾರ್ಗವಪುರಿ, ಕನ್ನಡ ನಾಡು-ನುಡಿಯನ್ನು ಶ್ರೀಮಂತಗೊಳಿಸಲು ಶರಣ ಪರಂಪರೆ ತನ್ನ ಅಮೂಲ್ಯವಾದ ಕೊಡುಗೆಗಳನ್ನು ನೀಡಿದೆ ಎಂದರು.

ಅನುಭವ ಮಂಟಪದ ಮೂಲಕ ರೂಪು ತಳೆದ ಕಾಯಕ, ದಾಸೋಹ, ಶಿವಯೋಗ ಮುಂತಾದವುಗಳು ಶರಣ ಪರಂಪರೆಯ ಉತ್ಕೃಷ್ಟ ಕೊಡುಗೆಗಳಾಗಿವೆ. ಈ ಪರಿಕಲ್ಪನೆಗಳು ಭಾರತೀಯ ಪರಂಪರೆಯ ಹಲವು ಸಮಾಜೋ ಧಾರ್ಮಿಕ ಧಾರೆಗಳಿಗೆ ಪ್ರೇರಣೆ ಒದಗಿಸಿವೆ ಎಂದು ವಿಶ್ಲೇಷಿಸಿದರು.

ಇಂದಿಗೂ ಯಾವುದೇ ಧಾರ್ಮಿಕ-ಸಾಮಾಜಿಕ ಕೇಂದ್ರಗಳಲ್ಲಿ ಅನ್ನ, ಅಕ್ಷರ, ವಸತಿಯನ್ನು ಉಚಿತವಾಗಿ ಅಬಲರಿಗೆ ನೀಡುತ್ತಿದ್ದಾರೆಂದರೆ ಶರಣ ಪರಂಪರೆಯ ಈ ಮೌಲ್ಯಗಳ ಪ್ರೇರಣೆಯೇ ಅದಕ್ಕೆ ಕಾರಣವೆಂದರೆ ಅತಿಶಯೋಕ್ತಿಯೇನಲ್ಲ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳು ವಹಿಸಿ ಆಶೀರ್ವಚನ ನೀಡಿದರು.

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ಬಿ.ಬಿ. ಚನ್ನಬಸವೇಗೌಡ, ಎಂ.ಎಸ್. ನಿರಂಜನ್, ನಿವೃತ್ತ ಆಯುಕ್ತ ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?