ಚಿಕ್ಕಮಗಳೂರು-ಬುದ್ಧ ಗಯಾ-ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ನೀಡಬೇಕು-ಬಿ.ಎಸ್.ಪಿ ಪದಾಧಿಕಾರಿಗಳಿಂದ ರಾಷ್ಟ್ರಪತಿಗಳಿಗೆ ಮನವಿ

ಚಿಕ್ಕಮಗಳೂರು-ಬುದ್ಧ ಗಯಾದ ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ನೀಡಬೇಕು ಎಂದು ಆಗ್ರಹಿಸಿ ಇಂಟರ್‌ನ್ಯಾಷನಲ್ ಬುದ್ದಿಸ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ ಹಾಗೂ ಭೀಮಾ ಕೋರೆಗಾಂವ ಸಮಿತಿ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ನಾರಾಯಣಕನಕರಡ್ಡಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಬಿಹಾರದ ರಾಜ್ಯದ ಬುದ್ದಗಯಾ ಜಗತ್ತಿನ ಎಲ್ಲಾ ಬೌದ್ಧರಿಗೆ ಪವಿತ್ರವಾದ ಸ್ಥಳ. ಕ್ರಿ.ಪೂ 6ನೇ ಶತಮಾನದಲ್ಲಿ ರಾಜಕುಮಾರ ಸಿದ್ಧಾರ್ಥ ಗೌತಮ 35ನೇ ವಯಸ್ಸಿನಲ್ಲಿ ಜ್ಞಾನೋದಯ ಪಡೆದು ಭಗವಾನ್ ಬುದ್ಧರಾದ ಕಾರಣಕ್ಕಾಗಿ ಅದು ಪವಿತ್ರ ಸ್ಥಳ ಹಾಗೂ ಪೂಜನೀಯವಾಗಿದೆ ಎಂದರು.

ಮೌರ್ಯ ಸಾಮ್ರಾಜ್ಯದ ದೊರೆ ಅಶೋಕ ಈ ಮಹಾವಿಹಾರವನ್ನು ಕಟ್ಟಿಸಿದ ಕಾಲದಿಂದಲೂ ಅನೇಕ ರಾಜಮಹಾರಾಜರು ಮತ್ತು ಬರ್ಮ, ಶ್ರೀಲಂಕಾ, ಥೈಲ್ಯಾಂಡ್, ಜಪಾನ್ ಕೋರಿಯಾ, ಕಾಂಬೋಡಿಯಾ, ತೈವಾನ, ಭೂತಾನ್, ಚೈನ, ಮಯನ್ಮಾರ್ ಮುಂತಾದ ದೇಶಗಳು ಈ ಮಹಾವಿಹಾರಕ್ಕೆ ತನ್ನದೇ ಧಾರ್ಮಿಕ ಕೊಡುಗೆಗಳನ್ನು ನೀಡಿವೆ ಎಂದು ಹೇಳಿದರು.

ಭಾರತದಲ್ಲಿ ಬೌದ್ಧಧರ್ಮ ಕ್ಷೀಣಿಸುತ್ತಿದ್ದ ವೇಳೆಯಲ್ಲಿ ಹಿಂದೂಗಳು ಈ ಮಹಾವಿಹಾರವನ್ನು ವಶಪಡಿಸಿಕೊಂಡು ಹಿಂದೂಮೂರ್ತಿಗಳನ್ನಿಟ್ಟು ಬೌದ್ಧ ಸಂಸ್ಕೃತಿಯನ್ನು ನಾಶಮಾಡಲಾಗಿದೆ. ಶ್ರೀಲಂಕಾದ ಬೌದ್ಧ ಉಪನ್ಯಾಸಕರು ಬೌದ್ಧಗಯಾ ಮಹಾವಿಹಾರದ ಬಿಡುಗಡೆಗಾಗಿ ಜಾಗತಿಕ ಮಟ್ಟದಲ್ಲಿ ಹೋರಾಟವನ್ನು ನಡೆಸಿದ್ದರು ಎಂದು ತಿಳಿಸಿದರು.

ಮಹಾಬೋಧಿ ಮಹಾವಿಹಾರದ ಅಭಿವೃದ್ದಿ ಮತ್ತು ನಿರ್ವಹಣೆಗಾಗಿ ಬಿಹಾರ ಸರ್ಕಾರ ಬೋಧಗಯಾ ದೇವಾಲಯ ಆಕ್ಟ್ 1949 ಎಂಬ ಕಾಯ್ದೆಯನ್ನು ಜಾರಿಗೆ ತಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 4 ಜನ ಬೌದ್ಧರು, ಹಿಂದೂಗಳ ಕಮಿಟಿ ರಚಿಸಿ ಬೌದ್ಧರಿಗೆ ಅನ್ಯಾಯವೆಸಗಿದೆ. ಸಂವಿಧಾನ ಜಾರಿಯಾದ ಮೇಲೆ ಈ ಕಾನೂನು ಸಂವಿಧಾನದ ಕಲಂ 3ರ ಪ್ರಕಾರ ರದ್ದಾಗದೆ ಮುಂದುವರೆದು ಉಲ್ಲಂಘಿಸಲಾಗಿದೆ ಎಂದರು.

ಟ್ರಸ್ಟ್ ಸದಸ್ಯ ಪ್ರೇಮ್‌ಕುಮಾರ್ ಮಾತನಾಡಿ, ಭಾರತದ ಸಂವಿಧಾನ ಪ್ರಕಾರ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳ ಆಳಿತವನ್ನು ಆಯಾ ಧರ್ಮದವರೇ ನಿರ್ವಹಿಸುತ್ತಿದ್ದಾರೆ. ಆದರೆ ಬೌದ್ಧರಿಗೆ ದೇವಾಲಯ ನಿರ್ವಹಣೆ ಮಾಡಲು ಅಧಿಕಾರವಿಲ್ಲ. ಭಗವಾನ್ ಬುದ್ಧರು ಜ್ಞಾನೋದಯದ ಪುಣ್ಯಸ್ಥಳ ಬೌದ್ಧರಿಗೆ ಸೇರಿದ್ದು ಧಾರ್ಮಿಕ ಹಕ್ಕನ್ನು ಸಂವಿಧಾನ ಅನುಸಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ಜಾರಿಯಲ್ಲಿರುವ ಬಿಟಿ ಆಕ್ಟ್ ರದ್ದುಪಡಿಸಿ ಸಂವಿಧಾನದ ಕಲಂನಡಿ ಜಾರಿಗೊಳಿಸಲು ಹಾಗೂ ಮಹಾಬೋಧಿ ವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು. ಅಲ್ಲದೇ ದೇಶಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿ, ರಾಷ್ಟ್ರಪತಿ ಹಾಗೂ ಬಿಹಾರದ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ಟ್ರಸ್ಟ್ ಸದಸ್ಯರುಗಳಾದ ರವಿ, ಪುನೀತ್, ಪ್ರವೀಣ್, ನಂದನ್, ಧನು, ಚಂದ್ರಶೇಖರ್, ಕೀರ್ತಿ, ಸತೀಶ್, ರೋಜಿತ್, ಜಾನಕಿರಾಜು, ಮಧು ಮತ್ತಿತರರಿದ್ದರು.

———————ಸುರೇಶ್

Leave a Reply

Your email address will not be published. Required fields are marked *

× How can I help you?