ಚಿಕ್ಕಮಗಳೂರು-ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಸಾಕಷ್ಟು ಅನುದಾನ ನೀಡಿದರೆ, ಮಾನವ ಕನಿಷ್ಟ ರಕ್ತದಾನ ಮೂಲಕ ಅಮೂಲ್ಯವಾದ ಜೀವ ಉಳಿಸಿ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭೂಮಿಕಾ ಸಂಸ್ಥೆ ವಾರ್ಷಿಕೋತ್ಸವ ಪ್ರಯುಕ್ತ ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತ್ಸೋತ್ಸವ ಅಂಗವಾಗಿ ಅಭ್ಯುದಯ-2025 ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮನುಷ್ಯನಿಗೆ ಆರೋಗ್ಯ ಎಂಬುದು ಸಂಪತ್ತಿಗಿoತ ಅತಿಮುಖ್ಯ. ನಿಯಮಿತ ಆಹಾರ, ವ್ಯಾಯಮದಿಂದ ಆರೋಗ್ಯಪೂರ್ಣ ಶರೀರವನ್ನು ಕಾಪಾಡಿಕೊಳ್ಳಬೇಕು. ಅಲ್ಲದೇ ತುರ್ತು ವೇಳೆ ರೋಗಿಗಳಿಗೆ ರಕ್ತದಾನ ಮೂಲಕ ನಾವೆಲ್ಲರೂ ಒಂದು, ಬಂಧುಗಳೆoದು ಅರಿತಾಗ ಮಾತ್ರ ಸ್ವಾಸ್ತ್ಯ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿದ್ಯಾರ್ಥಿದೆಸೆಯಲ್ಲೇ ಮೈಮರೆತರೆ ಸಂಕಲ್ಪದ ದಾರಿಯಲ್ಲಿ ಮುನ್ನೆಡೆಯಲು ಸಾಧ್ಯವಿಲ್ಲ. ಅದರಂತೆ ಸಮಯಕ್ಕೆ ಸರಿಯಾಗಿ ರಕ್ತದಾನಕ್ಕೆ ಮುಂದಾಗದಿದ್ದಲ್ಲಿ ಮನುಷ್ಯನ ಪ್ರಾಣಕ್ಕೆ ಕುತ್ತು ಸಂಭವಿಸಲಿದೆ. ಆ ನಿಟ್ಟಿನಲ್ಲಿ ಯುವಕರು ತುರ್ತು ವೇಳೆಯಲ್ಲಿ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಪ್ರಸ್ತುತ ಮಾನವ ದುಡಿಮೆ ಹಾಗೂ ವೈಯಕ್ತಿಕ ಜೀವನಕ್ಕೆ ಆದ್ಯತೆ ಕೊಟ್ಟಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ಒಂದಿಷ್ಟು ದುಡಿಮೆಯನ್ನು ಸಮಾಜಕ್ಕಾಗಿ ಮುಡಿಪಿಟ್ಟರೆ ನೆಮ್ಮದಿ ಬದುಕು ಕಂಡುಕೊಳ್ಳಲು ಸಾಧ್ಯ ಎಂದ ಅವರು ಎಲ್ಲರೂ ಒಂದಾಗಿ ಆರೋಗ್ಯಪೂರ್ಣ ಸಮಾಜಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಭೂಮಿಕಾ ಸಂಸ್ಥೆ ಸಂಸ್ಥಾಪಕ ಅನಿಲ್ ಆನಂದ್ ಮಾತನಾಡಿ, ಪ್ರತಿನಿತ್ಯದ ಬದುಕಿನಲ್ಲಿ ಜೀವಿಸುವ ನಾವುಗಳು ಸಾಮಾಜಿಕ ಕಾರ್ಯಗಳ ಮುಖಾಂತರ ಸ್ಪಂದಿಸಬೇಕು. ಆ ನಿಟ್ಟಿನಲ್ಲಿ ದೇಹದಾನ ಮತ್ತು ನೇತ್ರದಾನ ದಂಥ ದೊಡ್ಡ ಕಾರ್ಯದಲ್ಲಿ ತೊಡಗಿದರೆ ಸಾವಿನ ನಂತರವು ಮತ್ತೊಬ್ಬರ ಬಾಳಿಗೆ ಬೆಳಕಾಗಬಹುದು ಎಂದು ತಿಳಿಸಿದರು.
ಇದೇ ವೇಳೆ ಶಿಬಿರದಲ್ಲಿ 250 ಹೆಚ್ಚು ಮಂದಿ ಆರೋಗ್ಯ ತಪಾಸಣೆ ನಡೆಸಿದರು. ನೇತ್ರ ತಪಾಸಣೆಯಲ್ಲಿ 50 ಮಂದಿಗೆ ಕನ್ನಡಕ ವಿತರಿಸುವ ಭರವಸೆ ನೀಡಲಾಯಿತು. ದೇಹದಾನಕ್ಕೆ 8 ಮಂದಿ ಹಾಗೂ ನೇತ್ರದಾನಕ್ಕೆ 22ಮಂದಿ ನೋಂದಣಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಡಾ.ಮೋಹನ್ ಕುಮಾರ್, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಆಶಾಕಿರಣ ಅಂಧಮಕ್ಕಳ ಶಾಲೆ ಸಂ ಸ್ಥಾಪಕ ಜೆ.ಪಿ.ಕೃಷ್ಣೇಗೌಡ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸೀಮಾ, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಮುರಳಿಧರ್ ಮತ್ತಿತರರಿದ್ದರು.
——-—–ಸುರೇಶ್